ಗರ್ಭಿಣಿಯರು ಅಂಚೆಯ ಮೂಲಕ ಮತದಾನ ಮಾಡಲು ಅನುಮತಿಸಬೇಕೆ ಅಥವಾ ಬೇಡವೇ ಎನ್ನುವ ಕುರಿತು ನಿರ್ಧರಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ತೆಲಂಗಾಣ ಹೈಕೋರ್ಟ್ ಇತ್ತೀಚೆಗೆ ಸೂಚಿಸಿದೆ [ಕೇಸನಾ ವಿಷ್ಣು ವರ್ಧನ್ ಗೌಡ್ ಮತ್ತು ಭಾರತ ಚುನಾವಣಾ ಆಯೋಗ ನಡುವಣ ಪ್ರಕರಣ].
ಆ ಮೂಲಕ ಈ ಕುರಿತು ನಿರ್ದೇಶನ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಧೀರಜ್ ಸಿಂಗ್ ಠಾಕೂರ್ ಮತ್ತು ನ್ಯಾಯಮೂರ್ತಿ ಆರ್ ರಘುನಂದನ್ ರಾವ್ ಅವರಿದ್ದ ಪೀಠ ವಿಲೇವಾರಿ ಮಾಡಿದೆ.
ಕೇಸನಾ ಗೌಡ ಎಂಬುವವರು ಸಲ್ಲಿಸಿದ್ದ ಪಿಐಎಲ್‌ನಲ್ಲಿ ಗರ್ಭಿಣಿಯರು ಅಂಚೆ ಮೂಲಕ ಮತದಾನ ಮಾಡುವ ಅವಕಾಶ ಇಲ್ಲದಿರುವುದರಿಂದ 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಒದಗಿಸಿರುವಂತೆ ಇವರಿಗೂ ಆ ಅವಕಾಶ ನೀಡಲು ಸರ್ಕಾರ ಅಥವಾ ಇಸಿಐ ನಿಯಮ ರೂಪಿಸಬೇಕು ಎಂದು ಕೋರಿದ್ದರು.
ಯಾವುದೇ ವರ್ಗದ ವ್ಯಕ್ತಿಗಳು ಅಂಚೆ ಮತದಾನ ಮಾಡಲು ಅರ್ಹರೆಂದು ನಿರ್ಧರಿಸುವ ಅಧಿಕಾರ ಇಸಿಐಗೆ ಇದೆ ಎಂದಿದ್ದ 1951ರ ಪ್ರಜಾ ಪ್ರತಿನಿಧಿ ಕಾಯಿದೆಯ ಸೆಕ್ಷನ್ 60ನ್ನು ಅರ್ಜಿದಾರರು ಅವಲಂಬಿಸಿದ್ದರು.
ಗರ್ಭಿಣಿಯರು ಅಂಚೆ ಮತಪತ್ರಗಳನ್ನು ಬಳಸಲು ಅನುವು ಮಾಡಿಕೊಡುವ ಅಧಿಸೂಚನೆಯನ್ನು ಇಸಿಐ ಹೊರಡಿಸಬೇಕು ಎಂದು ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಇಸಿಐ ಪರ ವಕೀಲರು ಲೋಕಸಭಾ ಚುನಾವಣೆ ಈಗಾಗಲೇ ಆರಂಭವಾಗಿರುವುದರಿಂದ ಮುಂದಿನ ಚುನಾವಣೆಗಳಿಗೆ ಸಂಬಂಧಿಸಿದಂತೆ ಈ ವಿಚಾರವನ್ನು ಪರಿಗಣಿಸಲಾಗುವುದು ಎಂದರು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ಭವಿಷ್ಯದ ಚುನಾವಣೆಗಳ ಕುರಿತಂತೆ ಅರ್ಜಿದಾರರ ಮನವಿ ಪರಿಶೀಲಿಸಲು ತಿಳಿಸಿ ಅರ್ಜಿ ವಿಲೇವಾರಿ ಮಾಡಿತು.