ಕೋವಿಡ್‌ನಿಂದ ಸಾವನ್ನಪ್ಪಿದ ಸಾರಿಗೆ ನೌಕರರಿಗೆ ಇನ್ನೂ ಬಿಡುಗಡೆಯಾಗದ ಪರಿಹಾರ: ಜ.27ಕ್ಕೆ ವಿಚಾರಣೆ

ಕೋವಿಡ್‌ನಿಂದ ಸಾರಿಗೆ ನೌಕರರು ಸಾವನ್ನಪ್ಪಿದ್ದರೆ, ಅವರ ಕುಟುಂಬಕ್ಕೆ ತಲಾ ₹30 ಲಕ್ಷ ಪರಿಹಾರ ಕಲ್ಪಿಸುವುದಾಗಿ ತಿಳಿಸಿ ಸಾರಿಗೆ ಇಲಾಖೆ 2021ರ ಫೆಬ್ರವರಿ 10ರಂದು ಸುತ್ತೋಲೆ ಹೊರಡಿಸಿತ್ತು.
Karnataka HC, COVID-19
Karnataka HC, COVID-19
Published on

ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ಕುಟುಂಬದ ಸದಸ್ಯರಿಗೆ ತಲಾ ₹ 30 ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಇದುವರೆಗೆ ಅದನ್ನು ಬಿಡುಗಡೆ ಮಾಡಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿದಾರರ ಪರ ವಕೀಲರು ಸೋಮವಾರ ತಿಳಿಸಿದ್ದಾರೆ.

ದಾವಣಗೆರೆಯ ತಾಹೀರ್ ಹುಸೈನ್ ಮತ್ತು ರಾಯಚೂರಿನ ಅಜೀಜ್ ಪಾಷಾ ಜಾಗೀರದಾರ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿ ಕಾಮೇಶ್ವರ ರಾವ್‌ ಮತ್ತು ಎಸ್‌ ರಾಚಯ್ಯ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ಪರ ವಕೀಲರಾದ ಪಿ ಉಸ್ಮಾನ್‌ ಅವರು “ಕೋವಿಡ್‌ ಸಂದರ್ಭದಲ್ಲಿ ಸಾವನ್ನಪ್ಪಿದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನೌಕರರಿಗೆ ಇದುವರೆಗೂ ₹ 30 ಲಕ್ಷ ಪರಿಹಾರವನ್ನು ನೀಡಿಲ್ಲ” ಎಂದು ಹೇಳಿದರು.

ಇದನ್ನು ಆಲಿಸಿದ ಪೀಠವು ಜನವರಿ 27ರಂದು ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ವಿಚಾರಣೆ ಮುಂದೂಡಿತು. ನ್ಯಾಯಾಲಯವು ಈ ಹಿಂದೆಯೇ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಕೋವಿಡ್‌ನಿಂದ ಸಾರಿಗೆ ನೌಕರರು ಸಾವನ್ನಪ್ಪಿದ್ದರೆ, ಅವರ ಕುಟುಂಬಕ್ಕೆ ತಲಾ ₹ 30 ಲಕ್ಷ ಪರಿಹಾರ ಕಲ್ಪಿಸುವುದಾಗಿ ತಿಳಿಸಿ ಸಾರಿಗೆ ಇಲಾಖೆ 2021ರ ಫೆಬ್ರವರಿ 10ರಂದು ಸುತ್ತೋಲೆ ಹೊರಡಿಸಿತ್ತು. ಮಾಹಿತಿ ಹಕ್ಕು ಕಾಯಿದೆ ಅಡಿ ಪಡೆದ ಮಾಹಿತಿ ಪ್ರಕಾರ 2020ರ ಮಾರ್ಚ್‌ನಿಂದ 2021ರ ಜೂನ್‌ವರಗೆ ಕೋವಿಡ್‌ನಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ 351 ನೌಕರರು ಮೃತಪಟ್ಟಿದ್ದಾರೆ ಎಂದು ವಿವರಿಸಲಾಗಿದೆ.

Also Read
ಕೋವಿಡ್‌ನಿಂದ ಸಾವನ್ನಪ್ಪಿದ ಸಾರಿಗೆ ನೌಕರರ ಕುಟುಂಬಕ್ಕೆ ಪರಿಹಾರ: ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

2021ರ ಫೆಬ್ರವರಿ 10ರಂದು ರಾಜ್ಯ ಸಾರಿಗೆ ಇಲಾಖೆ ಹೊರಡಿಸಿರುವ ಸುತ್ತೋಲೆ ಜಾರಿಗೊಳಿಸಬೇಕು. ಸಾರಿಗೆ ನಿಗಮಗಳ ನೌಕರರು ಕೋವಿಡ್‌ನಿಂದ ಮೃತಪಟ್ಟ ಪ್ರಕರಣಗಳ ಸಂಬಂಧ ಮೃತ ನೌಕರರ ಕುಟುಂಬ ಸದಸ್ಯರು ಅಥವಾ ಅವಲಂಬಿತರಿಗೆ ಯಾವುದೇ ವಿಳಂಬವಿಲ್ಲದೆ ಕೂಡಲೇ ₹ 30 ಲಕ್ಷ ಪರಿಹಾರ ಪಾವತಿಸುವುದನ್ನು ಖಾತರಿಪಡಿಸಬೇಕು. ಸಾರಿಗೆ ನೌಕರರ ಕುಟುಂಬಗಳಿಗೆ ಪರಿಹಾರ ವಿತರಿಸಲು ಅಗತ್ಯ ಹಣಕಾಸು ಬಿಡುಗಡೆ ಮಾಡಲು ಸರ್ಕಾರ ಮತ್ತು ಸಾರಿಗೆ ನಿಗಮಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com