ಲೋಕಾಯುಕ್ತ ಸಂಸ್ಥೆಯಲ್ಲಿ ವಿಚಾರಣೆ ನಡೆಸಲು ಬಾಕಿಯಿದ್ದ 25 ಅಕ್ರಮ ಆಸ್ತಿ (ಡಿಎ) ಪ್ರಕರಣಗಳ ಸಂಬಂಧ ತನಿಖೆಗೆ ಅನುಮತಿ ನೀಡಲು ಸಕ್ಷಮ ಪ್ರಾಧಿಕಾರ ನಿರಾಕರಿಸಿದೆ ಎಂದು ನಿವೃತ್ತಿಯ ಹೊಸ್ತಿಲಲ್ಲಿರುವ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ ಸೋಮವಾರ ಹೇಳಿದರು.
ತಮ್ಮ ನಿವೃತ್ತಿಗೂ ಮೊದಲು ಲೋಕಾಯುಕ್ತ ಕಚೇರಿಯಲ್ಲಿ ಕೊನೆಯ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪನೆಯಾಗುವ ಮೊದಲು ಲೋಕಾಯುಕ್ತದಲ್ಲಿ ದಾಖಲಾಗಿದ್ದ ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರದ ಅನುಮತಿ ಕೋರಲಾಗಿತ್ತು. ಈ ಪೈಕಿ 25 ಪ್ರಕರಣಗಳ ತನಿಖೆಗೆ ಅನುಮತಿ ನೀಡಲು ಸರ್ಕಾರ ನಿರಾಕರಿಸಿದೆ. 25 ಪ್ರಕರಣಗಳ ಸಂಬಂಧ ತನಿಖೆಗೆ ಅನುಮತಿ ನೀಡಲು ಸಕ್ಷಮ ಪ್ರಾಧಿಕಾರ ನಿರಾಕರಿಸಿರುವುದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ರಿಜಿಸ್ಟ್ರಾರ್‌ಗೆ ಸೂಚಿಸಿದ್ದೇನೆ. ನ್ಯಾಯಾಲಯದ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದರು.
“ಹಲವು ವರ್ಷಗಳ ಹಿಂದೆ ದಾಖಲಾಗಿರುವ 10 ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ತನಿಖೆಗೆ ಸರ್ಕಾರದಿಂದ ಅನುಮತಿ ಸಿಗಲು ಬಾಕಿ ಇದೆ. ಈ ಪೈಕಿ 2004, 2006, 2010, 2021ರಲ್ಲಿ ಐಎಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಎಂಜಿನಿಯರ್‌ಗಳು ಸೇರಿ ಸರ್ಕಾರದ ಉನ್ನತ ಹುದ್ದೆಯಲ್ಲಿರುವರು ಅಕ್ರಮ ಆಸ್ತಿ ಹೊಂದಿರುವ ಕುರಿತು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದವು. ಇದರ ತನಿಖೆಗೆ ಸರ್ಕಾರ ಅನುಮತಿ ನೀಡದ ಕಾರಣ ಅವು ಬಾಕಿ ಉಳಿದಿದೆ” ಎಂದು ವಿಶ್ವನಾಥ್ ಶೆಟ್ಟಿ ಬೇಸರಿಸಿದರು.
“ಎಸಿಬಿ ರಚನೆಯಿಂದ ಲೋಕಾಯುಕ್ತದ ಅಧಿಕಾರ ಮೊಟಕುಗೊಂಡಿದೆ ಎಂಬುದು ನಾನು ಇಲ್ಲಿಗೆ ಬರುವುದಕ್ಕೂ ಮೊದಲೇ ಗೊತ್ತಿತ್ತು. ಎಸಿಬಿಯನ್ನು ರದ್ದುಗೊಳಿಸಿ ಲೋಕಾಯುಕ್ತಕ್ಕೆ ಈ ಹಿಂದೆಯಿದ್ದ ಅಧಿಕಾರ ನೀಡಬೇಕು. ಆಗ ಭ್ರಷ್ಟರ ವಿರುದ್ಧ ಮಿನಮೇಷ ಎಣಿಸದೇ ಕ್ರಮಕೈಗೊಳ್ಳಬಹುದು. ಎಸಿಬಿಯ ಅಧಿಕಾರ ಅವಶ್ಯವಿದ್ದರೆ ಲೋಕಾಯುಕ್ತಕ್ಕೂ ಬಳಸಲು ಅನುಮತಿ ನೀಡಬೇಕು. ಆಗ ಲೋಕಾಯುಕ್ತಕ್ಕೆ ಹೆಚ್ಚಿನ ಬಲ ಬರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಅಧಿಕಾರಕ್ಕೆ ಬಂದ ಸಮಯದಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಇತ್ತು. ಆದರೆ, ಹಲವಾರು ಕಾರಣಗಳಿಂದ ಮನವಿ ತೀರ್ಮಾನ ಆಗಲಿಲ್ಲ.ಇದರಿಂದ ಬೇಸರವಾಗಿದೆ” ಎಂದರು.
ಸ್ಥಳೀಯ ಆಡಳಿತ ಸಂಸ್ಥೆಗಳಾದ ಪಟ್ಟಣ ಪಂಚಾಯತ್, ನಗರ ಪಾಲಿಕೆ ಮತ್ತು ಮಹಾ ನಗರಪಾಲಿಕೆಯ ಸದಸ್ಯರು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ವಿರುದ್ಧ ದುರ್ನಡತೆಗಳ ಆರೋಪಗಳು ಕೇಳಿ ಬಂದಾಗ ಅವರನ್ನು ಆಯಾ ಸ್ಥಾನದಿಂದ ಹಾಗೂ ಮುಂದಿನ 6 ವರ್ಷಗಳ ಅವಧಿಗೆ ಸದಸ್ಯತ್ವ ಸ್ಥಾನಕ್ಕೆ ಸ್ಪರ್ಧಿಸದಂತೆ ಅನರ್ಹಗೊಳಿಸಲು ಕರ್ನಾಟಕ ನಗರ ಪಾಲಿಕೆಗಳ ಕಾಯಿದೆ 1961ಕ್ಕೆ ಮತ್ತು ಮಹಾ ನಗರ ಪಾಲಿಕೆಗಳ ಕಾಯಿದೆ 1975ಕ್ಕೆ ತಿದ್ದುಪಡಿ ತರಲು ಸರ್ಕಾರಕ್ಕೆ ಲೋಕಾಯುಕ್ತದಿಂದ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಸ್ತುತ 8,036 ದೂರು ಪ್ರಕರಣಗಳು ಹಾಗೂ 2,430 ವಿಚಾರಣಾ ಹಂತದಲ್ಲಿರುವ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ಕಳೆದ 5 ವರ್ಷಗಳಲ್ಲಿ 20,549 ದೂರು ಪ್ರಕರಣಗಳು ಹಾಗೂ 2,431 ವಿಚಾರಣಾ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 13 ಸಾವಿರ ಸಣ್ಣ-ಪುಟ್ಟ ಇತರೆ (ಮಿಸಲೇನಿಯಸ್) ಪ್ರಕರಣ ದಾಖಲಾಗಿದ್ದು, ಈ ಪೈಕಿ 12 ಸಾವಿರ ಇತರೆ ಪ್ರಕರಣಗಳು ಇತ್ಯರ್ಥವಾಗಿವೆ. 2017 ಜನವರಿ 28ರಿಂದ ಇದುವರೆಗೆ ಲೋಕಾಯುಕ್ತ ಸಂಸ್ಥೆಯಲ್ಲಿ ಒಟ್ಟು 20,199 ದೂರು ಪ್ರಕರಣಗಳು ಹಾಗೂ 2,677 ವಿಚಾರಣಾ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಅವಧಿಯಲ್ಲಿ 2,122 ಪ್ರಕರಣಗಳಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆ ಕಾಲಂ 12(3) ರನ್ವಯ ಹಾಗೂ 587 ಪ್ರಕರಣಗಳಲ್ಲಿ ಕಲಂ 12(1)ರ ಅನ್ವಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಕಳೆದ 5 ವರ್ಷಗಳಲ್ಲಿ ಲೋಕಾಯುಕ್ತರು ಒಟ್ಟು 304 ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆ ಮಾಡಲು ಪ್ರಯತ್ನಿಸಿದ್ದಾರೆ. ಸಂಸ್ಥೆಯ ಕಾರ್ಯ ನಿರ್ವಹಣೆ ಪಾರದರ್ಶಕಗೊಳಿಸಲು ಅಂತರ್ಜಾಲದ ಉನ್ನತೀಕರಣ ಹಾಗೂ ಸಮಗ್ರ ಮಾಹಿತಿಗಳ ಬಿಡುಗಡೆ ಮಾಡಲಾಗಿದೆ.