ಕಾಮನ್‌ವೆಲ್ತ್‌ ಗೇಮ್ಸ್‌: ಟೇಬಲ್‌ ಟೆನಿಸ್‌ ಮಹಿಳಾ ತಂಡದ ಪಟ್ಟಿ ರವಾನಿಸದಂತೆ ಟಿಟಿಎಫ್‌ಐಗೆ ಹೈಕೋರ್ಟ್‌ ಮಧ್ಯಂತರ ಆದೇಶ

ಬೆಂಗಳೂರಿನವರಾದ ಖ್ಯಾತ ಟೆನಿಸ್‌ ಆಟಗಾರ್ತಿ ಅರ್ಚನಾ ಕಾಮತ್‌ ಅವರು 2022ರ ಜೂನ್‌ 6ರಂದು ಟಿಟಿಎಫ್ಐ ಮಾಡಿರುವ ಶಿಫಾರಸ್ಸನ್ನು ಪ್ರಶ್ನಿಸಿ ಹಾಗೂ ಮಹಿಳಾ ತಂಡದಿಂದ ತಮ್ಮನ್ನು ಕೈಬಿಟ್ಟಿರುವುದಕ್ಕೆ ಆಕ್ಷೇಪಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
ಕಾಮನ್‌ವೆಲ್ತ್‌ ಗೇಮ್ಸ್‌: ಟೇಬಲ್‌ ಟೆನಿಸ್‌ ಮಹಿಳಾ ತಂಡದ ಪಟ್ಟಿ ರವಾನಿಸದಂತೆ ಟಿಟಿಎಫ್‌ಐಗೆ ಹೈಕೋರ್ಟ್‌ ಮಧ್ಯಂತರ ಆದೇಶ
Table Tennis player Archana Kamath and Karnataka HC

ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌-2022ಕ್ಕೆ ಭಾರತದ ಟೇಬಲ್‌ ಟೆನಿಸ್‌ ಮಹಿಳಾ ತಂಡದ ಆಯ್ಕೆ ಪಟ್ಟಿಯನ್ನು ಮುಂದಿನ ವಿಚಾರಣೆಯವರೆಗೆ ರವಾನಿಸದಂತೆ ಭಾರತೀಯ ಟೇಬಲ್‌ ಟೆನಿಸ್‌ ಒಕ್ಕೂಟಕ್ಕೆ (ಟಿಟಿಎಫ್‌ಐ) ಕರ್ನಾಟಕ ಹೈಕೋರ್ಟ್‌ ಗುರುವಾರ ಮಧ್ಯಂತರ ಆದೇಶ ನೀಡಿದೆ.

ಬೆಂಗಳೂರಿನವರಾದ ಖ್ಯಾತ ಟೆನಿಸ್‌ ಆಟಗಾರ್ತಿ ಅರ್ಚನಾ ಕಾಮತ್‌ ಅವರು 2022ರ ಜೂನ್‌ 6ರಂದು ಟಿಟಿಎಫ್ಐ ಮಾಡಿರುವ ಶಿಫಾರಸ್ಸನ್ನು ಪ್ರಶ್ನಿಸಿ ಹಾಗೂ ಮಹಿಳಾ ತಂಡದಿಂದ ತಮ್ಮನ್ನು ಕೈಬಿಟ್ಟಿರುವುದಕ್ಕೆ ಆಕ್ಷೇಪಿಸಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ ಎಸ್‌ ದಿನೇಶ್‌ ಕುಮಾರ್‌ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಹಿರಿಯ ವಕೀಲ ಉದಯ್‌ ಹೊಳ್ಳ ಕೋರಿಕೆಯಂತೆ ಭಾರತೀಯ ಟೇಬಲ್‌ ಟೆನಿಸ್‌ ಒಕ್ಕೂಟ, ಭಾರತೀಯ ಕ್ರೀಡಾ ಪ್ರಾಧಿಕಾರ, ಮಹಿಳಾ ತಂಡದಲ್ಲಿ ಸ್ಥಾನ ಪಡೆದಿರುವ ಶ್ರೀಜಾ ಅಕುಲಾ, ರೀತ್‌ ರಿಷ್ಯಾ ಟೆನ್ನಿಸನ್‌, ಮನಿಕಾ ಬಾತ್ರಾ, ದಿಯಾ ಪರಾಗ್‌ ಚಿತಾಲೆ, ಸ್ವಸ್ತಿಕ್‌ ಘೋಷ್‌ ಅವರಿಗೆ ಈಮೇಲ್‌ ಮೂಲಕ ತುರ್ತು ನೋಟಿಸ್‌ ಜಾರಿ ಮಾಡಲು ಆದೇಶಿಸಲಾಗಿದೆ. ಟಿಟಿಎಫ್‌ಐ ಮುಂದಿನ ವಿಚಾರಣೆಯವರೆಗೆ ಆಟಗಾರರ ಆಯ್ಕೆ ಪಟ್ಟಿಯನ್ನು ಕಳುಹಿಸಬಾರದು ಎಂದು ಪೀಠವು ಮಧ್ಯಂತರ ಆದೇಶ ಮಾಡಿದ್ದು, ವಿಚಾರಣೆಯನ್ನು ಜೂನ್‌ 22ಕ್ಕೆ ಮುಂದೂಡಿದೆ.

ಅರ್ಚನಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಮಹಿಳಾ ಡಬಲ್ಸ್‌ ವಿಭಾಗದಲ್ಲಿ ವಿಶ್ವದಲ್ಲಿ ನಾಲ್ಕನೇ ರ್ಯಾಂಕ್‌ ಹೊಂದಿದ್ದರೂ ಅರ್ಚನಾ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿದೆ” ಎಂದು ವಾದಿಸಿದರು.

ಟಿಟಿಎಫ್‌ಐ 2022ರ ಜೂನ್‌ 6ರಂದು ಮಾಡಿರುವ ಶಿಫಾರಸ್ಸಿನಲ್ಲಿ ದಿಯಾ ಪರಾಗ್‌ ಚಿತಾಲೆ ಅವರನ್ನು ದೇಶೀಯ ಕ್ರೀಡಾಕೂಟದಲ್ಲಿನ ಪ್ರದರ್ಶನ ಆಧರಿಸಿ ಆಯ್ಕೆ ಮಾಡಲಾಗಿದೆ ಎಂದು ವಿವರಿಸಲಾಗಿದೆ. ದಿಯಾ ಪರಾಗ್‌ ಚಿತಾಲೆ ಅವರು ದೇಶೀಯ ಟೂರ್ನಿಯಲ್ಲಿ 3ನೇ ರ್ಯಾಂಕ್‌ ಹೊಂದಿದ್ದು, ತಾನು (ಅರ್ಚನಾ ಕಾಮತ್‌) ದೇಶೀಯ ಟೂರ್ನಿಯಲ್ಲಿ ಹೆಚ್ಚು ಆಡದೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಗಮನಹರಿಸಿರುವುದರಿಂದ ದೇಶೀಯ ಶ್ರೇಣಿಯಲ್ಲಿ 37ನೇ ರ್ಯಾಂಕ್‌ ಹೊಂದಿದ್ದೇನೆ. ಅದೇ ರೀತಿ, ಮನಿಕಾ ಬಾತ್ರಾ ಅವರು ಸಹ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ದೇಶೀಯ ಟೂರ್ನಿಯಲ್ಲಿ 33ನೇ ರ್ಯಾಂಕ್‌ ಹೊಂದಿದ್ದಾರೆ. ಆದಾಗ್ಯೂ ನಮ್ಮಿಬ್ಬರ ಅಂತಾರಾಷ್ಟ್ರೀಯ ಟೂರ್ನಿಗಳ ಉತ್ತಮ ಪ್ರದರ್ಶನ ಹಾಗೂ ಅಲ್ಲಿನ ರ್ಯಾಂಕಿಂಗ್ ಆಧಾರದಲ್ಲಿ ನಮ್ಮಿಬ್ಬರನ್ನು ಪದಕ ಗೆಲ್ಲುವ ದೃಷ್ಟಿಯಿಂದ ತಂಡದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಆದರೆ, ಈಗ ತಮ್ಮನ್ನು ಮಾತ್ರ ದೇಶೀಯ ರ್ಯಾಂಕಿಂಗ್ ಆಧಾರದಲ್ಲಿ ಕೈಬಿಡಲಾಗಿದ್ದು ಇದು ಅನ್ಯಾಯ ಹಾಗೂ ಅಸಮರ್ಥನೀಯ ಎಂದು ಮನವಿಯಲ್ಲಿ ಹೇಳಲಾಗಿದೆ.

ತಮ್ಮ ಹೆಸರನ್ನು ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಆಯ್ಕೆ ಸಮಿತಿಯು ಭಾರತವನ್ನು ಪ್ರತಿನಿಧಿಸುವ ಆಟಗಾರ್ತಿ ಎಂದು ಖಾತರಿ ಪಡಿಸಿತ್ತು (ಶಾರ್ಟ್‌ಲಿಸ್ಟ್‌). ತಾಂತ್ರಿಕ ಅಂಶಗಳನ್ನು ಉಲ್ಲೇಖಿಸಿ ಟಿಟಿಎಫ್‌ಐ ತಮ್ಮ ಹೆಸರನ್ನು ತೆಗೆದು ಹಾಕಿ, ದಿವ್ಯಾ ಪರಾಗ್‌ ಚಿತಾಲೆ ಅವರ ಹೆಸರನ್ನು ಸೇರ್ಪಡೆ ಮಾಡಿದೆ. ಅರ್ಚನಾ ಮತ್ತು ಮನಿಕಾ ಬಾತ್ರಾ ಜೋಡಿಯು ಡಬಲ್ಸ್‌ ವಿಭಾಗದಲ್ಲಿ ದೇಶಕ್ಕೆ ಪದಕ ತಂದು ಕೊಡುವ ಸಾಮರ್ಥ್ಯ ಹೊಂದಿದೆ ಎಂದು ಟಿಟಿಎಫ್‌ಐ ಉಲ್ಲೇಖಿಸಿತ್ತು. ಆದರೆ, ಅಪ್ರಸ್ತುತ ಮತ್ತು ತರ್ಕಹೀನವಾದ ಮಾನದಂಡಗಳ ಅನ್ವಯ ತಮ್ಮ ಹೆಸರನ್ನು ಕೈಬಿಡಲಾಗಿದೆ. ತಮ್ಮನ್ನು ತಂಡದಿಂದ ಕೈಬಟ್ಟಿರುವುದು ತಮ್ಮ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಿದ್ದು, ಹತಾಶೆಗೊಳ್ಳುವಂತೆ ಮಾಡಿದೆ” ಎಂದು ಅರ್ಚನಾ ಅವರ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com