

ತಾಯಿಯನ್ನು ಪೋಷಿಸುವ ಜವಾಬ್ದಾರಿ ಕೌಟುಂಬಿಕ ಬಾಧ್ಯತೆಯನ್ನು ಪ್ರತಿಬಿಂಬಿಸಬಹುದು. ಅದು ಶ್ಲಾಘನೀಯ ಭರವಸೆಯೂ ಆಗಿರಬಹುದು. ಆದರೆ, ಇಂತಹ ಅಂಶವೊಂದನ್ನೇ ಆಧರಿಸಿ ಆಡಳಿತಾತ್ಮಕ ನೀತಿಗೆ ವಿರುದ್ಧವಾಗಿ ಸರ್ಕಾರಿ ಉದ್ಯೋಗ ನೀಡುವಂತೆ ನ್ಯಾಯಾಲಯ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ಆದೇಶಿಸಿದೆ.
ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ನಿರ್ದೇಶಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿಗಳಾದ ಎಂ ನಾಗಪ್ರಸನ್ನ ಮತ್ತು ಹೇಮಾ ಕುಲಕರ್ಣಿ ಅವರ ವಿಭಾಗೀಯ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಕಷ್ಟದಲ್ಲಿರುವ ವ್ಯಕ್ತಿಯನ್ನು ಕಂಡು ನ್ಯಾಯಾಲಯವು ಹೊಸ ಫಲಾನುಭವಿ ವರ್ಗವೊಂದನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅನುಕಂಪದ ಆಧಾರದ ನೇಮಕಾತಿ ಎಂಬುದು ಅನಿವಾರ್ಯ ಪರಿಸ್ಥಿತಿಯಿಂದ ಉಂಟಾಗುವ ವಿನಾಯಿತಿಯೇ ಹೊರತು, ಕೌಟುಂಬಿಕ ಸಂಬಂಧದಿಂದ ಹುಟ್ಟುವ ಹಕ್ಕಲ್ಲ. ಹಾಗೆಯೇ, ಕುಟುಂಬದೊಳಗೆ ಉತ್ತರಾಧಿಕಾರದ ಮೂಲಕ ಉದ್ಯೋಗವನ್ನು ಮುಂದುವರಿಸಿಕೊಂಡು ಹೋಗುವ ವ್ಯವಸ್ಥೆಯೂ ಅಲ್ಲ’ ಎಂದು ಪೀಠ ಸ್ಪಷ್ಟಪಡಿಸಿದೆ.
‘ಕುಟುಂಬವೊಂದನ್ನು ಹಠಾತ್ ಬಡತನ ಅಥವಾ ಸಂಕಷ್ಟದಿಂದ ಪಾರು ಮಾಡುವುದು ಅನುಕಂಪದ ನೇಮಕಾತಿ ಯೋಜನೆಯ ಉದ್ದೇಶವೇ ಹೊರತು, ಕುಟುಂಬದೊಳಗೆ ಉತ್ತರಾಧಿಕಾರದ ಮೂಲಕ ಉದ್ಯೋಗವನ್ನು ಮುಂದುವರಿಸುವುದಲ್ಲ. ಈ ಯೋಜನೆಯಲ್ಲಿ ಅನುಕಂಪವು ಆತ್ಮದಂತಿರಬೇಕು ಮತ್ತು ಕಾನೂನು ಅದರ ಕಾವಲುಗಾರನಾಗಿರಬೇಕು’ ಎಂದು ಪೀಠ ಮಾರ್ಮಿಕವಾಗಿ ಹೇಳಿದೆ.
ಕುಟುಂಬದ ಆದಾಯಕ್ಕೆ ಆಧಾರವಾಗಿದ್ದ ಸದಸ್ಯರೊಬ್ಬರು ಅನಿರೀಕ್ಷಿತವಾಗಿ ಮೃತಪಟ್ಟಾಗ ಅವರ ಅವಲಂಬಿತರು ಎದುರಿಸುವ ಆರ್ಥಿಕ ಸಂಕಷ್ಟವನ್ನು ನಿವಾರಿಸುವುದೇ ಅನುಕಂಪದ ನೇಮಕಾತಿಯ ಹಿಂದಿನ ಆಶಯವಾಗಿದೆ. ಆದರೆ, ಸಹಾನುಭೂತಿ ಮತ್ತು ಅನುಕಂಪಕ್ಕೂ ಅರ್ಹತೆಯ ಮಿತಿಯಿದೆ. ಔದಾರ್ಯದ ಹೆಸರಿನಲ್ಲಿ ಆ ಮಿತಿಯನ್ನು ಮೀರುವುದಕ್ಕೆ ಅನುಕಂಪದ ಯೋಜನೆಯನ್ನು ಸಾಧನವನ್ನಾಗಿ ಬಳಸಲು ಅವಕಾಶ ನೀಡಲಾಗದು ಎಂದು ಪೀಠ ಎಚ್ಚರಿಸಿದೆ.
“ಅನುಕಂಪದ ಆಧಾರದ ನೇಮಕಾತಿ ಎಂಬುದು ಸಂಬಂಧದಿಂದ ಹುಟ್ಟುವ ಹಕ್ಕಲ್ಲ; ಅದು ಅಗತ್ಯದಿಂದ ಉಂಟಾಗುವ ವಿನಾಯಿತಿ. ಅವಲಂಬಿತ ಕುಟುಂಬವನ್ನು ಹಠಾತ್ ಬಡತನದಿಂದ ರಕ್ಷಿಸುವುದೇ ಇದರ ಉದ್ದೇಶ. ಉತ್ತರಾಧಿಕಾರದ ಮೂಲಕ ಉದ್ಯೋಗವನ್ನು ಶಾಶ್ವತಗೊಳಿಸುವುದಲ್ಲ” ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (ಕೆಕೆಆರ್ಟಿಸಿ) ವೀರೇಶ್ ಮಾಂತಪ್ಪ ಲೊಳಸಾರ ಅವರು 2008ರ ಮಾರ್ಚ್ 18ರಿಂದ 2023ರ ಸೆಪ್ಟೆಂಬರ್ 21ರವರೆಗೆ ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಸೇವೆಯಲ್ಲಿರುವಾಗಲೇ ಅವರು ಮೃತಪಟ್ಟಿದ್ದರು.
ವೀರೇಶ್ ಅವರ ಪತ್ನಿ ಸುನಂದಾ ಅವರು ಅದಕ್ಕೂ ಮುನ್ನ 2022ರ ಏಪ್ರಿಲ್ 9ರಂದು ಮೃತಪಟ್ಟಿದ್ದರು. ದಂಪತಿಗೆ ಮಕ್ಕಳಿರಲಿಲ್ಲ.
ಹೀಗಾಗಿ, ಅನುಕಂಪದ ಆಧಾರದ ಮೇಲೆ ತಮ್ಮ ಎರಡನೇ ಮಗ ಹಾಗೂ ವೀರೇಶ್ ಅವರ ತಮ್ಮ ಸಂಗಣ್ಣ ಮಾಂತಪ್ಪ ಲೊಳಸಾರ ಅವರಿಗೆ ಉದ್ಯೋಗ ನೀಡುವಂತೆ ಮೃತ ಚಾಲಕನ ತಾಯಿ ಮಾಂತವ್ವ ಅವರು ಕೆಕೆಆರ್ಟಿಸಿಗೆ ಮನವಿ ಸಲ್ಲಿಸಿದ್ದರು.
ಆದರೆ, ವೀರೇಶ್ ಅವರ ತಾಯಿಗೆ 65 ವರ್ಷ ವಯಸ್ಸಾಗಿರುವುದರಿಂದ ಅವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ನಿಗಮ ಮನವಿಯನ್ನು ತಿರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ, ತನ್ನ ಎರಡನೇ ಮಗ ಸಂಗಣ್ಣನಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಕೋರಿ ಮಾಂತವ್ವ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
2025ರ ಆಗಸ್ಟ್ನಲ್ಲಿ ಅರ್ಜಿಯನ್ನು ಪುರಸ್ಕರಿಸಿದ್ದ ಏಕಸದಸ್ಯ ಪೀಠ, ಸಂಗಣ್ಣ ಬಿನ್ ಮಾಂತಪ್ಪ ಲೊಳಸಾರ ಅವರನ್ನು ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸೂಕ್ತ ಹುದ್ದೆಗೆ 12 ವಾರಗಳೊಳಗೆ ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ಕೆಕೆಆರ್ಟಿಸಿಯ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗೆ ನಿರ್ದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಕೆಕೆಆರ್ಟಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠ ಮಾನ್ಯ ಮಾಡಿದ್ದು, ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿದೆ.