ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಆಯ್ಕೆ ಪ್ರಕರಣ: ಮಧ್ಯಂತರ ಅರ್ಜಿಯ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಹ್ಯಾರಿಸ್‌ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದರೆ ಶಿವಕುಮಾರ್‌ ಸಲ್ಲಿಸಿರುವ ಚುನಾವಣಾ ಅರ್ಜಿಯು ಅಮಾನ್ಯವಾಗಲಿದೆ. ಒಂದೊಮ್ಮೆ ಹ್ಯಾರಿಸ್‌ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದರೆ ಚುನಾವಣಾ ಅರ್ಜಿಯ ವಿಚಾರಣೆ ಮುಂದುವರಿಯಲಿದೆ.
INC MLA N A Haris and Karnataka HC
INC MLA N A Haris and Karnataka HC

ಆಸ್ತಿ ವಿಚಾರ ಮುಚ್ಚಿಟ್ಟಿರುವುದು ಚುನಾವಣೆಗೆ ಹೇಗೆ ಅಡ್ಡಿಯಾಗುತ್ತದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಆಕ್ಷೇಪಿಸಿ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌ ಎ ಹ್ಯಾರಿಸ್‌ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶ ಕಾಯ್ದಿರಿಸಿದೆ.

ಚುನಾವಣೆ ವೇಳೆ ಸಲ್ಲಿಸಲಾದ ಫಾರಂ ನಂ. 26ರಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹ್ಯಾರಿಸ್‌ ತಮ್ಮ ಆಸ್ತಿ ವಿವರಗಳನ್ನು ಸರಿಯಾಗಿ ಘೋಷಿಸಿಲ್ಲ. ಹೀಗಾಗಿ, ಅವರನ್ನು ಅನರ್ಹಗೊಳಿಸಿ ತಮ್ಮನ್ನು ವಿಜೇತ ಎಂದು ಘೋಷಿಸಬೇಕು ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ ಶಿವಕುಮಾರ್ ಸಲ್ಲಿಸಿರುವ ಚುನಾವಣಾ ಅರ್ಜಿಗೆ ಆಕ್ಷೇಪಿಸಿ ಹ್ಯಾರಿಸ್‌ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ.

ಹ್ಯಾರಿಸ್‌ ಪರವಾಗಿ ವಾದಿಸಿದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಆಸ್ತಿಯ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಿಲಾಗಿದೆ. ಆದರೆ, ಇದು ಹೇಗೆ ಚುನಾವಣೆಗೆ ಅಡ್ಡಿಪಡಿಸುತ್ತದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿಲ್ಲ. ಹೀಗಾಗಿ, ಚುನಾವಣಾ ಅರ್ಜಿಯು ಊರ್ಜಿತವಾಗುವುದಿಲ್ಲ” ಎಂದು ವಾದಿಸಿದರು.

ಅರ್ಜಿದಾರ ಶಿವಕುಮಾರ್‌ ಅವರ ಪರವಾಗಿ ವಾದಿಸಿದ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಅವರು “ಆಸ್ತಿ ವಿವರ ಮುಚ್ಚಿಟ್ಟಿರುವುದು ನಿಜವಾದರೆ ಅದನ್ನು ಸಾಬೀತುಪಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಚುನಾವಣಾ ಅಧಿಕಾರಿ ಉಮೇದುವಾರಿಕೆ ಸ್ವೀಕರಿಸಿದ್ದೇ ತಪ್ಪಾಗಲಿದೆ ಎಂಬುದರ ಕುರಿತು ಸುಪ್ರೀಂ ಕೋರ್ಟ್‌ ತೀರ್ಪಿದೆ. ಉಮೇದುವಾರಿಕೆ ಪರಿಶೀಲಿಸಿ ಚುನಾವಣಾಧಿಕಾರಿ ನಾಮಪತ್ರ ಸ್ವೀಕರಿಸಬೇಕಿತ್ತು” ಎಂದರು.

ಹ್ಯಾರಿಸ್‌ ಅವರ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದರೆ ಶಿವಕುಮಾರ್‌ ಅವರು ಸಲ್ಲಿಸಿರುವ ಚುನಾವಣಾ ಅರ್ಜಿಯು ಅಮಾನ್ಯವಾಗಲಿದೆ. ಒಂದೊಮ್ಮೆ ಹ್ಯಾರಿಸ್‌ ಅವರ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದರೆ ಚುನಾವಣಾ ಅರ್ಜಿಯ ವಿಚಾರಣೆ ಮುಂದುವರಿಯಲಿದೆ.

2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್ ಎ ಹ್ಯಾರಿಸ್ ತಮ್ಮ ಚರ ಮತ್ತು ಸ್ಥಿರಾಸ್ತಿಗಳ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಿಲ್ಲ. ಸುಳ್ಳು ಘೋಷಣೆಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಚರ ಮತ್ತು ಸ್ಥಿರಾಸ್ತಿಗಳನ್ನು ವಾಸ್ತವಕ್ಕಿಂತಲೂ ಕಡಿಮೆ ಅಂದಾಜಿನಲ್ಲಿ ದಾಖಲಿಸಿದ್ದಾರೆ. ಹೀಗಾಗಿ, ಈ ನಾಮಪತ್ರ ಸ್ವೀಕರಿಸಿರುವುದರಿಂದ ಅದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಉಂಟು ಮಾಡಿದ್ದು ಅವರನ್ನು ಅನರ್ಹಗೊಳಿಸಬೇಕು ಎಂಬುದು ಅರ್ಜಿದಾರರ ಮನವಿಯಾಗಿದೆ.

Related Stories

No stories found.
Kannada Bar & Bench
kannada.barandbench.com