ಇ ಡಿ ಮತ್ತು ಮಮತಾ ನಡುವಿನ ಪ್ರಕರಣ: ಕಲ್ಕತ್ತಾ ಹೈಕೋರ್ಟ್‌ ವಿಚಾರಣೆ ಮುಂದೂಡಿದ್ದೇಕೆ?

ಚುನಾವಣೆ ಹೊಸ್ತಿಲಲ್ಲಿ ಇ ಡಿ ನಡೆಸಿದ ದಾಳಿ ರಾಜಕೀಯ ಪ್ರೇರಿತ ಎಂದು ತೃಣಮೂಲ ಕಾಂಗ್ರೆಸ್‌ ಹೇಳಿದೆ. ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇ ಡಿ ಸೋರಿಕೆ ಮಾಡದಂತೆ ತಡೆಯಬೇಕು ಎಂದು ಅದು ನ್ಯಾಯಾಲಯವನ್ನು ಕೋರಿದೆ.
Mamata Banerjee, ED with Calcutta High Court
Mamata Banerjee, ED with Calcutta High Courtfacebook
Published on

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್‌ ಹಾಗೂ ಅದರ ಸಹ - ಸಂಸ್ಥಾಪಕ ಪ್ರತೀಕ್‌ ಜೈನ್‌ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ ಡಿ) ನಡೆಸಿದ ದಾಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಕಲ್ಕತ್ತಾ ಹೈಕೋರ್ಟ್‌ ಶುಕ್ರವಾರ ಮುಂದೂಡಿದೆ.

ಪರಸ್ಪರರ ವಿರುದ್ಧ ಆರೋಪಿಸಿ ಜಾರಿ ನಿರ್ದೇಶನಾಲಯ (ಇ ಡಿ) ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಶುಕ್ರವಾರ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಸಲು ನಿರ್ಧರಿಸಿತ್ತು.

ಆದರೆ, ಮಧ್ಯಾಹ್ನದ ವೇಳೆ ನ್ಯಾಯಾಲಯದ ಕೋಣೆಯೊಳಗೆ ವ್ಯಾಪಕ ಸಂಖ್ಯೆಯಲ್ಲಿ ವಕೀಲರು, ಕಾರ್ಯಕರ್ತರು, ಕುತೂಹಲಿಗಳು ನೆರೆದಿದ್ದರಿಂದ ಗದ್ದಲ ಮೇರೆಮೀರಿತು. ನ್ಯಾ. ಸುವ್ರಾ ಘೋಷ್‌ ಅವರು ನಿಶ್ಶಬ್ದತೆಯನ್ನು ಕಾಪಾಡಿಕೊಳ್ಳುವಂತೆ ಪದೇಪದೇ ಮಾಡಿದ ವಿನಂತಿಗಳು ನಿಷ್ಫಲವಾದವು.

ಕಡೆಗೆ, ನ್ಯಾ. ಸುವ್ರಾ ಘೋಷ್‌ ಅವರು, "ನ್ಯಾಯಾಲಯದ ಕೋಣೆಯೊಳಗಿನ ವಾತಾವರಣವು ಕಲಾಪವನ್ನು ಆರಂಭಿಸಲು ಅಥವಾ ಮುಂದುವರಿಸಲು ಅನುಕೂಲಕರವಾಗಿಲ್ಲ. ಈ ರೀತಿಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡುವುದಷ್ಟೇ ನ್ಯಾಯಾಲಯಕ್ಕೆ ಉಳಿದಿರುವ ದಾರಿ," ಎಂದು ಆದೇಶದಲ್ಲಿ ದಾಖಲಿಸಿದರು. ಅಂತಿಮವಾಗಿ ಪ್ರಕರಣದ ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಿದರು.

ಐ-ಪ್ಯಾಕ್‌ ಕಚೇರಿ ಹಾಗೂ ಪ್ರತೀಕ್‌ ಜೈನ್‌ ನಿವಾಸದ ಮೇಲೆ ಗುರುವಾರ ನಡೆದ ಇ ಡಿ ದಾಳಿಯ ವೇಳೆ ಅಲ್ಲಿಗೆ ಅತಿಮಕ್ರಮವಾಗಿ ಪ್ರವೇಶಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಐ-ಪ್ಯಾಕ್‌ಗೆ ಸಂಬಂಧಿಸಿದ ವಿವಿಧ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಪುರಾವೆಗಳನ್ನು ಕೊಂಡೊಯ್ದಿದ್ದಾರೆ ಎಂದು ಇ ಡಿ ದೂರಿದೆ. ಆದರೆ, ಇ ಡಿಯ ದಾಳಿಯು ರಾಜಕೀಯ ಪ್ರೇರಿತವಾಗಿದ್ದು ಅದರಲ್ಲಿ ತಮ್ಮ ರಾಜಕೀಯ ಪಕ್ಷವಾದ ಟಿಎಂಸಿ ಬಗ್ಗೆ ಮಾಹಿತಿ ಇದೆ ಎಂದು ಮಮತಾ ಆರೋಪಿಸಿದ್ದಾರೆ.

ವರದಿಗಳ ಪ್ರಕಾರ, 2019 ರ ಲೋಕಸಭಾ ಚುನಾವಣೆಯ ನಂತರ ಐ-ಪ್ಯಾಕ್‌ ಸಂಸ್ಥೆ (ರಾಜಕೀಯ ತಜ್ಞ ಪ್ರಶಾಂತ್‌ ಕಿಶೋರ್‌ ಈ ಹಿಂದೆ ಇದರ ಸಂಸ್ಥಾಪಕ ಮಾರ್ಗದರ್ಶಿಯಾಗಿದ್ದರು. ಜನ್‌ ಸೂರಜ್‌ ಪಕ್ಷ ಸ್ಥಾಪನೆ ಬಳಿಕ ಅವರು ಸಂಸ್ಥೆಯಿಂದ ದೂರವಾಗಿದ್ದಾರೆ)  ತೃಣಮೂಲ ಕಾಂಗ್ರೆಸ್ ಜೊತೆ ಕೆಲಸ ಮಾಡುತ್ತಿದೆ.

2020ರಲ್ಲಿ ಕಲ್ಲಿದ್ದಲು ಕಳ್ಳಸಾಗಣೆ ಆರೋಪ ಎದುರಿಸುತ್ತಿರುವ ಉದ್ಯಮಿ ಅನುಪ್ ಮಜೀ ಅವರ ವಿರುದ್ಧ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಈ ದಾಳಿ ನಡೆಸಲಾಗಿತ್ತು ಎಂದು ಇ ಡಿ ವಾದಿಸಿದೆ.

ಮಜೀ ನೇತೃತ್ವದ ಕಲ್ಲಿದ್ದಲು ಕಳ್ಳಸಾಗಣೆ ಜಾಲವು ಪಶ್ಚಿಮ ಬಂಗಾಳದ ಇಸಿಎಲ್‌ನ ಲೀಸ್ ಪ್ರದೇಶಗಳಿಂದ ಕಲ್ಲಿದ್ದಲನ್ನು ಕಳವು ಮಾಡಿ ವಿವಿಧ ಕಾರ್ಖಾನೆಗಳು ಹಾಗೂ ಘಟಕಗಳಿಗೆ ಮಾರಾಟ ಮಾಡುತ್ತಿತ್ತು. ಕಲ್ಲಿದ್ದಲಿನ ದೊಡ್ಡ ಭಾಗವನ್ನು ಶಾಕಾಂಬರಿ ಸಮೂಹ ಕಂಪೆನಿಗಳಿಗೆ ಮಾರಾಟ ಮಾಡಲಾಗಿದೆ. ತನಿಖೆಯಲ್ಲಿ ಹವಾಲಾ ವಹಿವಾಟು ನಡೆದಿರುವುದು ಪತ್ತೆಯಾಗಿತ್ತು ಎಂದು ಇ ಡಿ ಹೇಳಿತ್ತು.

ಶೋಧ ನಡೆಯುತ್ತಿದ್ದ ವೇಳೆ ಕಲ್ಕತ್ತಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮಮತಾ ಅವರ ಆಗಮನದ ಬಳಿಕ ನಾಟಕೀಯ ಬೆಳವಣಿಗೆಗಳು ನಡೆದವು. ಪಿಎಂಎಲ್‌ಎ ಕಾಯಿದೆಯಡಿ ನಡೆಯುತ್ತಿದ್ದ ತನಿಖೆ ಮತ್ತು ವಿಚಾರಣೆಗೆ ಮಮತಾ ಅವರ ಈ ನಡೆ ಅಡ್ಡಿ ಉಂಟು ಮಾಡಿದೆ ಎಂದು ಇ ಡಿ ಆರೋಪಿಸಿದೆ.

ಈ ರೀತಿ ಮಧ್ಯಪ್ರವೇಶಿಸಿರುವುದು ತನಿಖಾ ಸಂಸ್ಥೆಯ ಅಧಿಕಾರದ ಮೇಲೆ ನಡೆಸಿದ ದಾಳಿ ಆಗಿದ್ದು ಕಾನೂನಾತ್ಮಕ ಆಡಳಿತವನ್ನು ದುರ್ಬಲಗೊಳಿಸುತ್ತದೆ. ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿ ಅವರನ್ನು ಬಂಧಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂತಲೂ ಅದು ಹೇಳಿದೆ.

ಆದರೆ ಚುನಾವಣೆ ಹೊಸ್ತಿಲಲ್ಲಿ ಇ ಡಿ ನಡೆಸಿದ ದಾಳಿ ರಾಜಕೀಯ ಪ್ರೇರಿತ ಎಂದು ತೃಣಮೂಲ ಕಾಂಗ್ರೆಸ್‌ ಹೇಳಿದೆ. ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇ ಡಿ ಸೋರಿಕೆ ಮಾಡದಂತೆ ತಡೆಯಬೇಕು ಎಂದು ಅದು ನ್ಯಾಯಾಲಯವನ್ನು ಕೋರಿದೆ.

ಪ್ರಕರಣದಲ್ಲಿ ಇಡಿ, ತೃಣಮೂಲ ಕಾಂಗ್ರೆಸ್ ಮತ್ತು ಐ-ಪಿಎಸಿ ಸಹ ಸಂಸ್ಥಾಪಕ ಪ್ರತಿಕ್ ಜೈನ್ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯ ಪೊಲೀಸರು ಹಾಗೂ ಇತರರ ಪಾತ್ರದ ತನಿಖೆಗೆ ಸಿಬಿಐ ಎಫ್‌ಐಆರ್ ದಾಖಲಿಸುವಂತೆ ಇಡಿ ಹೈಕೋರ್ಟ್‌ಗೆ ಮನವಿ ಮಾಡಿದೆ

Kannada Bar & Bench
kannada.barandbench.com