ಆನ್‌ಲೈನ್‌-ಆಫ್‌ಲೈನ್‌ ಅಕ್ರಮ ಬೆಟ್ಟಿಂಗ್‌: ಶಾಸಕ ವೀರೇಂದ್ರ ಪಪ್ಪಿ ಇ ಡಿ ಕಸ್ಟಡಿ ಸೆ.4ರವರೆಗೆ ವಿಸ್ತರಣೆ

ವೀರೇಂದ್ರ ಪಪ್ಪಿ ಅವರ ಐದು ದಿನಗಳ ಕಸ್ಟಡಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರ ಮುಂದೆ ಹಾಜರುಪಡಿಸಲಾಯಿತು.
KC Veerendra
KC Veerendra
Published on

ಆನ್‌ಲೈನ್‌ ಮತ್ತು ಆಫ್‌ಲೈನ್‌ ಅಕ್ರಮ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ ಸಿ ವೀರೇಂದ್ರ ಅಲಿಯಾಸ್‌ ವೀರೇಂದ್ರ ಪಪ್ಪಿ ಅವರ ಜಾರಿ ನಿರ್ದೇಶನಾಲಯದ ಕಸ್ಟಡಿಯನ್ನು ಸೆಪ್ಟೆಂಬರ್‌ 4ರವರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ವಿಸ್ತರಿಸಿದೆ.

ವೀರೇಂದ್ರ ಪಪ್ಪಿ ಅವರ ಐದು ದಿನಗಳ ಕಸ್ಟಡಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರ ಮುಂದೆ ಹಾಜರುಪಡಿಸಲಾಯಿತು.

ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಐ ಎಸ್‌ ಪ್ರಮೋದ್‌ ಚಂದ್ರ ಅವರು “ವಡೋದರಾ, ಹೈದರಾಬಾದ್‌ ಮತ್ತು ಇತರೆ ಕಡೆ ದಾಖಲಾಗಿರುವ ಎಫ್‌ಐಆರ್‌ಗಳ ಸಂಬಂಧ ತನಿಖೆ ನಡೆಯುತ್ತಿದ್ದು, ಪ್ರಕರಣದಲ್ಲಿ ಬೇರೆ ಆರೋಪಿಗಳು ವೀರೇಂದ್ರ ಪಪ್ಪಿ ಅವರ ಹೆಸರು ಬಾಯ್ಬಿಟ್ಟಿದ್ದಾರೆ. ಹೀಗಾಗಿ, ಮತ್ತೆ 14 ದಿನ ಅವರನ್ನು ಕಸ್ಟಡಿಗೆ ನೀಡಬೇಕು” ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ವೀರೇಂದ್ರ ಪಪ್ಪಿ ಪರ ಹಿರಿಯ ವಕೀಲರಾದ ಎಚ್‌ ಎಸ್‌ ಚಂದ್ರಮೌಳಿ ಮತ್ತು ಕಿರಣ್‌ ಜವಳಿ ಅವರು “ವೀರೇಂದ್ರ ಅವರಿಗೆ ಯಾವುದೇ ತೆರನಾದ ಕ್ರಿಮಿನಲ್‌ ಹಿನ್ನೆಲೆ ಇಲ್ಲ. ಅವರ ವಿರುದ್ಧ ಯಾವುದೇ ಪ್ರಕರಣ ಬಾಕಿ ಇಲ್ಲ. ತನಿಖೆಗೆ ಅವರ ಅಗತ್ಯವಿದ್ದರೆ ಬೆಳಿಗ್ಗೆಯಿಂದ ಸಂಜೆಯವರೆಗೆ ಅವರನ್ನು ವಿಚಾರಣೆಗೆ ಒಳಪಡಿಸಿ ಬಿಡುಗಡೆ ಮಾಡಬಹುದು. ಇದಕ್ಕಾಗಿ ಕಸ್ಟಡಿಗೆ ನೀಡುವ ಅಗತ್ಯವಿಲ್ಲ” ಎಂದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಮತ್ತೆ ಎಂಟು ದಿನ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿ ಆದೇಶ ಮಾಡಿತು. ವೀರೇಂದ್ರ ಪಪ್ಪಿ ಪರವಾಗಿ ವಕೀಲ ರಜತ್‌ ವಕಾಲತ್ತು ವಹಿಸಿದ್ದಾರೆ.

ಆಗಸ್ಟ್‌ 22 ಮತ್ತು 23ರಂದು ಜಾರಿ ನಿರ್ದೇಶನಾಲಯದ ಬೆಂಗಳೂರು ಕಚೇರಿಯ ಅಧಿಕಾರಿಗಳು ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ಜೋಧಪುರ, ಗ್ಯಾಂಗ್ಟಾಕ್‌, ಮುಂಬೈ ಮತ್ತು ಗೋವಾ ಸೇರಿದಂತೆ ದೇಶದ ವಿವಿಧ 31 ಕಡೆಗಳಲ್ಲಿ (ಪಪ್ಪಿ ಕ್ಯಾಸಿನೊ ಗೋಲ್ಡ್‌, ಓಸಿಯನ್‌ ರಿವರ್ಸ್‌ ಕ್ಯಾಸಿನೊ, ಪಪ್ಪೀಸ್‌ ಕ್ಯಾಸಿನೊ ಪ್ರೈಡ್‌, ಓಸಿಯನ್‌ 7 ಕ್ಯಾಸಿನೊ, ಬಿಗ್‌ ಡ್ಯಾಡಿ ಕ್ಯಾಸಿನೊ ಮುಂತಾದ ಕ್ಯಾಸಿನೊ ಅಡ್ಡೆಗಳಲ್ಲಿ) ಅಕ್ರಮ ಆಫ್‌ಲೈನ್‌ ಮತ್ತು ಆನ್‌ಲೈನ್‌ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದ್ದರು. ಆ ವೇಳೆ ಕಿಂಗ್‌ 567, ರಾಜ 567 ಇತ್ಯಾದಿ ಹೆಸರಿನಲ್ಲಿ ವೀರೇಂದ್ರ ಪಪ್ಪಿಯು ಹಲವು ಬೆಟ್ಟಿಂಗ್‌ ಸೈಟ್‌ಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ. ವೀರೇಂದ್ರ ಪಪ್ಪಿ ಸಹೋದರ ಕೆ ಸಿ ತಿಪ್ಪೇಸ್ವಾಮಿಯು ದುಬೈನಿಂದ ಡೈಮಂಡ್‌ ಸಾಫ್ಟ್‌ಟೆಕ್‌, ಟಿಆರ್‌ಎಸ್‌ ಟೆಕ್ನಾಲಜೀಸ್‌, ಪ್ರೈಮ್‌9ಟೆಕ್ನಾಲಜೀಸ್‌ ಹೆಸರಿನ ಮೂರು ಉದ್ಯಮಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ.

Also Read
ಆನ್‌ಲೈನ್‌-ಆಫ್‌ಲೈನ್‌ ಅಕ್ರಮ ಬೆಟ್ಟಿಂಗ್‌: ಶಾಸಕ ವೀರೇಂದ್ರ ಪಪ್ಪಿ ಆಗಸ್ಟ್‌ 28ರವರೆಗೆ ಇ ಡಿ ಕಸ್ಟಡಿಗೆ

ಶೋಧದ ವೇಳೆ 12 ಕೋಟಿ ನಗದು, 1 ಕೋಟಿ ವಿದೇಶಿ ನೋಟು, 6 ಕೋಟಿ ಮೌಲ್ಯದ ಚಿನ್ನಾಭರಣ, 10 ಕೆಜಿ ಬೆಳ್ಳಿ ಹಾಗೂ ನಾಲ್ಕು ವಾಹನಗಳನ್ನು ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಜಫ್ತಿ ಮಾಡಲಾಗಿದೆ. ಇದರ ಜೊತೆಗೆ 17 ಬ್ಯಾಂಕ್‌ ಖಾತೆ ಮತ್ತು 2 ಲಾಕರ್‌ಗಳನ್ನು ಜಫ್ತಿ ಮಾಡಲಾಗಿದೆ. ಕ್ಯಾಸಿನೊ ಒಂದರ ಗುತ್ತಿಗೆ ಪಡೆಯಲು ಸಿಕ್ಕಿಂನ ಗ್ಯಾಂಗ್ಟಕ್‌ಗೆ ತೆರಳಿದ್ದ ವೀರೇಂದ್ರ ಪಪ್ಪಿಯನ್ನು ಆಗಸ್ಟ್‌ 23ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.

Kannada Bar & Bench
kannada.barandbench.com