

ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯನ್ನು ಸರ್ಕಾರಿ ಅನುಕಂಪದ ಉದ್ಯೋಗ ಯೋಜನೆಗಳೊಂದಿಗೆ ಸಮೀಕರಿಸುವುದು ಸೂಕ್ತವಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ಮೃತ ಸ್ವಾತಂತ್ರ್ಯ ಹೋರಾಟಗಾರನ ಪಿಂಚಣಿಯನ್ನು ಅವರ ಮಗಳ (ಅರ್ಜಿದಾರೆ) ಖಾತೆಗೆ ವರ್ಗಾಯಿಸಲು ಕೇಂದ್ರ ಸರ್ಕಾರ ನಿರಾಕರಿಸಿದ ಆದೇಶ ರದ್ದುಗೊಳಿಸಿದ ನ್ಯಾಯಮೂರ್ತಿ ವಿ ಲಕ್ಷ್ಮಿನಾರಾಯಣನ್ ಈ ವಿಚಾರ ತಿಳಿಸಿದರು.
ವಿಚ್ಛೇದಿತ ಹೆಣ್ಣುಮಕ್ಕಳು ತಮ್ಮ ಹೆತ್ತವರಿಗೆ ನೀಡಲಾಗುವ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಪಡೆಯಲು ಅರ್ಹರಲ್ಲ ಎಂಬ ವಾದವನ್ನು ಬೆಂಬಲಿಸಲು, ಸರ್ಕಾರ ಈ ಹಿಂದಿನ ತೀರ್ಪುಗಳನ್ನು ಪ್ರಸ್ತಾಪಿಸಿತು.
ಆದಾಗ್ಯೂ,ಆ ತೀರ್ಪುಗಳು ಕೇವಲ ಸಹಾನುಭೂತಿಯ ಉದ್ಯೋಗ ಗಳಿಗೆ ಸಂಬಂಧಿಸಿವೆಯೇ ಹೊರತು ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಗೆ ಅಲ್ಲ ಎಂದು ನ್ಯಾಯಾಲಯ ತಿಳಿಸಿತು.
ಎರಡನ್ನೂ ಹೋಲಿಸುವಂತಿಲ್ಲ ಎಂದ ಅದು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿದ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಕೇಂದ್ರ ಸರ್ಕಾರ ಪಿಂಚಣಿ ನೀಡುತ್ತಿದೆ; ಅಂತಹ ಸಂಕಷ್ಟವನ್ನು ಅನುಕಂಪದ ನೇಮಕಾತಿಯೊಂದಿಗೆ ಹೋಲಿಸುವುದು ತರವಲ್ಲ ಎಂದು ಅದು ನುಡಿಯಿತು.
ಅಂತೆಯೇ ವಿಚ್ಛೇದಿತ ಮಹಿಳೆಯರು ತಮ್ಮ ಹೆತ್ತವರ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಗೆ ಅರ್ಹರಲ್ಲ . ಅವಿವಾಹಿತ, ಅವಲಂಬಿತ ಹೆಣ್ಣುಮಕ್ಕಳು ಮಾತ್ರ ಅಂತಹ ಹಕ್ಕನ್ನು ಪಡೆಯಬಹುದು ಎಂಬ ಕೇಂದ್ರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.
ಅವಿವಾಹಿತ ಹೆಣ್ಣುಮಕ್ಕಳ ಪರಿಸ್ಥಿತಿ ಪೋಷಕರ ಮೇಲೆ ಅವಲಂಬಿತರಾಗಿರುವ ವಿಚ್ಛೇದಿತ ಮಹಿಳೆಯರಂತೆಯೇ ಇರುತ್ತದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ 2019ರಲ್ಲಿ ಎತ್ತಿಹಿಡಿದಿದೆ ಎಂದು ನ್ಯಾಯಮೂರ್ತಿ ಲಕ್ಷ್ಮಿನಾರಾಯಣನ್ ತಿಳಿಸಿದರು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಗತಿಪರವಾಗಿದ್ದು ಸಮಾಜಮುಖಿ ದೃಷ್ಟಿಕೋನ ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದು ಹೇಳಿದ ಮೇಲೆ ಆ ನ್ಯಾಯಾಂಗ ಶಿಸ್ತನ್ನು ಪಾಲಿಸಬೇಕಾಗುತ್ತದೆ. ಅದನ್ನು ಬೇರೆ ರೀತಿ ವ್ಯಾಖ್ಯಾನಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ನುಡಿಯಿತು.
ಸುಭಾಷ್ ಚಂದ್ರ ಬೋಸ್ ನೇತೃತ್ವದ ಭಾರತೀಯ ರಾಷ್ಟ್ರೀಯ ಸೇನೆಯ ಭಾಗವಾಗಿ ಬರ್ಮಾದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಷಣ್ಮುಗ ತೇವರ್ ಅವರ ಪುತ್ರಿ ಪಿಂಚಣಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ತಮ್ಮ ತಂದೆಯನ್ನು ಬ್ರಿಟಿಷರು ಬಂಧಿಸಿ ಆರು ತಿಂಗಳ ಕಾಲ ಬರ್ಮಾದ ರಂಗೂನ್ ಜೈಲಿನಲ್ಲಿ ಇರಿಸಿದ್ದರು. ಅವರು ಜೈಲಿನಿಂದ ಬಿಡುಗಡೆಯಾಗುವ ಹೊತ್ತಿಗೆ ತಮ್ಮ ಕುಟುಂಬ ಬಡತನದ ದವಡೆಗೆ ಸಿಲುಕಿತ್ತು ಎಂದು ಅವರು ಅಳಲು ತೋಡಿಕೊಂಡಿದ್ದರು.
ಕೊನೆಗೆ ಕುಟುಂಬವು ಬರ್ಮಾದಿಂದ ಭಾರತಕ್ಕೆ ಸ್ಥಳಾಂತರಗೊಂಡಿತು. ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ಎರಡೂ ಅವರ ಕುಟುಂಬಕ್ಕೆ ಸ್ವಾತಂತ್ರ್ಯ ಹೋರಾಟಗಾರ ಪಿಂಚಣಿ ನೀಡಲು ಒಪ್ಪಿಕೊಂಡವು. ತೇವರ್ ಅವರ ಪತ್ನಿ 85ನೇ ವಯಸ್ಸಿನಲ್ಲಿ ಸಾಯುವವರೆಗೂ ಈ ಪಿಂಚಣಿಯನ್ನು ಪಡೆದಿದ್ದರು.
ತನ್ನ ತಾಯಿಯ ಮರಣದ ನಂತರ, ತೇವರ್ ಅವರ ಮಗಳು (ಅರ್ಜಿದಾರೆ) ಸ್ವತಂತ್ರ ಸೈನಿಕ ಸಮ್ಮಾನ್ ಪಿಂಚಣಿ ಯೋಜನೆ, 1980 (ಕೇಂದ್ರ ಸರ್ಕಾರದ ಯೋಜನೆ) ಅಡಿಯಲ್ಲಿ ನೀಡಲಾದ ಅಂತಹ ಪಿಂಚಣಿಯನ್ನು ತನ್ನ ಖಾತೆಗೆ ವರ್ಗಾಯಿಸಲು ಕೋರಿದ್ದರು.
ತಾಯಿ ಬದುಕಿದ್ದಾಗಲೇ ತಾವು ವಿವಾಹವಾಗಿದ್ದಾಗಿಯೂ ಪತಿಯ ಕ್ರೌರ್ಯದ ಕಾರಣಕ್ಕೆ ವಿಚ್ಛೇದನ ಪಡೆದಿದ್ದಾಗಿಯೂ ತಿಳಿಸಿದ್ದರು. ಬಳಿಕ ತಮ್ಮ ತಾಯಿಯ ಅವಲಂಬಿತಳಾಗಿದ್ದ ತಾನು ಆಕೆ ಸಾಯುವವರೆಗೆ ಒಟ್ಟಿಗೆ ವಾಸಿಸುತ್ತಿದ್ದುದಾಗಿ ತಿಳಿಸಿದ್ದರು. ತಾನು ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಬೇರೆ ಯಾವುದೇ ಮೂಲದಿಂದ ಆರ್ಥಿಕ ನೆರವು ಸಿಕ್ಕಿಲ್ಲ ಎಂದಿದ್ದರು.
ಕಳೆದ ಜುಲೈನಲ್ಲಿ ಅವರ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಪರಿಣಾಮ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಕ್ಟೋಬರ್ 22 ರಂದು, ನ್ಯಾಯಾಲಯ ಆಕೆಯ ನೆರವಿಗೆ ಧಾವಿಸಿದ್ದು ಅರ್ಜಿದಾರೆ ಪಿಂಚಣಿಗೆ ಅರ್ಹರು ಎಂದಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 8 ವಾರಗಳ ಒಳಗೆ ಪಿಂಚಣಿ ಬಿಡುಗಡೆ ಮಾಡಬೇಕು. ಅರ್ಜಿ ಸಲ್ಲಿಸಿದ ದಿನದಿಂದಲೇ ಅನ್ವಯವಾಗುವಂತೆ ಪಿಂಚಣಿಯನ್ನು ನೀಡಬೇಕು ಎಂದು ಅದು ಹೇಳಿತು.