ಕೋಮು ದ್ವೇಷ ಪ್ರಕರಣ: ಹೈಕೋರ್ಟ್‌ನಲ್ಲಿ ಅರ್ಜಿ ಹಿಂಪಡೆದ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ

ಹರ್ಷನ ಕೊಲೆಯಾದಾಗ ನಾವು ಲಾಂಗು, ಮಚ್ಚು ಹಿಡಿದುಕೊಂಡು ಮುಸ್ಲಿಮರ ಬೀದಿಗೆ ಹೋಗಿದ್ದರೆ ಮಾರಿ ಜಾತ್ರೆಯಲ್ಲಿ ಕುರಿ ಕಡಿದಂತೆ ಕಡಿದು ಹಾಕಿ ಬಿಡುತ್ತಿದ್ದಿವಿ ಎಂದಿದ್ದ ಈಶ್ವರಪ್ಪ.
Karnataka High Court and farmer DyCM K S Eshwarappa
Karnataka High Court and farmer DyCM K S Eshwarappa
Published on

ಶಿವಮೊಗ್ಗದ ರಾಗಿಗುಡ್ಡದಲ್ಲಿ 2023ರಲ್ಲಿ ನಡೆದ ಗಲಭೆ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ವೇಳೆ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಂಬಂಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಗುರುವಾರ ವಾಪಸ್ ಪಡೆದುಕೊಂಡಿದ್ದಾರೆ.

ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಎಫ್ಐಆರ್ ಹಾಗೂ ಅದರ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಕೆ ಎಸ್ ಈಶ್ವರಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಎಂ ವಿನೋದ್ ಕುಮಾರ್ ಅವರು ”ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಕಾನೂನಿನಲ್ಲಿ ಇರುವ ಅವಕಾಶಗಳಡಿ ಸೂಕ್ತ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗುವುದು. ಹೀಗಾಗಿ, ಮೊದಲು ಸಲ್ಲಿಸಲಾಗಿದ್ದ ಅರ್ಜಿಯನ್ನು ವಾಪಸ್ ಪಡೆದುಕೊಳ್ಳಲಾಗುವುದು ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ಈ ಹೇಳಿಕೆಯನ್ನು ದಾಖಲಿಸಿಕೊಂಡ ಪೀಠವು ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಹೊಸದಾಗಿ ಸೂಕ್ತ ಅರ್ಜಿ ಸಲ್ಲಿಸಲಾಗುವುದು. ಅದಕ್ಕಾಗಿ ಹಾಲಿ ಅರ್ಜಿಯನ್ನು ವಾಪಸ್ ಪಡೆದುಕೊಳ್ಳುವುದಾಗಿ ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ. ಆದ್ದರಿಂದ, ಈಗ ನ್ಯಾಯಾಲಯದ ಮುಂದಿರುವ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಹೇಳಿತು.

ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮೀಲಾದ್ ಮೆರವಣಿಗೆ ಮೇಲೆ ಕಲ್ಲು ತೋರಾಟ ನಡೆದಿದೆ ಎಂಬ ಕಾರಣಕ್ಕೆ ಗಲಭೆ ನಡೆದಿತ್ತು. ಸರ್ಕಾರದ ಹಿಂದೂ ವಿರೋಧಿ ಧೋರಣೆ ಹೊಂದಿದೆ ಎಂದು ಆಪಾದಿಸಿ 2023ರ ಅಕ್ಟೋಬರ್‌ 12ರಂದು ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದರಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದ ಕೆ ಎಸ್ ಈಶ್ವರಪ್ಪ, ಇಲ್ಲಿವರೆಗೆ ಹಿಂದೂ ಸಮಾಜ ಕಾನೂನು ಕೈಗೆತ್ತಿಕೊಂಡಿಲ್ಲ. ಹರ್ಷನ ಕೊಲೆಯಾದಾಗ ನಾವು ಲಾಂಗು, ಮಚ್ಚು ಹಿಡಿದುಕೊಂಡು ಮುಸ್ಲಿಮರ ಬೀದಿಗೆ ಹೋಗಿದ್ದರೆ ಮಾರಿ ಜಾತ್ರೆಯಲ್ಲಿ ಕುರಿ ಕಡಿದಂತೆ ಕಡಿದು ಹಾಕಿ ಬಿಡುತ್ತಿದ್ದಿವಿ ಎಂದು ಹೇಳಿದ್ದರು. ಇದರ ವಿರುದ್ಧ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ಈಶ್ವರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. 

Kannada Bar & Bench
kannada.barandbench.com