ಹಠಾತ್ ಪರಿಶೀಲನೆ ನಡೆಸಿ, ಮೂಲಸೌಕರ್ಯವಿಲ್ಲದ ಕಾನೂನು ಕಾಲೇಜುಗಳನ್ನು ಮುಚ್ಚಿಸಿ: ಬಿಸಿಐಗೆ ದೆಹಲಿ ಹೈಕೋರ್ಟ್‌ ಸೂಚನೆ

ಬಿಸಿಐ, ಹಿರಿಯ ವಕೀಲರು, ಶಿಕ್ಷಣತಜ್ಞರು, ಸುಪ್ರೀಂ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳು ಸೇರಿದಂತೆ ಕಾನೂನು ಶಿಕ್ಷಣದಲ್ಲಿನ ಪರಿಸ್ಥಿತಿಯನ್ನು ಸುಧಾರಿಸಲು ಎಲ್ಲ ಭಾಗೀದಾರರು ತ್ವರಿತವಾಗಿ ಮುಂದಾಗಬೇಕಾದ ಸಮಯ ಬಂದಿದೆ ಎಂದ ನ್ಯಾಯಾಲಯ.
Bar Council of India (BCI)
Bar Council of India (BCI)

ಕಾನೂನು ಶಿಕ್ಷಣಕ್ಕೆ ಅಗತ್ಯವಿರುವ ಮೂಲಸೌಕರ್ಯ ಮತ್ತು ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿರುವ ಕಾನೂನು ಶಿಕ್ಷಣ ಸಂಸ್ಥೆಗಳಿಗೆ ಹಠಾತ್‌ ಭೇಟಿ ನೀಡಿ ಪರಿಶೀಲನೆ ನಡೆಸಲು ವಿಶೇಷ ತಂಡವೊಂದನ್ನು ರಚಿಸುವಂತೆ ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ದೆಹಲಿ ಹೈಕೋರ್ಟ್‌ ನಿರ್ದೇಶನ ನೀಡಿದೆ [ನ್ಯೂ ಮಿಲೆನಿಯಂ ಶಿಕ್ಷಣ ಸಂಸ್ಥೆ ವರ್ಸಸ್‌ ಜಿಜಿಎಸ್‌ಐಪಿಯು].

ಕಾನೂನು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವರದಿಯನ್ನು ಬಿಸಿಐ ತನ್ನ ಅಂತರ್ಜಾಲ ತಾಣದಲ್ಲಿ ಪರಿಶೀಲನೆ ನಡೆಸಿದ ಒಂದು ತಿಂಗಳ ಒಳಗೆ ಅಪ್‌ಲೋಡ್‌ ಮಾಡಬೇಕು. ಒಂದು ವೇಳೆ ಕನಿಷ್ಠ ಮೂಲಸೌಕರ್ಯ ಅಗತ್ಯವನ್ನೂ ಹೊಂದಿಲ್ಲದೆ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವುದು ಕಂಡುಬಂದರೆ ಕೌನ್ಸಿಲ್‌ ಕೂಡಲೇ ಅವುಗಳನ್ನು ಮುಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನ್ಯಾ. ಚಂದ್ರಧಾರಿ ಸಿಂಗ್‌ ನೇತೃತ್ವದ ಏಕಸದಸ್ಯ ಪೀಠವು ಆದೇಶಿಸಿದೆ.

ಗುರು ಗೋಬಿಂದ್‌ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಕಾನೂನು ಶೈಕ್ಷಣಿಕ ಕೋರ್ಸ್‌ಗಳ 110 ಸೀಟುಗಳ ಹಂಚಿಕೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.

"ಶಿಕ್ಷಣ ವ್ಯವಸ್ಥೆಯು ಎದುರಿಸುತ್ತಿರುವ ರೋಗವನ್ನು ಗುಣಪಡಿಸಲು ಇದು ಅತ್ಯಗತ್ಯವಾದ ಚಿಕಿತ್ಸೆಯಾಗಿದೆ" ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿತು.

ಬಿಸಿಐ, ಹಿರಿಯ ವಕೀಲರು, ಶಿಕ್ಷಣತಜ್ಞರು, ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳು ಸೇರಿದಂತೆ ಕಾನೂನು ಶಿಕ್ಷಣದಲ್ಲಿನ ಪ್ರಸಕ್ತ ಪರಿಸ್ಥಿತಿಯನ್ನು ಸುಧಾರಿಸಲು ಎಲ್ಲ ಭಾಗೀದಾರರು ತ್ವರಿತವಾಗಿ ಮುಂದಾಗಬೇಕಾದ ಸಮಯ ಬಂದಿದೆ ಎಂದ ನ್ಯಾಯಾಲಯ ಅಭಿಪ್ರಾಯಪಟ್ಟಿತು.

Related Stories

No stories found.
Kannada Bar & Bench
kannada.barandbench.com