
ಆರೋಪಿಯು ನೈಜಾಂಶಗಳನ್ನು ನ್ಯಾಯಾಲಯದಿಂದ ಮುಚ್ಚಿಡುವುದು ಅವರ ಜಾಮೀನು ಮನವಿಯನ್ನು ತಿರಸ್ಕರಿಸಲು ಕಾರಣವಾಗಬಹುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಪ್ರಕರಣದ ವಿಚಾರಣೆಯೊಂದರ ವೇಳೆ ಹೇಳಿದೆ [ಡೀನ್ ಮೊಹಮದ್ ವರ್ಸಸ್ ಹರಿಯಾಣ ಸರ್ಕಾರ].
ಅರ್ಜಿಯು ಪ್ರಾಮಾಣಿಕ ಅಂಶಗಳಿಂದ ಕೂಡಿಲ್ಲದೆ ಹೋದಲ್ಲಿ ಜಾಮೀನು ನೀಡುವ ಪರವಾಗಿ ತನ್ನ ವಿವೇಚನಾಧಿಕಾರವನ್ನು ಬಳಸಲು ನ್ಯಾಯಾಲಯವು ತಿರಸ್ಕರಿಸಬಹುದು ಎಂದು ನ್ಯಾ. ಪಂಕಜ್ ಜೈನ್ ಅವರು ಆದೇಶದಲ್ಲಿ ಹೇಳಿದ್ದಾರೆ.
"ಅರ್ಜಿಯು ಪ್ರಾಮಾಣಿಕ ಅಂಶಗಳ ಕೊರತೆಯನ್ನು ಉಳ್ಳದ್ದಾಗಿದ್ದರೆ ನ್ಯಾಯಾಲಯವು ತನ್ನ ವಿವೇಚನೆಯನ್ನು ಅರ್ಜಿದಾರರ ಪರವಾಗಿ ಬಳಸಲು ತಿರಸ್ಕರಿಸಬಹುದು" ಎಂದು ನ್ಯಾಯಾಲಯವು ಹೇಳಿತು. ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯವು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ನ್ಯಾಯಾಲಯದ ದಿಕ್ಕು ತಪ್ಪಿಸಿದ್ದ ಅರ್ಜಿದಾರರು ಯಾವುದೇ ಪರಿಗಣನೆಗೆ ಒಳಪಡಲು ಅನರ್ಹರು ಎಂದು ಸರ್ವೋಚ್ಚ ನ್ಯಾಯಾಲಯ ವೆಲ್‌ಕಮ್ ಹೋಟೆಲ್ ವರ್ಸಸ್ ಆಂಧ್ರ ಪ್ರದೇಶ ಸರ್ಕಾರದ ಪ್ರಕರಣದಲ್ಲಿ ತೀರ್ಪು ನೀಡಿರುವುದನ್ನು ನ್ಯಾ. ಜೈನ್ ಉಲ್ಲೇಖಿಸಿದರು. ಈ ಹಿನ್ನೆಲೆಯಲ್ಲಿ ಜಾಮೀನು ಮನವಿಯನ್ನು ತಿರಸ್ಕರಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಲು ಕೋರಿದ್ದ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು.