ಸಾರ್ವತ್ರಿಕ ಚುನಾವಣೆಗೂ ಮುನ್ನ ಮಹಿಳಾ ಮೀಸಲಾತಿ ಜಾರಿಗೆ ಕೋರಿಕೆ: ಸುಪ್ರೀಂ ಕೋರ್ಟ್‌ಗೆ ಕಾಂಗ್ರೆಸ್ ನಾಯಕಿ ಪಿಐಎಲ್

ಮಸೂದೆಯಿಂದಾಗಿ ಸಂವಿಧಾನಕ್ಕೆ ಸೇರಿಸಲಾದ 334 ಎ ವಿಧಿಯಿಂದ "ಈ ಉದ್ದೇಶಕ್ಕಾಗಿ ಕ್ಷೇತ್ರ ಪುನರ್‌ವಿಂಗಡಣೆ ಕಾರ್ಯ ಕೈಗೊಂಡ ನಂತರ…“ ಎಂಬ ಪದ ತೆಗೆದು ಹಾಕುವಂತೆ ಅರ್ಜಿ ಕೋರಿದೆ.
Supreme Court and Women's Reservation Bill
Supreme Court and Women's Reservation Bill

ಹೊಸದಾಗಿ ಕ್ಷೇತ್ರ ಪುನರ್‌ವಿಂಗಡಣೆಗಾಗಿ ಕಾಯದೆ 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ಈಚೆಗೆ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಮಸೂದೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಕಾಂಗ್ರೆಸ್‌ ನಾಯಕಿ ಡಾ. ಜಯಾ ಠಾಕೂರ್ ಸುಪ್ರೀಂ ಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ [ಡಾ. ಜಯಾ ಠಾಕೂರ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಈ ನಿಟ್ಟಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯಿಂದಾಗಿ ಸಂವಿಧಾನಕ್ಕೆ ಸೇರಿಸಲಾದ 334 ಎ ವಿಧಿಯಿಂದ "after an exercise of delimitation is undertaken for this purpose..." (ʼಮಹಿಳಾ ಮೀಸಲಾತಿ ಉದ್ದೇಶಕ್ಕಾಗಿ ಕ್ಷೇತ್ರ ಪುನರ್‌ವಿಂಗಡಣೆ ಮಾಡಿದ ನಂತರ) ಎಂಬ ಪದ ತೆಗೆದು ಹಾಕುವಂತೆ ಅರ್ಜಿ ಕೋರಿದೆ.

ಸಂವಿಧಾನಕ್ಕೆ ಮಾಡಲಾದ ತಿದ್ದುಪಡಿಯನ್ನು ಅನಿಶ್ಚಿತ ಅವಧಿಯವರೆಗೆ ತಡೆಹಿಡಿಯಲು ಸಾಧ್ಯವಿಲ್ಲ. ಕಾಯಿದೆಯ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಯಾವಾಗಲೂಮ ಪೂರ್ವಕಲ್ಪನೆಯೊಂದು ಇರುತ್ತದೆ. ಹಾಗಾಗಿ ತಿದ್ದಪಡಿ ಮತ್ತು ಕಾಯಿದೆಯು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಘೋಷಿಸದ ವಿನಾ ಅವುಗಳ ಪರಿಣಾಮ ಮತ್ತು ಕಾರ್ಯಾಚರಣೆಯನ್ನು ತಡೆಹಿಡಿಯುವಂತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ತನ್ನ ವಾದ ಬೆಂಬಲಿಸಲು ಭರತೇಶ್‌ ಡಿ ಪರೀಶ್‌ ಮತ್ತು ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ, ದೇಸೀಯ ಮುರುಪೊಕ್ಕು ದ್ರಾವಿಡ ಕಳಗಂ ಮತ್ತು ಭಾರತ ಚುನಾವಣಾ ಆಯೋಗ ನಡುವಣ ಪ್ರಕರಣ ಹಗೈ ಹೆಲ್ತ್ ಫಾರ್ ಮಿಲಿಯನ್ಸ್ ಟ್ರಸ್ಟ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ 2021ಕ್ಕೆ ನಡೆಯಬೇಕಿತ್ತು. ಆದರೂ ಕೋವಿಡ್‌ ಕಾರಣಕ್ಕೆ ವಿಳಂಬವಾಗಿದ್ದು 2024 ರಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಹಿಂದೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿಗೆ ಬೆಂಬಲ ಸೂಚಿಸಿದ್ದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಸಂಬಂಧ ಜನಗಣತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಏಕೆ ನಡೆಸಬೇಕು ಎಂದು ಪ್ರಶ್ನಿಸಿದ್ದರು. ಬದಲಿಗೆ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಮೀಸಲಾತಿ ಒದಗಿಸುವುದಕ್ಕಾಗಿ ಜಾತಿ ಗಣತಿ ನಡೆಸಬೇಕು ಎಂದು ಒತ್ತಾಯಿಸಿದ್ದರು.

ಆದರೆ ಮಹಿಳೆಯರಿಗೆ ಯಾವ ಕ್ಷೇತ್ರ ಮೀಸಲಿಡಬೇಕೆಂದು ನಿರ್ಧರಿಸಲು ಜನಗಣತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಅಗತ್ಯ ಎಂದು ಮರುದಿನ, ರಾಜ್ಯಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಸಮಜಾಯಿಷಿ ನೀಡಿದ್ದರು.

Kannada Bar & Bench
kannada.barandbench.com