ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ, ವಿಶ್ವವಿದ್ಯಾಲಯ ಆಯೋಜಿಸುವ ಪರೀಕ್ಷೆಗಳ ದಿನಾಂಕಗಳಿಗೂ ಪರಸ್ಪರ ತಿಕ್ಕಾಟ ಆಗದಂತೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಮುಂಚಿತವಾಗಿಯೇ ಪರಿಗಣಿಸಿ ದಿನಾಂಕ ನಿಗದಿ ಮಾಡಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.
ಬಿ ಕಾಂ 1, 3 ಮತ್ತು 5ನೇ ಸೆಮಿಸ್ಟರ್ ಪರೀಕ್ಷಾ ದಿನಾಂಕವನ್ನು ಹೊಸದಾಗಿ ನಿಗದಿ ಮಾಡಬೇಕು ಎಂಬ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬೆಂಗಳೂರು ವಿಶ್ವವಿದ್ಯಾಲಯ ಮೌಲ್ಯಮಾಪನ ರಿಜಿಸ್ಟ್ರಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ಬಳಿಕವು ಪರೀಕ್ಷಾ ದಿನಾಂಕಗಳನ್ನು ನಿಗದಿ ಮಾಡುವಾಗ ವಿಶ್ವವಿದ್ಯಾಲಯ ಇತರೆ ಪರೀಕ್ಷಾ ದಿನಾಂಕಗಳ ಜತೆ ತಿಕ್ಕಾಟಕ್ಕೆ ಎಡೆ ಮಾಡಿಕೊಡದಂತೆ ವಿದ್ಯಾರ್ಥಿಗಳ ಅಹವಾಲು ಆಲಿಸಿ ನಂತರ ನಿಗದಿಪಡಿಸಬೇಕು ಎಂದು ಆದೇಶಿಸಿದ ಪೀಠ ಅರ್ಜಿ ವಿಲೇವಾರಿ ಮಾಡಿತು.
ಸಿ ಎ ಫೌಂಡೇಷನ್ ಪರೀಕ್ಷೆ ಹಾಗೂ ಸಿ ಎ ಇಂಟರ್ ಮೀಡಿಯೇಟ್ ಪರೀಕ್ಷೆ ಹಾಗೂ ಬಿ ಕಾಂ 1, 3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳ ದಿನಾಂಕ ಒಂದೇ ದಿನ ಇದ್ದ ಕಾರಣ ಹೈಕೋರ್ಟ್ ಏಕಸದಸ್ಯ ಪೀಠ ಹೊಸದಾಗಿ ಪರೀಕ್ಷಾ ದಿನಾಂಕ ನಿಗದಿಪಡಿಸುವಂತೆ ವಿಶ್ವವಿದ್ಯಾಲಯಕ್ಕೆ ಆದೇಶಿಸಿತ್ತು. ಆನಂತರ ವಿಭಾಗೀಯ ಪೀಠವು ಪರೀಕ್ಷೆ ಎಂದಿನಂತೆ ನಡೆಯಲು ಅನುಮತಿಸಿತ್ತು. ಹೀಗಾಗಿ, ಜನವರಿ ೧೩ರಿಂದ ಪರೀಕ್ಷೆಗಳು ನಡೆಯುತ್ತಿವೆ.