![[ಕನ್ನಡ ಕಡ್ಡಾಯ] ಕೇಂದ್ರದ ನಿಲುವು ಸ್ಪಷ್ಟ; ರಾಜ್ಯದ ನಿಲುವು ಪುನರ್ ಪರಿಗಣಿಸಲು ನಿರ್ದೇಶಿಸಲಾಗುವುದು ಎಂದ ಹೈಕೋರ್ಟ್](https://gumlet.assettype.com/barandbench-kannada%2F2021-10%2F9243ed5d-354b-4c8a-aaaa-f79e78717763%2FWhatsApp_Image_2021_10_07_at_7_03_49_PM.jpeg?rect=0%2C0%2C1280%2C720&auto=format%2Ccompress&fit=max)
ಪದವಿ ಹಂತದಲ್ಲಿ ಭಾಷೆಯಾಗಿ ಕನ್ನಡ ಕಡ್ಡಾಯ ಕಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತನ್ನ ನಿಲುವು ಸ್ಪಷ್ಟಪಡಿಸಿದೆ. ಹೀಗಾಗಿ, ಕನ್ನಡ ಕಡ್ಡಾಯ ಮಾಡಿರುವ ನಿಲುವನ್ನು ಪುನರ್ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಹೇಳಿದೆ.
ಪದವಿ ಹಂತದಲ್ಲಿ ಭಾಷೆಯಾಗಿ ಕನ್ನಡ ಕಡ್ಡಾಯ ಕಲಿಕೆಯ ಆದೇಶವನ್ನು ವಿರೋಧಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್, ವ್ಯೋಮಾ ಲಿಂಗ್ವಿಸ್ಟಿಕ್ ಲ್ಯಾಬ್ಸ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ (ಪಿಐಎಲ್) ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಭಾಷೆಯ ಅಧ್ಯಯನ ಮುಂದುವರಿಸಲು ಸ್ವತಂತ್ರರು ಎಂದು ಆದೇಶ ಮಾಡಬೇಕು ಎಂದು ಕೋರಿ ಶಿವಕುಮಾರ್ ಕೆ ಜಿ ಸೇರಿದಂತೆ ಆರು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಶಿವಕುಮಾರ್ ಕೆ ಜಿ ಸೇರಿದಂತೆ ಆರು ವಿದ್ಯಾರ್ಥಿಗಳನ್ನು ಪ್ರತಿನಿಧಿಸಿರುವ ವಕೀಲ ಶ್ರೀಧರ್ ಪ್ರಭು ಅವರು “ಕನ್ನಡ ಕಲಿಕೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರವು ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದೆ. ಹೀಗಾಗಿ, ನಮ್ಮ ಮನವಿಯನ್ನು ಪ್ರತ್ಯೇಕಗೊಳಿಸಿ ಮನವಿ ಇತ್ಯರ್ಥಪಡಿಸಬೇಕು” ಎಂದು ಕೋರಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ ಬಿ ನರಗುಂದ್ ಅವರು “ಅರ್ಜಿದಾರರ ದೃಷ್ಟಿಯಿಂದ ಮನವಿ ವಿಲೇವಾರಿ ಮಾಡುವುದು ಸೂಕ್ತವಿರಬಹುದು. ಆದರೆ, ಅಡ್ವೊಕೇಟ್ ಜನರಲ್ ಅನುಪಸ್ಥಿತಿಯಲ್ಲಿ ಪ್ರಕರಣ ನಿರ್ಧರಿಸುವುದು ಸರಿಯಲ್ಲ. ಅಲ್ಲದೇ, ರಾಜ್ಯ ಸರ್ಕಾರವು ತನ್ನ ನಿಲುವನ್ನು ಪುನರ್ ಪರಿಶೀಲಿಸುವ ಕುರಿತು ಆಲೋಚಿಸುತ್ತಿದೆ. ಈ ವಿಚಾರವನ್ನು ನಾನು ಪ್ರಸ್ತಾಪಿಸುವುದು ಸರಿಯಲ್ಲ. ಸಂಬಂಧಪಟ್ಟವರು ಅದನ್ನು ಹೇಳಬೇಕು" ಎಂದು ರಾಜ್ಯ ಸರ್ಕಾರದ ವಕೀಲರತ್ತ ಬೆರಳು ಮಾಡಿದರು.
ಇದಕ್ಕೆ ಸಿಜೆ ಅವರು “ಕನ್ನಡ ಕಡ್ಡಾಯ ಕಲಿಕೆ ವಿಚಾರವನ್ನು ಪುನರ್ ಪರಿಗಣಿಸಲು ನಾವು ರಾಜ್ಯ ಸರ್ಕಾರಕ್ಕೆ ಹಿಂದೆ ಸಮಯ ನೀಡಿದ್ದೆವು. ಆದರೆ, ರಾಜ್ಯವು ಅದನ್ನು ಮುಂದುವರಿಸಲು ನಿರ್ಧರಿಸಿದ್ದರಿಂದ ನಾವು ಆಕ್ಷೇಪಾರ್ಹ ಆದೇಶಕ್ಕೆ ಮಧ್ಯಂತರ ನೀಡಿದ್ದೇವೆ. ಅಡ್ವೊಕೇಟ್ ಜನರಲ್ ಅವರು ಬರಲಿ, ಪ್ರಕರಣ ಆಲಿಸುತ್ತೇವೆ” ಎಂದರು.
ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು “ನಮ್ಮ ಕೋರಿಕೆ ಆಲಿಸುವ ಸಂಬಂಧ ಸಮಯ ನೀಡಿ. ಬಳಿಕ ಅಂತಿಮ ವಿಚಾರಣೆಯ ಕುರಿತು ನೀವು ನಿರ್ಧರಿಸಬಹುದು. ಕೇಂದ್ರ ಸರ್ಕಾರವು ತನ್ನ ನಿಲುವು ಸ್ಪಷ್ಟಪಡಿಸಿರುವುದರಿಂದ ಸಾಂವಿಧಾನಿಕ ಸಿಂಧುತ್ವ ನಿರ್ಧರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದರು.
ಇದೆಲ್ಲವನ್ನು ಆಲಿಸಿದ ಪೀಠವು ಅಡ್ವೊಕೇಟ್ ಜನರಲ್ ಅವರು ವಿಚಾರಣೆಯಲ್ಲಿ ಭಾಗಿಯಾಗಬೇಕು ಎಂದಿದ್ದು, ವಿಚಾರಣೆಯನ್ನು ಏಪ್ರಿಲ್ 4ಕ್ಕೆ ಮುಂದೂಡಿತು.