ಅದಾನಿ ಸಮೂಹದ ವಿರುದ್ಧ ಕ್ರಿಮಿನಲ್ ತನಿಖೆಗೆ ಕೋರಿ ಸುಪ್ರೀಂಗೆ ಅರ್ಜಿ: ಎಸ್‌ಬಿಐ, ಎಲ್ಐಸಿ ಕುರಿತೂ ಪ್ರಶ್ನೆ

ಮಾರುಕಟ್ಟೆಯಲ್ಲಿ ಷೇರಿನ ಬೆಲೆ ₹ 1,600 ಮತ್ತು ₹ 1,800ರ ನಡುವೆ ಇದ್ದಾಗ ಎಲ್ಐಸಿ ಮತ್ತು ಎಸ್‌ಬಿಐ ಪ್ರತಿ ಷೇರಿಗೆ ₹ 3,200 ದರದಲ್ಲಿ ಅದಾನಿ ಷೇರುಗಳಲ್ಲಿ ಹೂಡಿಕೆ ಮಾಡಿವೆ ಎಂದು ಅರ್ಜಿಯಲ್ಲಿ ಆರೋಪ.
Gautham Adani and Supreme Court
Gautham Adani and Supreme Court
Published on

ವಿವಿಧ ಕಾನೂನುಗಳ ಪ್ರಕಾರ ಅದಾನಿ ಸಮೂಹದ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ಅರ್ಜಿಯೊಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದು ಬೆಲೆ ಹೆಚ್ಚಿದ್ದರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಜೀವ ವಿಮಾ ನಿಗಮ (ಎಲ್‌ಐಸಿ) ಅದಾನಿ ಸಮೂಹದ ಷೇರುಗಳಲ್ಲಿ ಹೂಡಿಕೆ ಮಾಡಿರುವುದನ್ನು ಪ್ರಶ್ನಿಸಿದೆ.

ಮಧ್ಯಪ್ರದೇಶದ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಡಾ.ಜಯಾ ಠಾಕೂರ್ ಅವರು ಸಲ್ಲಿಸಿದ ಅರ್ಜಿ “ಮಾರುಕಟ್ಟೆಯಲ್ಲಿ ಷೇರಿನ ಬೆಲೆ ₹1,600 ಮತ್ತು ₹1,800ರ ನಡುವೆ ಇದ್ದಾಗ ಎಲ್‌ಐಸಿ ಮತ್ತು ಎಸ್‌ಬಿಐ ಪ್ರತಿ ಷೇರಿಗೆ ₹ 3,200 ದರದಲ್ಲಿ ಅದಾನಿ ಷೇರುಗಳಲ್ಲಿ ಹೂಡಿಕೆ ಮಾಡಿವೆ” ಎಂದು ದೂರಿದೆ.

ಹಿಂಡೆನ್‌ಬರ್ಗ್‌ ಸಂಶೋಧನಾ ವರದಿ ಹಿನ್ನೆಲೆಯಲ್ಲಿ ಅದಾನಿ ಸಮೂಹದ ಕಂಪನಿಗಳಿಗೆ ಸಂಬಂಧಿಸಿದಂತೆ ಇದುವರೆಗೆ ಸಲ್ಲಿಸಿದ ಮೂರನೇ ಅರ್ಜಿ ಇದಾಗಿದೆ. ಅದಾನಿ ಕಂಪನಿಗಳು ತಮ್ಮ ಷೇರುಗಳ ಬೆಲೆಯನ್ನು ಅಕ್ರಮವಾಗಿ ಹೆಚ್ಚಿಸಿದ್ದೂ ಸೇರಿದಂತೆ ವಿವಿಧ ವಂಚನೆ ಎಸಗಿರುವುದಾಗಿ ಹಿಂಡೆನ್‌ಬರ್ಗ್‌ ವರದಿ ಆರೋಪಿಸಿತ್ತು.  

ಅರ್ಜಿದಾರರು ಅದಾನಿ ಸಮೂಹ ಮಾತ್ರವಲ್ಲದೆ, ಪ್ರಕರಣದಲ್ಲಿ ಭಾರತ ಒಕ್ಕೂಟ (ಕೇಂದ್ರ ಸರ್ಕಾರ), ಕೇಂದ್ರ ಗೃಹ ಸಚಿವಾಲಯ, ಸಿಬಿಐ, ಇ ಡಿ, ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ), ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ), ಮಾದಕ ವಸ್ತು ನಿಯಂತ್ರಣ ದಳ (NCB), ಭಾರತೀಯ ಷೇರು ಮಾರುಕಟ್ಟೆ ವಿನಿಮಯ ಮಂಡಳಿ (ಸೆಬಿ),  ಆರ್‌ಬಿಐ, ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಏಫ್‌ಐಒ), ಎಲ್‌ಐಸಿ ಹಾಗೂ ಎಸ್‌ಬಿಐಗಳನ್ನು ಪಕ್ಷಕಾರರನ್ನಾಗಿ ಮಾಡಿದ್ದಾರೆ.

ಅರ್ಜಿಯ ಪ್ರಮುಖಾಂಶಗಳು

  • ಅದಾನಿ ಸಮೂಹ ಮತ್ತದರ ಸಹವರ್ತಿಗಳ ವಿರುದ್ಧ ಸುಪ್ರೀಂ ಕೋರ್ಟ್‌ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು.

  • ಇದೇ ವೇಳೆ ಅದಾನಿ ಸಮೂಹದ ಪ್ರತಿ ಷೇರಿಗೆ ₹ 3,200 ರಂತೆ ಸಾರ್ವಜನಿಕ ಹಣವನ್ನು ಹೂಡಿಕೆ ಮಾಡುವಲ್ಲಿ ಎಸ್‌ಬಿಐ ಮತ್ತು ಎಲ್‌ಐಸಿಯ ಪಾತ್ರವನ್ನು ತನಿಖೆ ಮಾಡುವಂತೆ ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಲಾಗಿರುವ ತನಿಖಾ ಸಂಸ್ಥೆಗಳಿಗೆ ನ್ಯಾಯಾಲಯ ನಿರ್ದೇಶಿಸಬೇಕು.

  • ತಮ್ಮ ಕಂಪೆನಿ ಷೇರುಗಳ ಉತ್ಪ್ರೇಕ್ಷಿತ ಬೆಲೆಯನ್ನು ಬಿಂಬಿಸಿ ವಿವಿಧ ಸಾರ್ವಜನಿಕ ವಲಯ ಮತ್ತು ಖಾಸಗಿ ಬ್ಯಾಂಕ್‌ಗಳಿಂದ ₹ 82,000 ಕೋಟಿ ಮೌಲ್ಯದ ಸಾಲವನ್ನು ಅದಾನಿ ಸಮೂಹ ಪಡೆದಿದೆ.

  • ಅದಾನಿ ಸಮೂಹದ ಕಂಪನಿಗಳು ಮತ್ತು ಅದರ ಸಹವರ್ತಿಗಳು ಹವಾಲಾ ಮಾರ್ಗದ ಮೂಲಕ ಹಣ ವರ್ಗಾವಣೆ ಮಾಡಲು ಮಾರಿಷಸ್, ಸಿಪ್ರಿಸ್, ಯುಎಇ, ಸಿಂಗಾಪುರ್ ಮತ್ತು ಕೆರಿಬಿಯನ್ ದ್ವೀಪಗಳಂತಹ ತೆರಿಗೆ ಹೆಚ್ಚು ವಿಧಿಸದ ದೇಶಗಳಲ್ಲಿ ಬೇನಾಮಿ ಕಂಪೆನಿಗಳನ್ನು ಸ್ಥಾಪಿಸಿರುವುದರಿಂದ, 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸೆಕ್ಷನ್ 3ರ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಸಮೂಹವು ಅಕ್ರಮ ಹಣದ ವರ್ಗಾವಣೆಯಲ್ಲಿ ತೊಡಗಿದೆ.

  • ಹಿಂಡೆನ್‌ಬರ್ಗ್ ವರದಿಯ ಪ್ರಕಾರ, ಅದಾನಿ ಸಮೂಹದ ಸಹವರ್ತಿಯೊಬ್ಬರು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ದಾಖಲಿಸಿದ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಗೌತಮ್ ಅದಾನಿಯವರ ಕಿರಿಯ ಸಹೋದರ ರಾಜೇಶ್ ಅದಾನಿ ಅವರು 2004-2005ರ ಸುಮಾರಿಗೆ ಬೇನಾಮಿ ಕಂಪೆನಿಗಳನ್ನು ಬಳಸಿ ವಜ್ರದ ಆಮದು/ರಫ್ತು ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ

  • ಅದಾನಿ ಒಡೆತನದ ಮುಂದ್ರಾ ಪೋರ್ಟ್ಸ್‌ನಲ್ಲಿ ಹಲವಾರು ಬಾರಿ ಅಪಾರ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದಾಗ್ಯೂ, ಅದಾನಿ ಪೋರ್ಟ್ಸ್ ಲಿಮಿಟೆಡ್‌ನ ಪಾತ್ರದ ಬಗ್ಗೆ ವಿಚಾರಣೆ ನಡೆಸಲು ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ಸೇರಿದಂತೆ ಯಾವುದೇ ತನಿಖಾ ಸಂಸ್ಥೆ ಕ್ರಮ ಕೈಗೊಂಡಿಲ್ಲ.

  • ಸೆಬಿ ಕಾಯಿದೆಯ ಗಮನಾರ್ಹ ಮತ್ತು ಗಂಭೀರ ಉಲ್ಲಂಘನೆಗಳ ಹೊರತಾಯಿಯೂ, ಸೆಬಿ, ಆರ್‌ಬಿಐ ಅದಾನಿ ಸಮೂಹದ ವಿರುದ್ಧ ಕ್ರಮ ಕೈಗೊಂಡಿಲ್ಲ.

Kannada Bar & Bench
kannada.barandbench.com