ಸಾರ್ವಜನಿಕ ವಲಯದ ಕಂಪನಿಯಾದ ಕೋಲ್ ಇಂಡಿಯಾ ಲಿಮಿಟೆಡ್‌ಗೆ 2002ರ ಸ್ಪರ್ಧಾತ್ಮಕ ಕಾಯಿದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ [ಕೋಲ್ ಇಂಡಿಯಾ ಲಿಮಿಟೆಡ್ ಮತ್ತಿತರರು ಹಾಗೂ ಭಾರತೀಯ ಸ್ಪರ್ಧಾಆಯೋಗ ಇನ್ನಿತರರ ನಡುವಣ ಪ್ರಕರಣr].
ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್, ಬಿ ವಿ ನಾಗರತ್ನ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತೀರ್ಪು ನೀಡಿದ್ದು ಕಲ್ಲಿದ್ದಲು ಗಣಿಗಳ (ರಾಷ್ಟ್ರೀಕರಣ) ಕಾಯಿದೆ ಇರುವುದರಿಂದ ಸ್ಪರ್ಧಾ ಕಾಯಿದೆ ತಮಗೆ ಅನ್ವಯಿಸುವುದಿಲ್ಲ ಎಂಬ ಕೋಲ್ ಇಂಡಿಯಾದ ವಾದವನ್ನು ಅದು ತಿರಸ್ಕರಿಸಿದೆ.
ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಮಂಡಳಿ (ಸಿಒಎಂಪಿಎಟಿ- ಕಾಂಪ್ಯಾಟ್) ಡಿಸೆಂಬರ್ 2016ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೋಲ್ ಇಂಡಿಯಾ ಸಲ್ಲಿಸಿದ್ದ ಪ್ರಧಾನ ಮನವಿಯ ಜೊತೆಗೆ ಇತರೆ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
ಅಕ್ಟೋಬರ್ 2014 ರ ಭಾರತೀಯ ಸ್ಪರ್ಧಾತ್ಮಕ ಆಯೋಗದ ಆದೇಶ ಪ್ರಶ್ನಿಸಿದ್ದ ಕೋಲ್ ಇಂಡಿಯಾದ ಅರ್ಜಿಯನ್ನು ಕಾಂಪ್ಯಾಟ್ ವಜಾಗೊಳಿಸಿತ್ತು. ಸಾರ್ವಜನಿಕ ವಲಯದ ಕಲ್ಲಿದ್ದಲು ಕಂಪನಿಯು ಸ್ಪರ್ಧಾತ್ಮಕ ಕಾಯಿದೆಯನ್ನು ಉಲ್ಲಂಘಿಸಿ, ಉಷ್ಣ ಉತ್ಪಾದಕರಿಗೆ ಒದಗಿಸುವ ಕೋಕಿಂಗೇತರ ಕಲ್ಲಿದ್ದಲಿನ ಉತ್ಪಾದನೆ ಮತ್ತು ಪೂರೈಕೆಯ ವಿಷಯದಲ್ಲಿ ತನಗಿರುವ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಸಿಸಿಐ ಪತ್ತೆ ಹಚ್ಚಿತ್ತು. ಈ ಹಿನ್ನೆಲೆಯಲ್ಲಿ ಕೋಲ್ ಇಂಡಿಯಾ ಈ ಬಗೆಯ ಸ್ಪರ್ಧಾ ವಿರೋಧಿ ನಡೆ ನಿಲ್ಲಿಸಬೇಕು ಎಂದು ಅದು ತಾಕೀತು ಮಾಡಿತ್ತು.
ಆರಂಭದಲ್ಲಿ ಕೋಲ್ ಇಂಡಿಯಾಗೆ ₹1733.05 ಕೋಟಿ ದಂಡ ವಿಧಿಸಲಾಗಿತ್ತು. ಕಾಂಪ್ಯಾಟ್ ಮೊದಲ ಸುತ್ತಿನ ದಾವೆಯಲ್ಲಿ ಪ್ರಕರಣವನ್ನು ಮರು ವಿಚಾರಣೆ ನಡೆಸುವಂತೆ ಸೂಚಿಸಿದಾಗ ದಂಡದ ಮೊತ್ತವನ್ನು ₹591.01 ಕೋಟಿಗೆ ಇಳಿಸಲಾಯಿತು.
ಮಹಾರಾಷ್ಟ್ರ ಮೂಲದ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕಂಪನಿ ಸಾಯಿ ವಾರ್ಧಾ ಸಲ್ಲಿಸಿದ ಮಾಹಿತಿಯ ಮೇರೆಗೆ ಸ್ಪರ್ಧಾ ಕಾವಲುಗಾರ ಎನಿಸಿಕೊಂಡಿರುವ ಸಿಸಿಐ ಕಾರ್ಯ ನಿರ್ವಹಿಸಿತ್ತು.
ಕೋಲ್ ಇಂಡಿಯಾ ಪರವಾಗಿ ಹಿರಿಯ ನ್ಯಾಯವಾದಿ ಹಾಗೂ ಮಾಜಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ವಾದ ಮಂಡಿಸಿದರು. ಸಿಸಿಐಯನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್ ಪ್ರತಿನಿಧಿಸಿದ್ದರು.