ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಂದರಿನ ಎರಡನೇ ಹಂತದ ಅಭಿವೃದ್ಧಿಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿರುವ ಸಮ್ಮತಿಯು ಕಾನೂನುಬಾಹಿರವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ (ಬೈತಕಲ್ ಬಂದರು ನಿರಾಶ್ರಿತರ ಸಂಘ ವರ್ಸಸ್ ಕರ್ನಾಟಕ ಜಲಸಾರಿಗೆ ಮಂಡಳಿ).
ಈ ಕುರಿತು ಆದೇಶ ನೀಡುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರ ನೇತೃತ್ವದ ವಿಭಾಗೀಯ ಪೀಠವು, ಮಾಲಿನ್ಯ ನಿಯಂತ್ರಣ ಮಂಡಳಿಯು ತನ್ನನ್ನು ರಚಿಸಲಾಗಿರುವ ಮೂಲೋದ್ದೇಶವನ್ನೇ ವಿಫಲವಾಗಿಸುವಂತೆ ನಡೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿತು.
“ಜಲ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು (ಕೆಎಸ್‌ಪಿಸಿಬಿ) ಸ್ಥಾಪಿಸಲಾಗಿದೆ. ಕೆಎಸ್‌ಪಿಸಿಬಿಯು ಜಲ ಮತ್ತು ವಾಯು ಮಾಲಿನ್ಯದ ವಿರುದ್ಧ ಕಾವಲುನಾಯಿಯಂತೆ ಕಾರ್ಯನಿರ್ವಹಿಸಬೇಕಿತ್ತು. ಆದರೆ, ಪ್ರಸಕ್ತ ಪ್ರಕರಣದಲ್ಲಿ ಮಂಡಳಿಯು ತನ್ನನ್ನು ರಚಿಸಲಾದ ಮೂಲೋದ್ದೇಶವನ್ನೇ ಅಲುಗಾಡಿಸುವ ರೀತಿಯಲ್ಲಿ ನಡೆದುಕೊಂಡಿದೆ ಎಂದು ಹೇಳದೆ ಬೇರೆ ದಾರಿಯಿಲ್ಲ,” ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.
ಕಾರವಾರ ಬಂದರಿನ ಎರಡನೆಯ ಹಂತದ ಅಭಿವೃದ್ಧಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸಮ್ಮತಿ ನೀಡಿರುವುದನ್ನು ಪ್ರಶ್ನಿಸಿ ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘಗಳ ಒಕ್ಕೂಟವು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಸಂಬಂಧ ಹೈಕೋರ್ಟ್ ಮೇಲಿನ ಆದೇಶ ನೀಡಿದೆ. ಮಂಡಳಿಯು ಸಮ್ಮತಿ ನೀಡಿರುವುದರ ಹಿಂದಿನ ಪ್ರಕ್ರಿಯೆಗಳನ್ನು ಕಾನೂನುಬಾಹಿರವೆಂದಿರುವ ಪೀಠವು ಅದರ ಹೊರತಾಗಿ ಅರ್ಜಿಯಲ್ಲಿ ಕೋರಲಾಗಿದ್ದ ಉಳಿದ ಮನವಿಗಳನ್ನು ಮಾನ್ಯ ಮಾಡಲಿಲ್ಲ.
ಅಂತಿಮವಾಗಿ ನ್ಯಾಯಾಲಯವು, ಜಲ ಮತ್ತು ವಾಯುಮಾಲಿನ್ಯ ನಿಯಂತ್ರಣ ಕಾಯಿದೆಗಳು ಮತ್ತು ನಿಬಂಧನೆಗಳಿಗೆ ಬದ್ಧವಾಗಿ ಒಂದು ತಿಂಗಳ ಅವಧಿಯಲ್ಲಿ ಸಮ್ಮತಿಯ ಕುರಿತಾಗಿ ಹೊಸತಾಗಿ ನಿರ್ಧರಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿತು. ಇದೇ ವೇಳೆ, ಕಾರವಾರ ಬಂದರು ಅಧಿಕಾರಿಯು ಸಲ್ಲಿಸಿರುವ ಸಮ್ಮತಿ ಕೋರಿಕೆ ಅರ್ಜಿಯ ಸಂಬಂಧ ಹೊಸತಾಗಿ ಪರಿಶೀಲನೆ ನಡೆಸಿ, ಅಗತ್ಯ ಪ್ರಕ್ರಿಯೆಗಳಿಗೆ ಮುಂದಾಗುವುದಾಗಿ ಮಂಡಳಿಯು ನ್ಯಾಯಾಲಯಕ್ಕೆ ಮುಚ್ಚಳಿಕೆಯನ್ನು ಸಲ್ಲಿಸಿತು.