ವಕ್ಫ್‌ ತಿದ್ದುಪಡಿ ಕಾಯಿದೆ ವಿರೋಧಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕಾಂಗ್ರೆಸ್‌ ಸಂಸದ ಮೊಹಮ್ಮದ್‌ ಜಾವೇದ್‌

ಲೋಕಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕರಾಗಿರುವ ಜಾವೇದ್‌ ಅವರು ವಕ್ಫ್‌ ಮಸೂದೆ ಜಂಟಿ ಸಂಸದೀಯ ಸಮಿತಿಯ ಸದಸ್ಯರೂ ಆಗಿದ್ದರು.
Supreme Court
Supreme Court
Published on

ಮುಸ್ಲಿಮ್‌ ಸಮುದಾಯವನ್ನು ತಾರತಮ್ಯದಿಂದ ಕಾಣುವ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ವಕ್ಫ್‌ ತಿದ್ದುಪಡಿ ಕಾಯಿದೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ ಸಂಸದ ಮೊಹಮ್ಮದ್‌ ಜಾವೇದ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕರಾಗಿರುವ ಜಾವೇದ್‌ ಅವರು ವಕ್ಫ್‌ ಮಸೂದೆ ಜಂಟಿ ಸಂಸದೀಯ ಸಮಿತಿಯ ಸದಸ್ಯರಾಗಿದ್ದಾರೆ. ವಕ್ಫ್‌ ಕಾಯಿದೆಯು ಸಂವಿಧಾನದ ವಿಧಿಗಳಾದ 14 (ಸಮಾನತೆ ಹಕ್ಕು), 25 (ಧರ್ಮಾಚರಣೆ ಸ್ವಾತಂತ್ರ್ಯ), 26 (ಧಾರ್ಮಿಕ ಚಟುವಟಿಕೆಗಳನ್ನು ನಿರ್ವಹಿಸುವ ಸ್ವಾತಂತ್ರ್ಯ), 29 (ಅಲ್ಪಸಂಖ್ಯಾತರ ಹಕ್ಕುಗಳು) ಮತ್ತು 300ಎ (ಆಸ್ತಿ ಹಕ್ಕು) ಉಲ್ಲಂಘಿಸುತ್ತದೆ ಎಂದು ಆಕ್ಷೇಪಿಸಿದ್ದಾರೆ.

ಕಾಯಿದೆಯು ಸಂಸತ್ತಿನಲ್ಲಿ ಅನುಮೋದನೆಗೊಂಡಿದ್ದು ರಾಷ್ಟ್ರಪತಿಯವರ ಅಂಕಿತದ ನಂತರ ಜಾರಿಗೆ ಬರಲಿದೆ.

ಇತರೆ ಧಾರ್ಮಿಕ ದತ್ತಿ ಆಡಳಿತದಲ್ಲಿ ಇಲ್ಲದೆ ಇರುವ ನಿರ್ಬಂಧಗಳನ್ನು ಮುಸ್ಲಿಮ್‌ ಸಮುದಾಯದ ಮೇಲೆ ಹೇರುವ ಮೂಲಕ ತಾರತಮ್ಯ ಎಸಗಲಾಗಿದೆ ಎಂದು ವಕೀಲ ಅನಸ್‌ ತನ್ವೀರ್‌ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

“ಹಿಂದೂ ಮತ್ತು ಸಿಖ್‌ ಧಾರ್ಮಿಕ ಟ್ರಸ್ಟ್‌ಗಳಲ್ಲಿ ಸ್ವನಿಯಂತ್ರಣಕ್ಕೆ ಅವಕಾಶವಿದೆ. ಆದರೆ, ವಕ್ಫ್‌ ಕಾಯಿದೆ 1995ಗೆ ತಿದ್ದುಪಡಿ ಮಾಡುವ ಮೂಲಕ ವಕ್ಫ್‌ ಚಟುವಟಿಕೆಯಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ" ಎಂದು ಆಕ್ಷೇಪಿಸಲಾಗಿದೆ.

Also Read
ರಾಜ್ಯಸಭೆಯಲ್ಲಿ ಅಂಗೀಕಾರವಾದ ವಕ್ಫ್‌ ತಿದ್ದುಪಡಿ ಮಸೂದೆ

ವಕ್ಫ್‌ ಮಂಡಳಿ ಮತ್ತು ಕೇಂದ್ರೀಯ ವಕ್ಫ್‌ ಮಂಡಳಿಯ ಸಂರಚನೆಗೆ ತಿದ್ದುಪಡಿ ಮಾಡಿ, ಮುಸ್ಲಿಮೇತರರನ್ನು ಅಲ್ಲಿಗೆ ಸೇರ್ಪಡೆ ಮಾಡುವುದು ಅನಗತ್ಯವಾದ ಮುಸ್ಲಿಮ್‌ ಧಾರ್ಮಿಕ ಚಟುವಟಿಕೆಗಳಲ್ಲಿನ ಹಸ್ತಕ್ಷೇಪವಾಗಿದೆ. ಆದರೆ, ಅದೇ ಹಿಂದೂ ಧಾರ್ಮಿಕ ದತ್ತಿಯಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಇತರೆ ಧಾರ್ಮಿಕ ಸಂಸ್ಥೆಗಳಿಗೆ ಈ ಬಗೆಯ ಯಾವುದೇ ಷರತ್ತು ವಿಧಿಸಿದೇ ನಿರ್ದಿಷ್ಟ ಸಮುದಾಯವನ್ನು ಮಾತ್ರವೇ ಆಯ್ಕೆ ಮಾಡಿಕೊಂಡು ಮಾಡಲಾದ ಮಧ್ಯಪ್ರವೇಶಿಕೆಯು ಸ್ವೇಚ್ಛೆಯ ಕ್ರಮವಾಗಿದ್ದು, ಅದು ಸಂವಿಧಾನದ 14 ಮತ್ತು 15ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಲಾಗಿದೆ.

Kannada Bar & Bench
kannada.barandbench.com