ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯುವುದು ಹಕ್ಕು ಅಲ್ಲ: ಕರ್ನಾಟಕ ಹೈಕೋರ್ಟ್‌

ಮೇಲ್ಮನವಿದಾರರ ಸಹೋದರ ಈಗಾಗಲೇ ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಹಾಗಾಗಿ, ಅರ್ಜಿದಾರರಿಗೂ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಮತ್ತೊಂದು ಉದ್ಯೋಗ ನೀಡಲಾಗದು ಎಂದು ಮೇಲ್ಮನವಿ ವಜಾಗೊಳಿಸಿದ ನ್ಯಾಯಾಲಯ.
High Court of Karnataka
High Court of Karnataka

ಕುಟುಂಬವೊಂದರ ಸದಸ್ಯರು ಈಗಾಗಲೇ ಸರ್ಕಾರದ ಅಧೀನದ ಒಂದು ಸಂಸ್ಥೆಯಲ್ಲಿ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಆ ಕುಟುಂಬದ ಮತ್ತೊಬ್ಬ ಸದಸ್ಯನಿಗೆ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲು ನಿರಾಕರಿಸಿದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್) ಕ್ರಮ ಪ್ರಶ್ನಿಸಿ ಬೆಂಗಳೂರಿನ ಉಲ್ಲಾಳ ಮುಖ್ಯ ರಸ್ತೆಯ ನಿವಾಸಿ ರಂಗನಾಥ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠವು ಈ ಆದೇಶ ಮಾಡಿದೆ.

ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯುವುದು ಹಕ್ಕಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯವು ಮೇಲ್ಮನವಿದಾರರ ಸಹೋದರ ಈಗಾಗಲೇ ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅರ್ಜಿದಾರರಿಗೂ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಮತ್ತೊಂದು ಉದ್ಯೋಗ ನೀಡಲಾಗದು ಎಂದು ತಿಳಿಸಿ ಮೇಲ್ಮನವಿ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ: ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ರಂಗನಾಥ್ ತಂದೆ ಎನ್ ರಾಮಯ್ಯ 2002ರ ಅಕ್ಟೋಬರ್‌ 7ರಿಂದ ದಿಢೀರ್ ನಾಪತ್ತೆಯಾಗಿದ್ದರು. 2010ರಲ್ಲಿ ಅನುಕಂಪದ ಆಧಾರದಲ್ಲಿ ತಮಗೆ ಉದ್ಯೋಗ ನೀಡುವಂತೆ ಕೋರಿ ರಂಗನಾಥ್ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಕೆಪಿಟಿಸಿಎಲ್ ತಿರಸ್ಕರಿಸಿತ್ತು. ಬಳಿಕ ತಂದೆ ನಾಪತ್ತೆಯಾದ ಕಾರಣ ಸಿವಿಲ್ ನ್ಯಾಯಾಲಯಕ್ಕೆ ದಾವೆ ಹೂಡಿದ್ದ ರಂಗನಾಥ್ ಅವರು ತಂದೆ ಹೆಸರಿನಲ್ಲಿ ಮರಣ ಪತ್ರ ವಿತರಿಸಲು ಬಿಬಿಎಂಪಿಗೆ ಆದೇಶಿಸುವಂತೆ ಕೋರಿದ್ದರು. ದಾವೆಯನ್ನು ಪುರಸ್ಕರಿಸಿ ಸಿವಿಲ್ ನ್ಯಾಯಾಲಯ ನೀಡಿದ್ದ ಸೂಚನೆ ಮೇರೆಗೆ ರಾಮಯ್ಯ ಹೆಸರಿನಲ್ಲಿ ಬಿಬಿಎಂಪಿಯು 2011ರಲ್ಲಿ ಮರಣ ಪ್ರಮಾಣ ಪತ್ರ ನೀಡಿತ್ತು.

2012ರಲ್ಲಿ ರಂಗನಾಥ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿ, ಅನುಕಂಪದ ಆಧಾರದಲ್ಲಿ ತಮಗೆ ನೌಕರಿ ನೀಡಲು ಕೆಪಿಟಿಸಿಎಲ್‌ಗೆ ಸೂಚಿಸುವಂತೆ ಕೋರಿದ್ದರು. ಆದರೆ, ಹೈಕೋರ್ಟ್ ಏಕ ಸದಸ್ಯ ಪೀಠವು ರಂಗನಾಥ್ ಮನವಿಯನ್ನು ಕಾನೂನು ರೀತ್ಯಾ ಪರಿಗಣಿಸುವಂತೆ ಕೆಪಿಟಿಸಿಎಲ್‌ಗೆ ನಿರ್ದೇಶಿಸಿತ್ತು. ಪ್ರಕರಣ ಪರಿಶೀಲಿಸಿದ್ದ ಕೆಪಿಟಿಸಿಎಲ್, ರಂಗನಾಥ್ ಕುಟುಂಬದ ಸದಸ್ಯರು ಇದೇ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದ ಕಾರಣ ಅದೇ ಕುಟಂಬದ ಮತ್ತೊಬ್ಬರಿಗೆ ಉದ್ಯೋಗಾವಕಾಶ ಕಲ್ಪಿಸಲಾಗದು ಎಂದು ತಿಳಿಸಿ 2013ರಲ್ಲಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ರಂಗನಾಥ್ ಮತ್ತೆ ಸಲ್ಲಿಸಿದ್ದ ಅರ್ಜಿಯನ್ನು 2014ರಲ್ಲಿ ತಿರಸ್ಕರಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠವು ಕೆಪಿಟಿಸಿಎಲ್ ಆದೇಶ ಎತ್ತಿಹಿಡಿದಿತ್ತು. ಆ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com