ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯದಾದ್ಯಂತ ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳನ್ನು ಬಳಸುವ ʼಸೇಫ್ ಕೇರಳʼ ಯೋಜನೆ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಕೋರಿ ಕೇರಳ ವಿಧಾನಸಭೆ ಕಾಂಗ್ರೆಸ್ ಸದಸ್ಯ ಮತ್ತು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಹಾಗೂ ಪಕ್ಷದ ಮತ್ತೊಬ್ಬ ನಾಯಕ ಹಾಗೂ ಶಾಸಕ ರಮೇಶ್ ಚೆನ್ನಿತ್ತಲ ಅವರು ಕೇರಳ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.
ʼಸುರಕ್ಷಿತ ಕೇರಳಕ್ಕಾಗಿ ಸ್ವಯಂಚಾಲಿತ ಸಂಚಾರ ಜಾರಿ ವ್ಯವಸ್ಥೆʼ ಎಂಬ ಯೋಜನೆಯಡಿ ಸಾರಿಗೆ ಇಲಾಖೆ ರಾಜ್ಯದೆಲ್ಲೆಡೆ ಎ ಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳನ್ನು ಸ್ಥಾಪಿಸಲು ಯೋಜಿಸಿದೆ. ಆದರೆ ಯೋಜನೆಗೆ ಸಂಬಂಧಿಸಿದಂತೆ ಸ್ವಜನಪಕ್ಷಪಾತ, ಸ್ವಹಿತಾಸಕ್ತಿ ಹಾಗೂ ಭ್ರಷ್ಟಾಚಾರ ನಡೆದಿದ್ದು ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದ ಖಾಸಗಿತನ ಸಂರಕ್ಷಿತ ಹಕ್ಕು ಎಂಬ ತೀರ್ಪನ್ನು ಇದು ಉಲ್ಲಂಘಿಸುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜನರ ಮಾಹಿತಿಯ ಉಸ್ತುವಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಮೂಲಕ ರಾಜ್ಯ ಸರ್ಕಾರ ಖಾಸಗಿತನದ ಹಕ್ಕು ಮತ್ತು ಮೋಟಾರು ವಾಹನ ಕಾಯಿದೆಯ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರು ದೂರಿದ್ದಾರೆ.
ಚಾಲನಾ ಪರವಾನಗಿ ಸೇರಿದಂತೆ ವ್ಯಕ್ತಿಗಳ ಗೋಪ್ಯ ಮತ್ತು ಖಾಸಗಿ ಮಾಹಿತಿಯನ್ನು ಖಾಸಗಿ ನಿರ್ವಾಹಕರ ಮರ್ಜಿಗೆ ಬಿಡಲಾಗಿದೆ. ಅವರು ತಮ್ಮ ಲಾಭದತ್ತ ಮಾತ್ರ ಗಮನಹರಿಸುತ್ತಾರೆ.
ಇದು ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದ ಖಾಸಗಿತನ ಸಂರಕ್ಷಿತ ಹಕ್ಕು ಎಂಬ ತೀರ್ಪನ್ನು ಉಲ್ಲಂಘಿಸುತ್ತದೆ.
ಮೋಟಾರು ವಾಹನ ಕಾಯಿದೆಯಡಿ ಎಂವಿಐ ಇಲ್ಲವೇ ಎಎಂವಿಐ ಶ್ರೇಣಿ ಹೊಂದಿರುವ ಮೋಟಾರ್ ವಾಹನ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗೆ ಇದ್ದ ಅಧಿಕಾರವನ್ನು ಈಗ ಖಾಸಗಿ ಕಂಪೆನಿಗಳ ಕೈಗೆ ನೀಡಲಾಗಿದ್ದು ಅವು ಜನರ ಖಾಸಗಿ ಮಾಹಿತಿ ಬಳಸುವ, ದಂಡ ವಿಧಿಸುವ ಪಾವತಿ ಮಾಡುವ ಸೌಲಭ್ಯವನ್ನೂ ಪಡೆದಿವೆ.
ಹೀಗೆ ಶಾಸನಬದ್ಧ ಪ್ರಾಧಿಕಾರಕ್ಕೆ ಇದ್ದ ಅಧಿಕಾರವನ್ನು ಖಾಸಗಿಯವರಿಗೆ ನೀಡಿರುವುದು ಅಕ್ರಮವಾಗಿದ್ದು ಇದರಿಂದಾಗಿ ವಿಧಿಸಿದ ದಂಡ ಕಾನೂನಿನ ದೃಷ್ಟಿಯಿಂದ ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ.
ಹಣಕಾಸು ಇಲಾಖೆ ಯೋಜನೆ ಕಾರ್ಯಗತಗೊಳಿಸುವ ಸಾಮರ್ಥ್ಯದ ಬಗ್ಗೆ ಗಂಭೀರ ಆಕ್ಷೇಪ ಎತ್ತಿದ್ದರೂ ಯೋಜನೆ ಆರಂಭದಿಂದಲೂ ಅಡಿಯಿಂದ ಮುಡಿಯವರೆಗೆ ಭ್ರಷ್ಟಾಚಾರ ನಡೆದಿದೆ.
ಸರ್ಕಾರ ತರಾತುರಿಯಲ್ಲಿ ಮನಬಂದಂತೆ ಯೋಜನೆ ಜಾರಿ ಮಾಡಿದ್ದು ಹಳೆಯ ತಂತ್ರಜ್ಞಾನಕ್ಕೆ ಮಣೆ ಹಾಕಿದೆ. ಇದರಿಂದಾಗಿ ಸಾರ್ವಜನಿಕರ ಹಣ ಪೋಲಾಗಿದೆ.
ಹೀಗಾಗಿ ಸಾರ್ವಜನಿಕ ಹಣದ ಸುರಕ್ಷತೆಗೆ ಮತ್ತು ಭ್ರಷ್ಟಾಚಾರ ನಡೆಯುವುದನ್ನು ತಪ್ಪಿಸಲು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕಿದೆ.