ಕೋಮು ದ್ವೇಷ: ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆಯಾಜ್ಞೆ

ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಮಿಥುನ್‌ ಚಕ್ರವರ್ತಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
Chakravarti Sulibele and Karnataka HC, Dharwad Bench
Chakravarti Sulibele and Karnataka HC, Dharwad Bench
Published on

"ಯಾವಾಗ ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಾರೋ; ಆ ಸಂದರ್ಭದಲ್ಲಿ ಹಿಂದೂಗಳು ಬದುಕುವುದು ಕಷ್ಟ" ಎಂಬ ಹೇಳಿಕೆ ನೀಡುವ ಮೂಲಕ ಹಿಂದೂ ಹಾಗೂ ಮುಸ್ಲಿಂ ಧರ್ಮದವರ ಮಧ್ಯೆ ಕೋಮು ದ್ವೇಷ ಭಾವನೆ ಉಂಟು ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಯುವ ಬ್ರಿಗೇಡ್ ಸಂಸ್ಥಾಪಕ ಮಿಥುನ್‌ ಚಕ್ರವರ್ತಿ ಅಲಿಯಾಸ್‌ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾರವಾರ ಗ್ರಾಮಾಂತರ ಠಾಣಾ‌ ಪೊಲೀಸರು ದಾಖಲಿಸಿರುವ ಎಫ್ಐಆರ್‌ಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಗುರುವಾರ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಮಿಥುನ್‌ ಚಕ್ರವರ್ತಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು, ಪ್ರಕರಣದಲ್ಲಿ ಅರ್ಜಿದಾರರು ಸಮಾಜದ ಯಾವುದೇ ವರ್ಗಗಳ ನಡುವೆ ದ್ವೇಷ ಹಾಗೂ ವೈಮನಸ್ಸು ಉಂಟು ಮಾಡುವ ಉದ್ದೇಶದಿಂದ ಈ ಹೇಳಿಕೆ ನೀಡಿಲ್ಲ. ಸರ್ಕಾರವು ಸಮಾಜದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಸುತ್ತಿದೆ ಎಂಬ ಕಾರಣಕ್ಕೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರಷ್ಟೇ. ಅದೂ ಸಹ ಸಂವಿಧಾನದ 19ನೇ ವಿಧಿ ಅಡಿಯಲ್ಲಿ ಲಭ್ಯವಿರುವ ಅಭಿವ್ಯಕ್ತ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿಯೇ ಮಾತನಾಡಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸರ್ಕಾರವು ನಡೆದುಕೊಳ್ಳುತ್ತಿರುವ ಧೋರಣೆ ಬಗ್ಗೆ ಅರ್ಜಿದಾರರು ಉತ್ತರ ನೀಡಿರುವುದನ್ನು ಮುಂದಿಟ್ಟುಕೊಂಡು ಪೊಲೀಸರು ದುರುದ್ದೇಶದಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಕ್ರಮ. ಸಮಾಜದಲ್ಲಿ ದ್ವೇಷ ಉಂಟು ಮಾಡುವ ಯಾವುದೇ ಉದ್ದೇಶ ಸಹ ಅರ್ಜಿದಾರರಿಗೆ ಇಲ್ಲ. ಆದ್ದರಿಂದ ಎಫ್‌ಐಆರ್‌ಗೆ ತಡೆ ನೀಡಬೇಕು ಎಂದು ಕೋರಿದರು. ಈ ಮನವಿ ಪುರಸ್ಕರಿಸಿರುವ ಪೀಠವು ವಿಚಾರಣೆ ಮುಂದೂಡಿದೆ.

Also Read
ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಟೌನ್‌ಹಾಲ್‌ ಬಳಿ ಪ್ರತಿಭಟನೆ: ಸೂಲಿಬೆಲೆ ವಿರುದ್ಧದ ಸಮನ್ಸ್‌ಗೆ ಹೈಕೋರ್ಟ್‌ ತಡೆ

ಪ್ರಕರಣದ ಹಿನ್ನೆಲೆ: ಚಕ್ರವರ್ತಿ ಸೂಲಿಬೆಲೆ 2023ರ ಅಕ್ಟೋಬರ್‌ 3ರಂದು ಕಾರವಾರ ತಾಲ್ಲೂಕಿನ ಕಡವಾಡದ ಭೋವಿವಾಡಾದಲ್ಲಿರುವ ಆದಿಮಾಯಿ ದೇವಸ್ಥಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗೋಷ್ಠಿ ನಡೆಸಿದ್ದ ಅವರು, ‘ಯಾವಾಗ ಸಿದ್ದರಾಮಯ್ಯ ಅವರು ಆಧಿಕಾರಕ್ಕೆ ಬರುತ್ತಾರೋ; ಆ ಸಂದರ್ಭದಲ್ಲಿ ಹಿಂದೂಗಳಿಗೆ ಬದುಕುವುದು ಕಷ್ಟವಾಗಿದೆ. ಮುಸಲ್ಮಾನರಿಗೆ ಸಿದ್ದರಾಮಯ್ಯನವರು ಒಂದು ರೀತಿಯ ಅಭಯ ಹಸ್ತಕೊಟ್ಟು; ನಾನೀದ್ದೀನಿ ನಿಮ್ಮ ಜೊತೆ ಅಂತ ಎಲ್ಲಿಯವರೆಗೆ ಹೇಳುತ್ತಾರೋ ಅಲ್ಲಿಯವರೆಗೆ ಈ ರೀತಿಯ ಕೃತ್ಯಗಳು ನಿರಂತರವಾಗಿ ಇರುತ್ತದೆ’ ಎಂದು ಹೇಳಿಕೆ ನೀಡಿದ್ದರು.

ಈ ಕುರಿತು ಕಾರವಾರ ಗ್ರಾಮೀಣಾ ಠಾಣೆಯ ಗುಪ್ತಚರ ವಿಭಾಗದ ಮುಖ್ಯಪೇದೆ ಉಲ್ಲಾಸ್‌ ತೋಕು ನಾಯ್ಕ ಅವರು ನೀಡಿದ ದೂರು ಆಧರಿಸಿ, 2023ರ ಅಕ್ಟೋಬರ್‌ 5ರಂದು ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್‌ 505(2)ಎಫ್‌ಐಆರ್‌ ದಾಖಲಿಸಿದ್ದರು. ಹಿಂದೂ ಮತ್ತು ಮುಸ್ಲಿಂ ಧರ್ಮದವರು ಹಾಗೂ ಸಮಾಜದಲ್ಲಿನ ವಿವಿಧ ವರ್ಗಗಳ ನಡುವೆ ವೈರತ್ವ, ದ್ವೇಷ ಮತ್ತು ವೈಮನಸ್ಸು ಉಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ ಆರೋಪ ಚಕ್ರವರ್ತಿ ಸೂಲಿಬೆಲೆ ಮೇಲಿದೆ. ಪ್ರಕರಣವು ಕಾರವಾರ ಹಿರಿಯ ಸಿವಿಲ್‌ ಮತ್ತು 2ನೇ ಹೆಚ್ಚುವರಿ ಜೆಂಎಫ್‌ಸಿ ನ್ಯಾಯಾಲಯದ ವಿಚಾರಣಾ ಹಂತದಲ್ಲಿದೆ. ಇದರಿಂದ ಚಕ್ರವರ್ತಿ ಸೂಲಿಬೆಲೆ ಎಫ್‌ಐಆರ್‌ ರದ್ದು ಕೋರಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Kannada Bar & Bench
kannada.barandbench.com