ಪತ್ರಕರ್ತ ರಾಹುಲ್‌ ವಿರುದ್ಧದ ಕೋಮು ದ್ವೇಷ ಪ್ರಕರಣ: ಆತುರದ ನಿರ್ಧಾರ ಕೈಗೊಳ್ಳದಂತೆ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಪತ್ರಕರ್ತ ರಾಹುಲ್‌ ಶಿವಶಂಕರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿದಾರರ ಪರವಾಗಿ ಈ ಹಿಂದೆ ಮಾಡಿರುವ ಆದೇಶ ಮುಂದುವರಿಯಲಿದೆ ಎಂದಿದೆ.
Journalist Rahul Shivshankar and Karnataka HC
Journalist Rahul Shivshankar and Karnataka HCFB

ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಿರುವುದನ್ನು ಟೀಕಿಸಿ ಎಕ್ಸ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದಕ್ಕೆ ಸಂಬಂಧಿಸಿದಂತೆ ಕೋಮು ದ್ವೇಷ ಪ್ರಕರಣ ಎದುರಿಸುತ್ತಿರುವ ಸುದ್ದಿ ನಿರೂಪಕ ರಾಹುಲ್‌ ಶಿವಶಂಕರ್‌ ವಿರುದ್ದ ಆತುರದ ನಿರ್ಧಾರ ಕೈಗೊಳ್ಳದಂತೆ ಮಾಡಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಿಸ್ತರಿಸಿದೆ.

ಪತ್ರಕರ್ತ ರಾಹುಲ್‌ ಶಿವಶಂಕರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿದಾರರ ಪರವಾಗಿ ಈ ಹಿಂದೆ ಮಾಡಿರುವ ಆದೇಶ ಮುಂದುವರಿಯಲಿದೆ ಎಂದಿದ್ದು, ಪ್ರತಿವಾದಿ/ದೂರುದಾರ ಎನ್‌ ಅಂಬರೀಷ್‌ ಅವರಿಗೆ ತುರ್ತು ನೋಟಿಸ್‌ ಜಾರಿ ಮಾಡಿ ಆದೇಶಿಸಿತು.

ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಸಿಐಡಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಪ್ರತಿಯನ್ನು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಸಲ್ಲಿಸಿದರು.

“ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್‌ ಭಾಷಣ ಮತ್ತು ಮಾಧ್ಯಮಗಳ ವರದಿಯನ್ನು ಪರಿಶೀಲಿಸಿದ ನಂತರ ಟ್ವೀಟ್‌ ಮಾಡಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ದೊಡ್ಡಮಟ್ಟದಲ್ಲಿ ಆದಾಯ ತರುವ ದೇವಾಲಯಗಳಿಗೆ ಅನುದಾನವನ್ನು ಏಕೆ ಹಂಚಿಕೆ ಮಾಡಲಾಗಿಲ್ಲ. ಇತರೆ ಧಾರ್ಮಿಕ ಪ್ರಾರ್ಥನಾ ಸ್ಥಳಗಳಿಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡಿರುವುದು ಏಕೆ ಎಂದು ಪ್ರಶ್ನಿಸಿದ್ದೇನೆ. ಇದು ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ವಿಚಾರವಾಗುವುದಿಲ್ಲ. ಇದು ದ್ವೇಷ ಹರಡುವ ಪ್ರಶ್ನೆ ಎಂದಾದರೆ ಪತ್ರಕರ್ತರು ಅಥವಾ ಯಾವುದೇ ವ್ಯಕ್ತಿ ಧರ್ಮಕ್ಕೆ ಸಂಬಂಧಿಸಿದಂತೆ ಈ ದೇಶದಲ್ಲಿ ಪ್ರಶ್ನೆ ಕೇಳಲಾಗದ ಸ್ಥಿತಿ ನಿರ್ಮಾಣವಾಗಲಿದೆ” ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಮಂಗಳೂರಿನ ವಕ್ಫ್‌ ಆಸ್ತಿಗಳು ಮತ್ತು ಹಜ್‌ ಭವನ ಹಾಗೂ ಕ್ರಿಶ್ಚಿಯನ್‌ ಸಮುದಾಯಗಳ ಪ್ರಾರ್ಥನಾ ಸ್ಥಳಗಳಿಗೆ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಿರುವುದರ ಸಂಬಂಧ ರಾಹುಲ್‌ ಶಿವಶಂಕರ್‌ ಎಕ್ಸ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಸಂಬಂಧ ಕೋಲಾರದ ಕೌನ್ಸಿಲರ್‌ ಎನ್‌ ಅಂಬರೀಷ್‌ ಅವರು ರಾಹುಲ್‌ ಶಿವಶಂಕರ್ ಅವರಿಗೆ ಕೋಮು ದ್ವೇಷ ಹರಡುವ ಚಾಳಿಯಿದೆ ಎಂದು ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್‌ 153ಎ ಮತ್ತು 505 ಅಡಿ ಪ್ರಕರಣ ದಾಖಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com