

ವಿಶಾಲ ಸಾರ್ವಜನಿಕ ಹಿತಾಸಕ್ತಿಯ ಆಧಾರದ ಹೊರತಾಗಿಯೂ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ನಿರ್ಬಂಧಿಸುವ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯಿದೆ (ಡಿಪಿಡಿಪಿ) ಮೂಲಕ ಆರ್‌ಟಿಐ ಕಾಯಿದೆಗೆ ಮಾಡಲಾದ ತಿದ್ದುಪಡಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಪ್ರಕರಣ ಸೂಕ್ಷ್ಮ ಸಂಗತಿಯನ್ನು ಒಳಗೊಂಡಿದ್ದು ಪರಸ್ಪರ ವಿರುದ್ಧ ಹಿತಾಸಕ್ತಿಗಳ ಸಮತೋಲನದ ಪ್ರಶ್ನೆಯನ್ನು ಒಳಗೊಂಡಿದೆ ಎಂದು ಸಿಜೆಐ ಸೂರ್ಯ ಕಾಂತ್ ನೇತೃತ್ವದ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ ಪಂಚೋಲಿ ಅವರಿದ್ದ ಪೀಠ ತಿಳಿಸಿತು.
“‘ವೈಯಕ್ತಿಕ ಮಾಹಿತಿ ಎಂದರೆ ಏನು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಿ, ಗೊಂದಲಗಳನ್ನು ನಿವಾರಿಸಬೇಕಿದೆ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟರು. “ಇದು ಸಂಕೀರ್ಣ ಹಾಗೂ ಸೂಕ್ಷ್ಮ ವಿಚಾರವಾಗಿದೆ. ಏಕೆಂದರೆ ಇದು ಎರಡೂ ಕಡೆಯ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದೆ,” ಎಂದು ನ್ಯಾಯಾಲಯ ವಿವರಿಸಿತು. ಅಂತೆಯೇ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿ ನ್ಯಾಯಾಲಯ ಆದೇಶಿಸಿತು.
ಡಿಪಿಡಿಪಿ ಕಾಯಿದೆ 2023 ಹಾಗೂ 2025ರ ನಿಯಮಾವಳಿಗಳ ಸಾಂವಿಧಾನಿಕತೆ ಪ್ರಶ್ನಿಸಿದ್ದ ರಿಪೋರ್ಟರ್ಸ್ ಕಲೆಕ್ಟೀವ್, ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್ಫರ್ಮೇಷನ್ ಸಂಘಟನೆ ಹಾಗೂ ವಕೀಲ ಆಕರ್ಷ್ ಕಾಮ್ರಾ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ಆಲಿಸಿತು.
ಡಿಪಿಡಿಪಿ ಕಾಯಿದೆಯ ಸೆಕ್ಷನ್ 44(3) ಮೂಲಕ ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಜೆ) ತಿದ್ದುಪಡಿಗೊಂಡಿದ್ದು, ಸಾರ್ವಜನಿಕ ಚಟುವಟಿಕೆ ಅಥವಾ ಹೊಣೆಗಾರಿಕೆಗೆ ಸಂಬಂಧಿಸಿದ ಮಾಹಿತಿಯನ್ನೂ “ವೈಯಕ್ತಿಕ ಮಾಹಿತಿ” ಎಂದು ಹೇಳಿ ನೀಡದಿರಲು ಅವಕಾಶ ಒದಗಿಸುತ್ತದೆ. ಇದು ಸಂವಿಧಾನದ ಕಲಂ 19(1)(ಎ) ಅಡಿಯಲ್ಲಿ ಇರುವ ಮಾಹಿತಿ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಅತಿರೇಕದ ನಿರ್ಬಂಧ ವಿಧಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಇದಲ್ಲದೆ, ಸಾರ್ವಜನಿಕ ಹಿತಾಸಕ್ತಿ ಅಥವಾ ಮಾಧ್ಯಮ ಉದ್ದೇಶಕ್ಕಾಗಿ ದತ್ತಾಂಶ ಸಂಸ್ಕರಣೆಗೆ ಯಾವುದೇ ವಿನಾಯಿತಿ ನೀಡಿಲ್ಲ. ಸರ್ಕಾರಕ್ಕೆ ದತ್ತಾಂಶ ವಿಶ್ವಸ್ಥ ಸಂಸ್ಥೆಗಳಿಂದ ಮಾಹಿತಿ ಕೇಳುವ ಅಧಿಕಾರ ನೀಡಿರುವ ವಿಧಿಗಳು ಅಸ್ಪಷ್ಟ ಮತ್ತು ಅತಿವ್ಯಾಪಕವಾಗಿದ್ದು, ಸಂವಿಧಾನದ 14, 19 ಮತ್ತು 21 ವಿಧಿಗಳನ್ನು ಉಲ್ಲಂಘಿಸುತ್ತವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ದತ್ತಾಂಶ ರಕ್ಷಣಾ ಮಂಡಳಿ ರಚನೆ ಹಾಗೂ ದಂಡ ವ್ಯವಸ್ಥೆಯೂ ವಾಕ್ ಸ್ವಾತಂತ್ರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅದು ಅದು ಆತಂಕ ವ್ಯಕ್ತಪಡಿಸಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ವೃಂದಾ ಗ್ರೋವರ್ ವಾದ ಮಂಡಿಸಿದರು.