Justice Indu Malhotra
Justice Indu Malhotra

ಕಮ್ಯುನಿಸ್ಟ್ ಸರ್ಕಾರಗಳಿಂದ ಹಿಂದೂ ದೇವಾಲಯಗಳ ಮೇಲೆ ಹಿಡಿತ: ನ್ಯಾ. ಇಂದು ಮಲ್ಹೋತ್ರಾ

ಕೇರಳದ ಶ್ರೀ ಪದ್ಮನಾಭಸ್ವಾಮಿ ದೇಗುಲಕ್ಕೆ ಸಂಬಂಧಿಸಿದಂತೆ ತಾನು ಮತ್ತು ನ್ಯಾ. ಯು ಯು ಲಲಿತ್ (ಸುಪ್ರೀಂ ಕೋರ್ಟ್‌ನ ಈಗಿನ ಮುಖ್ಯ ನ್ಯಾಯಮೂರ್ತಿಗಳು) ಅಂತಹ ಯತ್ನ ತಡೆದಿದ್ದಾಗಿ ನ್ಯಾ. ಇಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

ಕಮ್ಯುನಿಸ್ಟ್ ಸರ್ಕಾರಗಳು ಹಿಂದೂ ದೇವಾಲಯಗಳ ಮೇಲೆ ಹಿಡಿತ ಸಾಧಿಸಿವೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರು ಹೇಳಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಕೇರಳದ ಶ್ರೀ ಪದ್ಮನಾಭಸ್ವಾಮಿ ದೇಗುಲಕ್ಕೆ ಸಂಬಂಧಿಸಿದಂತೆ ತಾನು ಮತ್ತು ನ್ಯಾ. ಯು ಯು ಲಲಿತ್‌ (ಸುಪ್ರೀಂ ಕೋರ್ಟ್‌ನ ಈಗಿನ ಮುಖ್ಯ ನ್ಯಾಯಮೂರ್ತಿಗಳು) ಸೇರಿದಂತೆ ಕೆಲವರ ಗುಂಪು ಅಂತಹ ಯತ್ನ ನಿಲ್ಲಿಸಿದ್ದಾಗಿ ನ್ಯಾ. ಇಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ. ವೀಡಿಯೊವನ್ನು ದೇವಸ್ಥಾನದ ಆವರಣದ ಹೊರಗೆ ಚಿತ್ರೀಕರಿಸಿದಂತೆ ತೋರುತ್ತದೆ.

“ಕಮ್ಯುನಿಸ್ಟ್‌ ಸರ್ಕಾರಗಳಿರುವೆಡೆ ಇಂತಹುದು ನಡೆಯುತ್ತದೆ. ಅವರು ಆದಾಯದ ಕಾರಣಕ್ಕಾಗಿ (ದೇವಾಲಯಗಳ) ಸ್ವಾಧೀನ ಬಯಸುತ್ತಾರೆ. ಅವರ ಸಮಸ್ಯೆ ಎಂದರೆ ಆದಾಯ. ಅವರು ಎಲ್ಲವನ್ನೂ ಸ್ವಾಧೀನಪಡಿಸಿಕೊಂಡಿದ್ದಾರೆ. ಎಲ್ಲೆಡೆ. ಹಿಂದೂ ದೇವಾಲಯಗಳನ್ನು ಮಾತ್ರ. ಹಾಗಾಗಿ ನ್ಯಾ. ಲಲಿತ್‌ ಮತ್ತು ನಾನು ಇದಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದೆವು” ಎಂಬುದಾಗಿ ಅವರು ವೀಡಿಯೊದಲ್ಲಿ ಹೇಳಿರುವುದು ಕಂಡುಬರುತ್ತದೆ.

ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ ನಿರ್ವಹಣೆಯ ಹಕ್ಕು ತಿರುವಾಂಕೂರು ರಾಜಮನೆತನಕ್ಕೆ ಸೇರಿದ್ದು ಎಂದು ನ್ಯಾ. ಲಲಿತ್‌ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠ ಜುಲೈ 2020ರಲ್ಲಿ ನೀಡಿದ್ದ ತೀರ್ಪನ್ನು ನ್ಯಾ. ಇಂದು ಉಲ್ಲೇಖಿಸಿದ್ದಾರೆ. ಕೇರಳ ಸರ್ಕಾರಕ್ಕೆ ದೇವಸ್ಥಾನದ ನಿರ್ವಹಣೆ ಹಕ್ಕನ್ನು ನೀಡಿದ್ದ 2011ರ ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜಮನೆತನದ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿಯನ್ನು ಆ ಮೂಲಕ ಸರ್ವೋಚ್ಚ ನ್ಯಾಯಾಲಯ ಪುರಸ್ಕರಿಸಿತ್ತು.

ಭಾರತ ಒಕ್ಕೂಟದೊಂದಿಗೆ ತಿರುವಾಂಕೂರು ಸಂಸ್ಥಾನ ವಿಲೀನವಾಗುವಾಗ 1949ರಲ್ಲಿ ವಿಲೀನ ಪತ್ರಕ್ಕೆ ಸಹಿ ಹಾಕಿದ್ದ ದೊರೆಯ ಸಾವಿನೊಂದಿಗೆ ದೇಗುಲ ಮತ್ತು ದೇವರ ನಿರ್ವಹಣೆ ಹಕ್ಕು ಕೊನೆಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಿತ್ತು.

"ಒಡಂಬಡಿಕೆಗೆ ಸಹಿ ಹಾಕಿದ್ದ ಶ್ರೀ ಚಿತ್ತಿರ ತಿರುನಾಳ್ ಬಲರಾಮ ವರ್ಮಾ ಅವರ ಮರಣವು ತಿರುವಾಂಕೂರಿನ ರಾಜಮನೆತನದ ದೇವಾಲಯದ ನಿರ್ವಹಣೆ ಹಕ್ಕಿನ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಭಾವಿಸುತ್ತೇವೆ" ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

ದೇವಾಲಯದ ಆಡಳಿತ ಮತ್ತು ನಿರ್ವಹಣೆಗಾಗಿ ನ್ಯಾಯಾಲಯವು ಐವರು ಸದಸ್ಯರ ಆಡಳಿತ ಸಮಿತಿಯನ್ನು ಸಹ ರಚಿಸಿತ್ತು. ಕುತೂಹಲಕಾರಿಯಾಗಿ, ತೀರ್ಪಿನ ಆಧಾರವಾಗಿರುವ ಕಾನೂನನ್ನು ರದ್ದುಗೊಳಿಸುವುದು ರಾಜಮನೆತನದ ದೇಗುಲ ನಿರ್ವಹಣಾ ಹಕ್ಕುಗಳ ಅಂತ್ಯಕ್ಕೆ ಕಾರಣವಾಗಬಹುದು ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು.

ನ್ಯಾ. ಇಂದು ಅವರನ್ನು ಸಂಪರ್ಕಿಸಲು ʼಬಾರ್ ಮತ್ತು ಬೆಂಚ್‌ʼ ಯತ್ನಿಸಿತಾದರೂ ಅವರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.

Related Stories

No stories found.
Kannada Bar & Bench
kannada.barandbench.com