[ಸಿಎಲ್‌ಎಟಿ ಕೌನ್ಸೆಲಿಂಗ್‌ ಶುಲ್ಕ ಪ್ರಕರಣ] ಶುಲ್ಕ ಕಟ್ಟದೆ ಭಾಗವಹಿಸಲು ಅಭ್ಯರ್ಥಿಗಳಿಗೆ ಅನುಮತಿ; ಅರ್ಜಿ ವಿಲೇವಾರಿ

ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕು ಎಂದು ಆರಂಭದಲ್ಲಿ ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದರೆ ಅದು ವಿದ್ಯಾರ್ಥಿಗಳಲ್ಲಿ ಆಶ್ಚರ್ಯ ಉಂಟು ಮಾಡುತ್ತಿರಲಿಲ್ಲ ಮತ್ತು ಅವರು ಕೌನ್ಸೆಲಿಂಗ್‌ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿರಲಿಲ್ಲ ಎಂದ ಪೀಠ.
Kerala HC, CLAT fee
Kerala HC, CLAT fee

ನ್ಯಾಯಾಲಯದ ನಿರ್ದೇಶನದಂತೆ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) – 2021ರ ಅಭ್ಯರ್ಥಿಗಳು ರೂ. 50,000 ಪಾವತಿಸದೇ ಸದ್ಯಕ್ಕೆ ಪ್ರತಿಷ್ಠಿತ ಕಾನೂನು ಶಾಲೆಗಳ ಪ್ರವೇಶಾತಿಗಾಗಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು (ಎನ್‌ಎಲ್‌ಯು) ಸೋಮವಾರ ಕೇರಳ ಹೈಕೋರ್ಟ್‌ಗೆ ತಿಳಿಸಿದೆ.

ಅರ್ಜಿದಾರರು ಮತ್ತು ಅವರದೇ ಪರಿಸ್ಥಿತಿಯಲ್ಲಿರುವ ಇತರರು ಎತ್ತಿದ ಅಹವಾಲಿಗೆ ತುರ್ತಾಗಿ ಒಕ್ಕೂಟ ಪ್ರತಿಕ್ರಿಯಿಸಿರುವುದನ್ನು ಪರಿಗಣಿಸಿರುವ ನ್ಯಾಯಮೂರ್ತಿ ಅನು ಶಿವರಾಮನ್‌ ಅವರಿದ್ದ ಏಕಸದಸ್ಯ ಪೀಠವು ಪ್ರಕರಣವನ್ನು ವಿಲೇವಾರಿ ಮಾಡಿದೆ. ಎನ್‌ಎಲ್‌ಯು ಒಕ್ಕೂಟದ ಅಹವಾಲು ಪರಿಹಾರ ಸಮಿತಿಯು ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ.

ಈ ವಿಚಾರದಲ್ಲಿ ನಿರ್ದೇಶನ ನೀಡಲಾಗದು ಎಂದಿದ್ದ ನ್ಯಾ. ಅನು ಶಿವರಾಮನ್‌ ಅವರು “ಅಂತಹ ಪ್ರಕ್ರಿಯೆ ಅಸ್ತಿತ್ವದಲ್ಲಿದ್ದು, ಅಭ್ಯರ್ಥಿಗಳು ಇಷ್ಟು ದೊಡ್ಡ ಮೊತ್ತ ಪಾವತಿಸಲೇಬೇಕೆಂದಿದ್ದರೆ ಅದನ್ನು ಆರಂಭಿಕ ಹಂತದಲ್ಲಿ ಅಧಿಸೂಚನೆಯಲ್ಲಿ ಪ್ರಕಟಿಸಬೇಕಿತ್ತು. ಈಗ ಶುಲ್ಕ ಪಾವತಿಸಬೇಕು ಎಂದು ಹೇಳಲಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅಚ್ಚರಿಯಾಗಿದ್ದು, ಅವರು ಶುಲ್ಕ ಪಾವತಿಸುವ ಸ್ಥಿತಿಯಲ್ಲಿ ಇಲ್ಲದಿರಬಹುದು. ಶುಲ್ಕ ವಿನಾಯಿತಿಗೆ ಅರ್ಹವಾದ ವಿದ್ಯಾರ್ಥಿಗಳು ಇಷ್ಟು ಕನಿಷ್ಠ ಅವಧಿಯಲ್ಲಿ ಆ ಹಣ ಸಂಗ್ರಹಿಸಲಾಗದಿರಬಹುದು” ಎಂದಿದ್ದರು.

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಸೀಟು ಹಂಚಿಕೆ ಮಾಡುವುದನ್ನು ಪರಿಗಣಿಸಿಲು ಅಭ್ಯರ್ಥಿಗಳು ಕಡ್ಡಾಯವಾಗಿ ₹50,000 ಶುಲ್ಕ ಪಾವತಿಸಬೇಕು ಎಂಬ ನಿರ್ಧಾರವನ್ನು ಸಿಎಲ್‌ಎಟಿ ಅಭ್ಯರ್ಥಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ರಸಲ್‌ ಜನಾರ್ಧನನ್‌ ಎ ಅವರು “ಇಬ್ಬರು ಅರ್ಜಿದಾರರು ₹50,000 ಶುಲ್ಕ ಪಾವತಿಸಲು ಅರ್ಹರಾಗಿದ್ದು, ಉಳಿದ ಇಬ್ಬರು ಅದನ್ನು ಪಾವತಿ ಮಾಡುವ ಸ್ಥಿತಿಯಲ್ಲಿ ಇಲ್ಲ. ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ನಿರ್ದಿಷ್ಟ ಕಾಲಮಿತಿಯಲ್ಲಿ ಅಹವಾಲು ಪರಿಹಾರ ಸಮಿತಿಯ ಮುಂದೆಯೂ ಅವರು ತಮ್ಮ ಅಹವಾಲು ನೋಂದಾಯಿಸಲಾಗುತ್ತಿಲ್ಲ” ಎಂದರು.

ಸಮಿತಿಗೆ ಇಮೇಲ್‌ ಕಳುಹಿಸಿದರೆ ಅವರ ಸಮಸ್ಯೆಗಳನ್ನು ಪರಿಗಣಿಸಿ, ಶುಲ್ಕ ಸ್ವೀಕರಿಸದೆ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಸದ್ಯಕ್ಕೆ ಭಾಗವಹಿಸಲು ಅವರಿಗೆ ಅನುಮತಿಸಬೇಕು. ಮುಂದಿನ ವರ್ಷಗಳಲ್ಲೂ ಸಹ ಇಂಥದ್ದೇ ಸಮಸ್ಯೆ ಎದುರಿಸುವ ವಿದ್ಯಾರ್ಥಿಗಳ ಅಹವಾಲನ್ನು ಒಕ್ಕೂಟವು ಪರಿಗಣಿಸಬೇಕು ಮತ್ತು ಭವಿಷ್ಯದಲ್ಲಿ ಕೌನ್ಸೆಲಿಂಗ್‌ ಶುಲ್ಕವನ್ನು ಎನ್‌ಎಲ್‌ಯು ಪರಿಚಯ ಪತ್ರದಲ್ಲಿ (ಪ್ರಾಸ್ಪಕ್ಟೆಸ್) ಉಲ್ಲೇಖಿಸುವಂತೆ ನಿರ್ದೇಶಿಸಬೇಕು ಎಂದು ಅವರು ಹೆಚ್ಚುವರಿ ಮನವಿ ಮಾಡಿದ್ದರು.

ಸಿಎಲ್‌ಎಟಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎನ್‌ಎಲ್‌ಯುಗಳು ಯಾವುದೇ ತೆರನಾದ ಸಾಮಾನ್ಯ ಪರಿಚಯ ಪತ್ರ ಹೊಂದಿಲ್ಲ. ಆದರೆ, ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ಪ್ರತಿ ಎನ್‌ಎಲ್‌ಯು ತಮ್ಮದೇ ಆದ ಪರಿಚಯ ಪತ್ರ ನೀಡುತ್ತವೆ ಎಂದು ಅರ್ಜಿದಾರರು ಹಿಂದಿನ ವಿಚಾರಣೆಯ ವೇಳೆ ಅಹವಾಲು ಹೇಳಿಕೊಂಡಿದ್ದರು.

Also Read
ಸಿಎಲ್‌ಎಟಿ ನಡೆಸಲು ಸಹಿ ಮಾಡಿರುವ ಕುರಿತು ತನ್ನ ಸಮಿತಿಗೆ ಎನ್‌ಎಲ್‌ಎಸ್‌ಐಯು ಮಾಹಿತಿ ನೀಡಿತ್ತೇ? ಅರ್ಜಿದಾರರ ಪ್ರಶ್ನೆ

“ಸೀಟು ಹಂಚಿಕೆ ಪರಿಗಣಿಸುವುದಕ್ಕೆ ಸಂಬಂಧಿಸಿದಂತೆ ಮುಂಚಿತವಾಗಿ ಅರ್ಜಿದಾರರು ₹50,000 ಪಾವತಿಸುವಂತೆ ಎನ್‌ಎಲ್‌ಯುಗಳ ಪರಿಚಯ ಪತ್ರ ಅಥವಾ ಎನ್‌ಎಲ್‌ಯು ಒಕ್ಕೂಟದ ವೆಬ್‌ಸೈಟ್‌ನಲ್ಲಿ ಯಾವುದೇ ಅಧಿಸೂಚನೆ ಹೊರಡಿಸಲಾಗಿಲ್ಲ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಅರ್ಜಿದಾರರು ಸದ್ಯಕ್ಕೆ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಳ ಒಕ್ಕೂಟದ ಪರ ವಕೀಲರು ಹೇಳಿದ್ದರು. ಬಳಿಕ, ಇದೇ ಪರಿಸ್ಥಿತಿಯಲ್ಲಿದ್ದ ಹನ್ನೊಂದು ಅಭ್ಯರ್ಥಿಗಳು ಅಹವಾಲು ಪರಿಹಾರ ಸಮಿತಿಯನ್ನು ಸಂಪರ್ಕಿಸಿದ್ದು, ಅವರಿಗೂ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಹಮತಿಸಲಾಗಿದೆ ಎಂದರು.

ಮುಂದಿನ ವರ್ಷಗಳಲ್ಲಿ ನ್ಯಾಯಾಲಯವು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಶಿಫಾರಸ್ಸುಗಳ ರೂಪದಲ್ಲಿ ಒಕ್ಕೂಟ ಪರಿಗಣಿಸಲಿದೆ ಎಂದು ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು. ತುರ್ತಾಗಿ ಅರ್ಜಿದಾರರ ಅಹವಾಲನ್ನು ಪರಿಗಣಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಮನವಿ ವಿಲೇವಾರಿ ಮಾಡಿತು.

Related Stories

No stories found.
Kannada Bar & Bench
kannada.barandbench.com