ಕುದುರೆ ರೇಸ್‌ಗೆ ಷರತ್ತು ಬದ್ಧ ಅನುಮತಿಗೆ ಕೋರಿಕೆ: ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಮೇ 18, 23, 25 ಮತ್ತು 26ರಂದು ರೇಸಿಂಗ್‌ ಇರುವುದಾಗಿ ವೇಳಾಪಟ್ಟಿ ಪ್ರಕಟಿಸಲಾಗಿದೆ. 800 ಕುದುರೆಗಳಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 20 ಸಾವಿರ ಜನರ ಜೀವನೋಪಾಯ ರೇಸಿಂಗ್‌ ಚಟುವಟಿಕೆ ಅವಲಂಬಿಸಿದೆ ಎಂದು ವಾದ.
Bangalore Club
Bangalore Club

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಮೇ 25 ಮತ್ತು 26ರಂದು ರೇಸ್‌ ಚಟುವಟಿಕೆ ನಡೆಸಲು ಷರತ್ತು ಬದ್ಧ ಅನುಮತಿ ನೀಡುವ ಸಂಬಂಧ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಸೂಚಿಸಿದೆ.

ಪರವಾನಗಿ ನವೀಕರಿಸಲು ಕೋರಿ ಸಲ್ಲಿಸಿರುವ ಮನವಿ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ಟರ್ಫ್‌ ಕ್ಲಬ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ರಜಾಕಾಲೀನ ಏಕಸದಸ್ಯ ಪೀಠ ನಡೆಸಿತು.

ಪರವಾನಗಿ ನವೀಕರಣ ಕೋರಿ ಸಲ್ಲಿಸಿರುವ ಮನವಿಯನ್ನು ರಾಜ್ಯ ಸರ್ಕಾರ ಈವರೆಗೂ ಪರಿಗಣಿಸಿಲ್ಲ ಮತ್ತು ಮನವಿ ಪರಿಗಣಿಸದೆ ಇರುವುದಕ್ಕೆ ಯಾವುದೇ ಕಾರಣ ತಿಳಿಸಿಲ್ಲ. ಈಗಾಗಲೇ ಮೇ 18, 23, 25 ಮತ್ತು 26 ರಂದು ರೇಸಿಂಗ್‌ ಇರುವುದಾಗಿ ವೇಳಾಪಟ್ಟಿ ಪ್ರಕಟಿಸಲಾಗಿದೆ. 800 ಕುದುರೆಗಳಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 20 ಸಾವಿರ ಜನರ ಜೀವನೋಪಾಯ ರೇಸಿಂಗ್‌ ಚಟುವಟಿಕೆ ಅವಲಂಬಿಸಿದೆ ಎಂಬ ಟರ್ಫ್‌ ಕ್ಲಬ್‌ ಕುದುರೆ ಮಾಲೀಕರ ಪರ ವಕೀಲರ ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿಗಳು ಸರ್ಕಾರಕ್ಕೆ ನಿಲುವು ತಿಳಿಸುವಂತೆ ಸೂಚಿಸಿದರು.

ಮೇ 25 ಮತ್ತು 26ರಂದು ರೇಸಿಂಗ್‌ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸಾಕಷ್ಟು ಜನರ ಜೀವನೋಪಾಯ ರೇಸಿಂಗ್‌ ಚಟುವಟಿಕೆ ಮೇಲೆ ಅವಲಂಬಿಸಿದೆ. ಹೀಗಾಗಿ, ಮೇ 25 ಮತ್ತು 26 ರಂದು ರೇಸಿಂಗ್‌ ಚಟುವಟಿಕೆಗೆ ಷರತ್ತುಬದ್ಧ ಅನುಮತಿ ನೀಡುವ ಸಂಬಂಧ ಸರ್ಕಾರ ಪ್ರಸ್ತಾವ ಹಾಗೂ ಸೂಚನೆಗಳೊಂದಿಗೆ ಗುರುವಾರ (ಮೇ 23) ನ್ಯಾಯಾಲಯಕ್ಕೆ ಉತ್ತರಿಸಬೇಕು. ಏನೆಲ್ಲಾ ಷರತ್ತು ವಿಧಿಸಬೇಕು ಎಂಬ ಕುರಿತು ಸರ್ಕಾರ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಬಹುದು. ನಂತರ ಪರವಾನಗಿ ನವೀಕರಣಕ್ಕೆ ಕೋರಿರುವ ಅರ್ಜಿ ಪರಿಗಣಿಸುವ ಅಥವಾ ಪರಿಗಣಿಸದೇ ಇರುವ ಬಗ್ಗೆ ಸರ್ಕಾರ ತೀರ್ಮಾನಿಸಬಹುದು ಎಂದ ಪೀಠವು ಅರ್ಜಿ ವಿಚಾರಣೆಯನ್ನು ಮೇ 23ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಟರ್ಫ್‌ ಕ್ಲಬ್‌ ಮನವಿ ಪರಿಗಣಿಸಲು ಆರು ಅಥವಾ ನಾಲ್ಕು ವಾರ ಕಾಲಾವಕಾಶ ನೀಡಬೇಕು. ರೇಸಿಂಗ್‌ ಚಟುವಟಿಕೆಗೆ ಮಧ್ಯಂತರ ಅನುಮತಿ ನೀಡುವ ಬದಲು ಕ್ಲಬ್‌ ಸಲ್ಲಿಸಿರುವ ಇಡೀ ಮನವಿ ಪರಿಗಣಿಸಿ ನಿರ್ಧಾರ ಪ್ರಕಟಿಸಲಾಗುವುದು” ಎಂದು ತಿಳಿಸಿದರು.

ಇದಕ್ಕೆ ಒಪ್ಪದ ಪೀಠವು “ಪರವಾನಗಿ ನವೀಕರಣದ ಕುರಿತು ನಂತರ ತೀರ್ಮಾನಿಸಿ. ಮೇ 25 ಮ್ತು 26ರಂದು ಷರತ್ತು ಬದ್ಧ ಅನುಮತಿ ನೀಡಿ. ಅದಕ್ಕೆ ಯಾವ ಷರತ್ತು ವಿಧಿಸಬೇಕು ಎಂಬುದನ್ನು ಸರ್ಕಾರ ತೀರ್ಮಾನಿಸಬಹುದು” ಎಂದು ಮೌಖಿಕವಾಗಿ ಸೂಚಿಸಿತು.

ವಿಚಾರಣೆ ವೇಳೆ ಟರ್ಫ್‌ ಕ್ಲಬ್‌ ಮತ್ತು ಕುದುರೆ ಮಾಲೀಕರ ಪರ ವಕೀಲ ಕೆ ಎನ್‌ ಫಣೀಂದ್ರ ಅವರು “ಮಾರ್ಚ್‌ ಕೊನೆಯವರೆಗೂ ರೇಸಿಂಗ್‌ ಚಟುವಟಿಕೆ ನಡೆಸಲು ಕ್ಲಬ್‌ ಪರವಾನಗಿ ಹೊಂದಿತ್ತು. ನಂತರ ಪರವಾನಗಿ ನವೀಕರಣಕ್ಕೆ ಕೋರಿ ಮನವಿ ಪತ್ರ ಸಲ್ಲಿಸಲಾಗಿದೆ. ಮೇ, ಜೂನ್‌ ಮತ್ತು ಜುಲೈ ತಿಂಗಳಲ್ಲಿ ಆನ್‌ಲೈನ್‌ ಹಾಗೂ ಆಫ್‌ಲೈನ್‌ ರೇಸಿಂಗ್‌ ಚಟುವಟಿಕೆ ನಡೆಸಲು ಅನುಮತಿ ಕೋರಿ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಹಲವು ಮನವಿ ಸಲ್ಲಿಸಲಾಗಿದೆ. ಆದರೆ, ಸರ್ಕಾರ ಈವರೆಗೂ ತಮ್ಮ ಮನವಿ ಪರಿಗಣಿಸಿಲ್ಲ. ಇದರಿಂದ ರೇಸ್‌ ಚಟುವಟಿಕೆ ನಡೆಸಲಾಗುತ್ತಿಲ್ಲ. ಮತ್ತೊಂದೆಡೆ ಅದರಿಂದ ಬರುವ ಆದಾಯವೂ ನಷ್ಟವಾಗುತ್ತಿದೆ. ಸದ್ಯಕ್ಕೆ ಸುಮಾರು 10 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಟರ್ಫ್‌ ಕ್ಲಬ್‌ನಲ್ಲಿ 800 ಕುದುರೆಗಳಿವೆ. ಅವುಗಳ ನಿರ್ವಹಣೆ ಮಾಡಬೇಕಿದೆ. ಇನ್ನೂ ಕ್ಲಬ್‌ನಲ್ಲಿ ನೂರಾರು ಮಂದಿ ಕೆಲಸಗಾರರು ಇದ್ದಾರೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 20 ಸಾವಿರ ಜನರ ಜೀವನೋಪಾಯ ರೇಸಿಂಗ್‌ ಚಟುವಟಿಕೆ ಮೇಲೆ ಅವಲಂಬಿತವಾಗಿದೆ. ಹೀಗಿದ್ದರೂ ಸರ್ಕಾರ ಮಾತ್ರ ಕ್ಲಬ್‌ನ ಮನವಿ ಪರಿಗಣಿಸುತ್ತಿಲ್ಲ ಎಂದು ಪೀಠದ ಗಮನ ಸೆಳೆದರು.

Kannada Bar & Bench
kannada.barandbench.com