ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಕ್ರಮ; ಅರ್ಜಿ ಇತ್ಯರ್ಥಕ್ಕೆ ಮನವಿ

ಬೆಳಗ್ಗೆ ಎಸ್ಟೀಮ್ ಮಾಲ್‌ನಿಂದ ಬಸವೇಶ್ವರ ಜಂಕ್ಷನ್‌ವರೆಗಿನ 9.5 ಕಿ.ಮೀ ರಸ್ತೆಯನ್ನು 8-11 ಗಂಟೆ ವೇಳೆಯಲ್ಲಿ ಕೇವಲ 22 ನಿಮಿಷ, ಸಂಜೆ 5-8ಗಂಟೆ ವೇಳೆಯಲ್ಲಿ ಕೇವಲ 15:38 ನಿಮಿಷದಲ್ಲಿ ಕ್ರಮಿಸಲು ಸಾಧ್ಯ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖ.
Karnataka High Court
Karnataka High Court

ಸಂಚಾರ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ (ಬಸವೇಶ್ವರ ಜಂಕ್ಷನ್‌ನಿಂದ ಹೆಬ್ಬಾಳ ಮೇಲ್ಸೇತುವರೆಗೆ) ಸಂಚಾರ ಪೊಲೀಸ್ ವಿಭಾಗ, ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್‌ನಿಂದ ಸಮಗ್ರವಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ಅಫಿಡವಿಟ್‌ ಸಲ್ಲಿಸಿದ್ದಾರೆ.

ಬಳ್ಳಾರಿ ರಸ್ತೆ ಅಗಲೀಕರಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಅಫಿಡವಿಟ್‌ ಸಲ್ಲಿಸಲಾಗಿದೆ.

ಇದನ್ನು ದಾಖಲಿಸಿಕೊಂಡ ಪೀಠವು ಅಫಿಡವಿಟ್‌ನಲ್ಲಿ ಉಲ್ಲೇಖವಾಗಿರುವ ಅಂಶ ಪರಿಶೀಲಿಸಿ ಎರಡು ವಾರದಲ್ಲಿ ಉತ್ತರ ಸಲ್ಲಿಸುವಂತೆ ಅರ್ಜಿದಾರ ಸಂಸ್ಥೆ ಪರ ವಕೀಲ ಜಿ ಆರ್ ಮೋಹನ್‌ ಅವರಿಗೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್‌ 12ಕ್ಕೆ ಮುಂದೂಡಿತು.

ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ನಗರ ಸಂಚಾರ ಪೊಲೀಸ್ ವಿಭಾಗ, ಬಿಬಿಎಂಪಿ, ಬಿಎಂಆರ್‌ಸಿಎಲ್, ಬಿಡಿಎ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಚರ್ಚಿಸಲಾಗಿದೆ. ನಗರ ಸಂಚಾರ ಪೊಲೀಸ್ ವಿಭಾಗ, ಬಿಎಂಟಿಸಿ, ಬಿಎಂಆರ್‌ಸಿಎಲ್ ಮತ್ತು ಬಿಬಿಎಂಪಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ವತಿಯಿಂದ ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗಿದೆ. ಅವುಗಳನ್ನು ಪರಿಗಣಿಸಿ ಅರ್ಜಿ ಇತ್ಯರ್ಥಪಡಿಸಬೇಕು ಎಂದು ಅಫಿಡವಿಟ್‌ನಲ್ಲಿ ಕೋರಲಾಗಿದೆ.

ಬಸವೇಶ್ವರ ವೃತ್ತದಿಂದ ಎಸ್ಟೀಮ್ ಮಾಲ್‌ವರೆಗೆ ಅಧಿಕ ಸಂಚಾರ ದಟ್ಟಣೆಯಿರುವ ಒಟ್ಟು 9.5 ಕಿ.ಮೀ ಉದ್ದದ ಬಳ್ಳಾರಿ ರಸ್ತೆಯನ್ನು ಮೂರು ವಿಭಾಗಗಳಾಗಿ (ಎಸ್ಟೀಮ್ ಮಾಲ್-ಮೇಖ್ರಿ ವೃತ್ತ, ಮೇಖ್ರಿ ವೃತ್ತ-ಪ್ಯಾಲೇಸ್ ಗುಟ್ಟಳ್ಳಿ ಮತ್ತು ಪ್ಯಾಲೇಸ್ ಗುಟ್ಟಳ್ಳಿ-ಬಸವೇಶ್ವರ ಜಂಕ್ಷನ್‌ವರೆಗೆ) ಸಂಚಾರ ಪೊಲೀಸರು ವಿಂಗಡಿಸಿದ್ದಾರೆ. ಸಂಚಾರ ದಟ್ಟಣೆ ಇರುವ ಸಂದರ್ಭದಲಿ ಸಾದರಹಳ್ಳಿ ಜಂಕ್ಷನ್‌ನಿಂದ ಹೆಬ್ಬಾಳ ಜಂಕ್ಷನ್‌ವರೆಗೆ ಮತ್ತು ದೇವನಹಳ್ಳಿ ಟೋಲ್ ಸವೀಸ್ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರ ನಿಲ್ಲಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಹೆಬ್ಬಾಳ ಜಂಕ್ಷನ್‌ಅಲ್ಲಿ ಡೌನ್ ರ್ಯಾಂಪ್ ಹಾಗೂ ಸರ್ವೀಸ್ ರಸ್ತೆ ರೂಪಿಸಲಾಗಿದೆ. ಮೇಖ್ರಿ ವೃತ್ತದಿಂದ ಹೆಬ್ಬಾಳ ಸರ್ವೀಸ್ ರಸ್ತೆ ಮತ್ತು ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್ ರೈಲ್ವೆ ಸೇತುವೆವರೆಗೆ ವಿವಿಧ ಸಂಚಾರ ತಿರುವು ನೀಡಲಾಗಿದೆ. ಯೂ ಟರ್ನ್ ಮತ್ತು ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ವಿವರಿಸಲಾಗಿದೆ.

ಎಸ್ಟೀಮ್ ಮಾಲ್‌ನಿಂದ ಬಸವೇಶ್ವರ ಜಂಕ್ಷನ್‌ವರೆಗೆ ಸಂಚಾರ ದಟ್ಟಣೆ ನಿವಾರಿಸಲು 7 ಪೊಲೀಸ್ ಇನ್ಸ್‌ಪೆಕ್ಟರ್, 10 ಪೊಲೀಸ್ ಸಬ್ ಇನ್ಸ್‌ಪೆಕ್ಟರ್, 32 ಸಹಾಯಕ ಸಬ್ ಇನ್ಸ್‌ಪೆಕ್ಟರ್, 109 ಮುಖ್ಯ ಪೇದೆ/ಪೇದೆ ಮತ್ತು 55 ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಈ ಎಲ್ಲಾ ಕ್ರಮಗಳಿಂದ ಬೆಳಗ್ಗೆ ಎಸ್ಟೀಮ್ ಮಾಲ್‌ನಿಂದ ಬಸವೇಶ್ವರ ಜಂಕ್ಷನ್‌ವರೆಗಿನ 9.5 ಕಿ.ಮೀ ರಸ್ತೆಯನ್ನು 8ರಿಂದ 11 ಗಂಟೆ ವೇಳೆಯಲ್ಲಿ ಕೇವಲ 22 ನಿಮಿಷ ಹಾಗೂ ಸಂಜೆ 5ರಿಂದ ರಾತ್ರಿ 8ಗಂಟೆ ವೇಳೆಯಲ್ಲಿ ಕೇವಲ 15:38 ನಿಮಿಷದಲ್ಲಿ ಕ್ರಮಿಸಲು ಸಾಧ್ಯವಾಗುತ್ತಿದೆ. ಈ ಹಿಂದೆ ಕ್ರಮವಾಗಿ 47.55 ನಿಮಿಷ ಮತ್ತು 25.13 ನಿಮಿಷ ಸಮಯ ತಗುಲುತ್ತಿತ್ತು ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಅಲ್ಲದೆ, ವಾಹನ ಸಂಚಾರ ದಟ್ಟಣೆ ತಗ್ಗಿಸಲು ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಯಲ್ಲಿ ಬಿಬಿಎಂಪಿ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಂಡಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯನ್ನು ಸಂಪರ್ಕಿಸಲು ನೆಲಮಂಗಲ, ದೊಡ್ಡಬಳ್ಳಾಪುರ ಮಾರ್ಗವಾಗಿ ಕೆಲ ಪರ್ಯಾಯ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಹಾಗೆಯೇ, 15 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ ಅಗರ, ಕೋರಮಂಗಲ ಮತ್ತು ಡೈರಿ ವೃತ್ತದ ಮಾರ್ಗವಾಗಿ ಮೂರನೇ ಹಂತದ ಮೆಟ್ರೋ ರೈಲು ಮಾರ್ಗ ನಿರ್ಮಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com