ಚುನಾವಣಾ ನಿಯಮಾವಳಿ ತಿದ್ದುಪಡಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

ಎಲೆಕ್ಟ್ರಾನಿಕ್ ಚುನಾವಣಾ ದಾಖಲೆಗಳ ದುರುಪಯೋಗ ತಡೆಯಲೆಂದು ಕೆಲ ಇ-ದಾಖಲೆಗಳನ್ನು ಸಾರ್ವಜನಿಕರು ಪಡೆಯದಂತೆ ಕೇಂದ್ರ ಸರ್ಕಾರ ಚುನಾವಣಾ ನಿಯಮಾವಳಿ- 1961ರ ನಿಯಮ 93ಕ್ಕೆ ತಿದ್ದುಪಡಿ ಮಾಡಿದ ಹಿನ್ನೆಲೆಯಲ್ಲಿ ವಿವಾದ ತಲೆ ಎತ್ತಿತ್ತು.
Supreme Court, Congress party
Supreme Court, Congress party
Published on

ಚುನಾವಣೆಗೆ ಸಂಬಂಧಪಟ್ಟ ದಾಖಲೆಗಳನ್ನು ಪಡೆಯುವ ಜನರ ಹಕ್ಕನ್ನು ಮೊಟಕುಗೊಳಿಸಿ ಚುನಾವಣಾ ನಿಯಮಾವಳಿ 1961ಕ್ಕೆ ಈಚೆಗೆ ಮಾಡಲಾದ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣಾ ಆಯೋಗ  ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಹೊಣೆಗಾರಿಕೆ ಹೊಂದಿದ್ದು, ಸಾರ್ವಜನಿಕ ಸಮಾಲೋಚನೆಯಿಲ್ಲದೆ ಇಂತಹ ಪ್ರಮುಖ ಕಾನೂನಿಗೆ ಏಕಪಕ್ಷೀಯವಾಗಿ ತಿದ್ದುಪಡಿ  ಮಾಡುವುದನ್ನು ಅನುಮತಿಸಲಾಗದು ಎಂದು ಮನವಿಯಲ್ಲಿ ವಿವರಿಸಲಾಗಿದೆ.

Also Read
ವಕೀಲರ ಸಂಘದ ಚುನಾವಣೆ: ಇವಿಎಂ ಪೂರೈಕೆ ಹಾಗೂ ಭದ್ರತೆಗೆ ಕೋರಿಕೆ; ಚುನಾವಣಾ ಆಯೋಗ, ಪೊಲೀಸ್‌ ಆಯುಕ್ತರಿಗೆ ನೋಟಿಸ್‌

ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸುವ ಅಗತ್ಯವನ್ನು  ತಿದ್ದುಪಡಿ ತೆಗೆದುಹಾಕುತ್ತದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಎಲೆಕ್ಟ್ರಾನಿಕ್ ಚುನಾವಣಾ ದಾಖಲೆಗಳ ದುರುಪಯೋಗ ತಡೆಯುವ ಉದ್ದೇಶದಿಂದ ಕೆಲವು ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಾರ್ವಜನಿಕರು ಪಡೆಯದಂತೆ ಮಿತಿಗೊಳಿಸಲು ಕೇಂದ್ರ ಸರ್ಕಾರ ಚುನಾವಣಾ ನಿಯಮಾವಳಿ- 1961ರ ನಿಯಮ 93ಕ್ಕೆ ತಿದ್ದುಪಡಿ ಮಾಡಿದ  ಹಿನ್ನೆಲೆಯಲ್ಲಿ ವಿವಾದ ತಲೆ ಎತ್ತಿತ್ತು.

Also Read
ಚುನಾವಣಾ ಆಯುಕ್ತರ ನೇಮಕಾತಿ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಸಂಜೀವ್ ಖನ್ನಾ

ತಿದ್ದುಪಡಿಯಿಂದಾಗಿ ಸಿಸಿಟಿವಿ ಕ್ಯಾಮೆರಾ ಮತ್ತು ವೆಬ್‌ಕಾಸ್ಟ್ ದೃಶ್ಯಾವಳಿಗಳು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ವಿಡಿಯೋ ರೆಕಾರ್ಡಿಂಗ್‌ಗಳು ಸಾರ್ವಜನಿಕರಿಗೆ ದೊರೆಯದಂತಾಗುತ್ತದೆ. ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ಕೇಂದ್ರ ಕಾನೂನು ಸಚಿವಾಲಯ ತಿದ್ದುಪಡಿ ಮಾಡಿತ್ತು.

ಕುತೂಹಲಕಾರಿ ಸಂಗತಿ ಎಂದರೆ ಇತ್ತೀಚೆಗೆ ಹರಿಯಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾನಕ್ಕೆ ಸಂಬಂಧಿಸಿದ ವಿಡಿಯೋ, ಸಿಸಿಟಿವಿ ದೃಶ್ಯಾವಳಿ ಮತ್ತು ದಾಖಲೆಗಳ ಪ್ರತಿಗಳನ್ನು ವಕೀಲ ಮೆಹಮೂದ್ ಪ್ರಾಚಾ ಅವರಿಗೆ ಒದಗಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ ಕೆಲ ದಿನಗಳಲ್ಲಿ  ತಿದ್ದುಪಡಿ ಮಾಡಲಾಗಿದೆ. .

Kannada Bar & Bench
kannada.barandbench.com