ದಾಬೋಲ್ಕರ್ ಹಿಂದೂ ವಿರೋಧಿ ಎಂದು ಹಣೆಪಟ್ಟಿ ಹಚ್ಚಿ ಹಂತಕರು ತಮ್ಮ ಕೃತ್ಯ ಸಮರ್ಥಿಸಿಕೊಂಡಿದ್ದು ಖಂಡನೀಯ: ಪುಣೆ ನ್ಯಾಯಾಲಯ
ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಮರಣದ ಐದು ವರ್ಷಗಳ ನಂತರ ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನವನ್ನು ನಂಬಿ ಅವರನ್ನು ಹಿಂದೂ ವಿರೋಧಿ ಎಂದು ಕರೆದು ಅಪರಾಧಿಗಳು ಅವರ ಹತ್ಯೆಯನ್ನು ಸಮರ್ಥಿಸಿಕೊಂಡ ವಿಧಾನ ತುಂಬಾ ವಿಚಿತ್ರ ಮತ್ತು ಖಂಡನೀಯ ಎಂದು ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ದೋಷಿಗಳು ಎಂದು ಶುಕ್ರವಾರ ಪ್ರಕಟಿಸಿದ ಪುಣೆ ನ್ಯಾಯಾಲಯದ ಆದೇಶ ತಿಳಿಸಿದೆ.
ಆರೋಪಿಗಳು ಮತ್ತು ಪ್ರತಿವಾದಿ ವಕೀಲರು ಅಂತಹ ಪ್ರತಿವಾದವನ್ನು ಎತ್ತಿದ್ದು ಮಾತ್ರವಲ್ಲದೆ ದಾಬೋಲ್ಕರ್ ಅವರ ವ್ಯಕ್ತಿತ್ವವನ್ನು ಹಾಳುಗಡೆವಲು ಯತ್ನಿಸಿದ್ದಾರೆ ಎಂದು ಸೆಷನ್ಸ್ ನ್ಯಾಯಾಧೀಶ ಪಿ ಪಿ ಜಾಧವ್ ತಿಳಿಸಿದರು.
“ಇದೇ ವೇಳೆ ಮೃತ ಡಾ. ನರೇಂದ್ರ ದಾಭೋಲ್ಕರ್ ಅವರನ್ನು ಹಿಂದೂ ವಿರೋಧಿ ಎಂದು ಹೆಸರಿಸುವ ಮೂಲಕ ಅವರ ಹತ್ಯೆಯನ್ನು ಸಮರ್ಥಿಸುವುದು ಪ್ರತಿವಾದದ ವಿಧಾನವಾಗಿತ್ತು. ಈ ಯತ್ನದಲ್ಲಿ ವಕೀಲರಾದ ಸಾಲ್ಶಿಂಗೀಕರ್ ಅವರು ನರೇಂದ್ರ ದಾಬೋಲ್ಕರ್ ಅವರ ಮರಣದ ಐದು ವರ್ಷಗಳ ನಂತರ ಪ್ರಕಟವಾದ ವಾರ್ಷಿಕ ಪತ್ರಿಕೆಯೊಂದನ್ನು ಉಲ್ಲೇಖಿಸಿದರು. ಈ ವಿಧಾನ ತುಂಬಾ ವಿಚಿತ್ರ ಮತ್ತು ಖಂಡನೀಯ” ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ. ದಾಭೋಲ್ಕರ್ ಅವರೊಂದಿಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಿಟ್ಟರೆ, ದೋಷಿಗಳಾಗಿರುವ ಇಬ್ಬರು ಆರೋಪಿಗಳು ದಾಭೋಲ್ಕರ್ ಅವರ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಹೊಂದಿರಲಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಇದಲ್ಲದೆ, ಅಪರಾಧಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಆಧಾರದ ಮೇಲೆ, ಯೋಜನೆಯ ಹಿಂದಿನ ಪ್ರಮುಖ ಸೂತ್ರಧಾರ ಇನ್ನೊಬ್ಬರಿದ್ದು ಅವರನ್ನು ಕಾನೂನಿನ ಮುಂದೆ ನಿಲ್ಲಿಸಲು ವಿಫಲವಾದ ಪುಣೆ ಪೊಲೀಸರು ಮತ್ತು ಸಿಬಿಐಯನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
"ಅಪರಾಧದ ಹಿಂದಿನ ಮುಖ್ಯ ಸೂತ್ರಧಾರ ಬೇರೊಬ್ಬರಿದ್ದಾರೆ. ಪುಣೆ ಪೊಲೀಸರು ಮತ್ತು ಸಿಬಿಐ ಆ ಸೂತ್ರಧಾರರನ್ನು ಹೊರಗೆಳೆಯುವಲ್ಲಿ ವಿಫಲವಾಗಿದೆ. ಇದು ಅವರ ವೈಫಲ್ಯವೇ ಅಥವಾ ಅಧಿಕಾರದಲ್ಲಿರುವ ಯಾವುದೋ ವ್ಯಕ್ತಿಯ ಪ್ರಭಾವದಿಂದ ಅವರ ಕಡೆಯಿಂದ ಉದ್ದೇಶಪೂರ್ವಕ ನಿಷ್ಕ್ರಿಯತೆ ಉಂಟಾಗಿದೆಯೇ ಎಂಬುದನ್ನು ಅವು ಆತ್ಮಾವಲೋಕನ ಮಾಡಿಕೊಳ್ಳಬೇಕು " ಎಂದು ತೀರ್ಪು ಹೇಳಿದೆ.
ಗಮನಾರ್ಹವಾಗಿ ಡಿಪೊಸಿಷನ್‌ಗಳು, ಪಾಟಿ ಸವಾಲಿನ ವೇಳೆ ಆರೋಪಿಗಳಿಗೆ ನೀಡಿದ ಸಲಹೆಗಳು ಮತ್ತು ಪ್ರತಿವಾದದ ವಾದಗಳ ಆಧಾರದ ಮೇಲೆ, ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಮತ್ತಿತರ ಹಿಂದೂ ಸಂಘಟನೆಗಳು ದಾಬೋಲ್ಕರ್ ವಿರುದ್ಧ ಕಟುವಾದ ದ್ವೇಷಭಾವ ತಳೆದಿದ್ದವು ಎಂಬುದು ಸ್ಫಟಿಕದಷ್ಟೇ ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ತಿಳಿಸಿತು.
ಶುಕ್ರವಾರ ನೀಡಿದ ತೀರ್ಪಿನಲ್ಲಿ ಆರೋಪಿಗಳಾದ ಸಚಿನ್ ಅಂದುರೆ, ಶರದ್ ಕಲಾಸ್ಕರ್ ತಪ್ಪಿತಸ್ಥರೆಂದು ಘೋಷಿಸಿದ ನ್ಯಾಯಾಲಯ, ತಲಾ ₹ 5 ಲಕ್ಷ ದಂಡದೊಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ವೀರೇಂದ್ರಸಿನ್ಹ ತಾವಡೆ, ವಿಕ್ರಮ್ ಭಾವೆ ಹಾಗೂ ಸಂಜೀವ್ ಪುನಳೇಕರ್ ಅವರನ್ನು ಖುಲಾಸೆಗೊಳಿಸಲಾಗಿದೆ.
ತಾವಡೆ ವಿರುದ್ಧ ಕೊಲೆಯ ಉದ್ದೇಶದ ಪುರಾವೆಗಳಿದ್ದರೂ, ಪುನಳೇಕರ್ ಮತ್ತು ಭಾವೆ ವಿರುದ್ಧ ಸಮಂಜಸವಾದ ಅನುಮಾನವಿದೆ ಎಂದು ಗಮನಿಸಿದ ನ್ಯಾಯಾಲಯ, ವಿಶ್ವಾಸಾರ್ಹ ಸಾಕ್ಷ್ಯ ನೀಡುವ ಮೂಲಕ ಅವರು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದಿದೆ.
ಅಂದುರೆ ಮತ್ತು ಕಲಾಸ್ಕರ್ ಬಂದೂಕುಗಳಿಂದ ಗುಂಡು ಹಾರಿಸಿ ದಾಭೋಲ್ಕರ್ ಅವರನ್ನು ಹತ್ಯೆ ಮಾಡಿರುವುದು ಸಂಶಯಾತೀತ ಎಂದು ನ್ಯಾಯಾಲಯ ನುಡಿದಿದೆ.
ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಸಂಸ್ಥಾಪಕರಾದ ನರೇಂದ್ರ ದಾಭೋಲ್ಕರ್ ಅವರನ್ನು ಇಬ್ಬರು ದುಷ್ಕರ್ಮಿಗಳು 2013ರಲ್ಲಿ ಪುಣೆಯಲ್ಲಿ ಗುಂಡಿಕ್ಕಿ ಕೊಂದಿದ್ದರು.