ಸಿಇಸಿ ಕಾಯಿದೆ- 2023 ಬಳಸಿ ನೂತನ ಚುನಾವಣಾ ಆಯುಕ್ತರ ನೇಮಕ: ಸುಪ್ರೀಂನಲ್ಲಿ ಪ್ರಶ್ನೆ

ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದ್ದು, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಚುನಾವಣಾ ಆಯೋಗದಲ್ಲಿ ಕೇವಲ ಒಬ್ಬ ಸದಸ್ಯ ಅಂದರೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರ ಉಳಿದಿದ್ದಾರೆ.
ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ
ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ

ಖಾಲಿ ಇರುವ ಎರಡು ಕೇಂದ್ರ ಚುನಾವಣಾ ಆಯುಕ್ತರ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ 2023ರ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರ (ನೇಮಕಾತಿ ಷರತ್ತುಗಳು ಮತ್ತು ಅಧಿಕಾರದ ಅವಧಿ) ಕಾಯಿದೆ ಬಳಸದಂತೆ ಕೇಂದ್ರ ಸರ್ಕಾರವನ್ನು ನಿರ್ಬಂಧಿಸಬೇಕು ಎಂದು ಕೋರಿ ಕಾಂಗ್ರೆಸ್‌ ನಾಯಕಿ ಡಾ. ಜಯಾ ಠಾಕೂರ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ವಾರ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ವಿಶೇಷವೆಂದರೆ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಉಳಿದ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರನ್ನು ಕೈಬಿಟ್ಟಿದ್ದಕ್ಕಾಗಿ ವಿವಾದಕ್ಕೀಡಾಗಿರುವ ಸಿಇಸಿ ಕಾಯಿದೆ- 2023ರ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳನ್ನು ಸರ್ವೊಚ್ಚ ನ್ಯಾಯಾಲಯ ಇನ್ನಷ್ಟೇ ಇತ್ಯರ್ಥಪಡಿಸಬೇಕಿದೆ.

ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಹೊಸ ಕಾಯಿದೆಗೆ (ಸಿಇಸಿ ಕಾಯ್ದೆ) ತಡೆ ನೀಡಲು ಸುಪ್ರೀಂ ಕೋರ್ಟ್ ಈ ಹಿಂದೆ ನಿರಾಕರಿಸಿತ್ತು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಸದ್ಯಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದಿತ್ತು.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ಹುದ್ದೆಗಳನ್ನು ಪ್ರಧಾನಿ, ಕೇಂದ್ರ ಸಂಪುಟ ಸಚಿವರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಆಯ್ಕೆ ಸಮಿತಿ ನೇಮಕ ಮಾಡಲು ಸಿಇಸಿ ಕಾಯಿದೆ- 2023 ಅನುವು ಮಾಡಿಕೊಡುತ್ತದೆ. ಈ ಹಿಂದೆ ಆಯ್ಕೆ ಸಮಿತಿಯಲ್ಲಿ ಇದ್ದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಸ್ಥಾನವನ್ನು ಕೈ ಬಿಡಲಾಗಿದೆ.

ಹೊಸ ಆಯ್ಕೆ ಸಮಿತಿಯಿಂದಾಗಿ ಆಡಳಿತಾರೂಢ ಸರ್ಕಾರ ಪ್ರಾಬಲ್ಯ ಸಾಧಿಸುತ್ತದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಜಯಾ ಠಾಕೂರ್‌ ಅವರು ಕಾಯಿದೆಯನ್ನು ಕಳೆದ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಈ ಮಧ್ಯೆ, ಅರುಣ್ ಗೋಯೆಲ್ ಮಾರ್ಚ್ 8ರಂದು ಚುನಾವಣಾ ಆಯುಕ್ತ ಹುದ್ದೆಗೆ ರಾಜೀನಾಮೆ ನೀಡಿದರು. ಇದಕ್ಕೂ ಮುನ್ನ ಅಂದರೆ ಫೆಬ್ರವರಿ 15ರಂದು ಮತ್ತೊಬ್ಬ ಚುನಾವಣಾ ಆಯುಕ್ತ ಅನೂಪ್ ಪಾಂಡೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ಚುನಾವಣಾ ಆಯೋಗದಲ್ಲಿ ಕೇವಲ ಒಬ್ಬ ಸದಸ್ಯ ಮಾತ್ರ ಉಳಿದಿದ್ದು ಅವರು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಆಗಿದ್ದಾರೆ.

2024ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ, ಖಾಲಿ ಇರುವ ಎರಡು ಚುನಾವಣಾ ಆಯುಕ್ತರ ಹುದ್ದೆಗಳನ್ನು ಭರ್ತಿ ಮಾಡುವ ಯತ್ನಗಳು ಕೂಡಲೇ ಆರಂಭವಾಗುವ ಸಾಧ್ಯತೆಗಳಿವೆ.

ಈ ಹಿನ್ನೆಲೆಯಲ್ಲಿ ಸಿಇಸಿ ಕಾಯ್ದೆಯಡಿ ಮುಂದಿನ ಚುನಾವಣಾ ಆಯುಕ್ತರ ನೇಮಕವನ್ನು ತಡೆಯುವಂತೆ ಕೋರಿ ಡಾ. ಜಯಾ ಅವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಅನೂಪ್ ಬರನ್ವಾಲ್ ಪ್ರಕರಣದ ತೀರ್ಪಿನಲ್ಲಿ ವಿವರಿಸಲಾದ ಆಯ್ಕೆ ಪ್ರಕ್ರಿಯೆಯ ಪ್ರಕಾರ ನೇಮಕಾತಿ ಮಾಡಲು ನಿರ್ದೇಶಿಸುವಂತೆ ಅವರು ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದಾರೆ. ತೀರ್ಪಿನಲ್ಲಿ ಕಾರ್ಯಾಂಗ ಮೇಲುಗೈ ಸಾಧಿಸಲು ಸರ್ವೋಚ್ಚ ನ್ಯಾಯಾಲಯ ಅವಕಾಶ ನೀಡಿರಲಿಲ್ಲ.

Related Stories

No stories found.
Kannada Bar & Bench
kannada.barandbench.com