ಬೆಂಗಳೂರಿನಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುವ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿತರಾಗಿರುವ ಐವರು ಶಂಕಿತ ಭಯೋತ್ಪಾದಕರನ್ನು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು ಏಳು ದಿನಗಳ ಕಾಲ ಕೇಂದ್ರೀಯ ಅಪರಾಧ ದಳದ (ಸಿಸಿಬಿ) ಪೊಲೀಸರ ಕಸ್ಟಡಿಗೆ ಬುಧವಾರ ನೀಡಿದೆ.
ಬಂಧಿತರಾದ ಮುದಾಸೀರ್, ಸಯ್ಯದ್ ಸುಹೇಲ್, ಜನೈದ್, ಉಮರ್ ಮತ್ತು ಜಾಹೀದ್ ಅವರನ್ನು ಸಿಸಿಬಿ ಪೊಲೀಸರು ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಪ್ರಕರಣದ ವಿವರ ನೀಡಿದರು. ಇದನ್ನು ಆಲಿಸಿದ ನ್ಯಾಯಾಧೀಶರಾದ ಸಿ ಎಂ ಗಂಗಾಧರ ಅವರು ಒಂದು ವಾರದ ಕಾಲ ವಿಚಾರಣೆಗಾಗಿ ಸಿಸಿಬಿ ವಶಕ್ಕೆ ನೀಡಿ ಆದೇಶಿಸಿದರು. ಆರೋಪಿಗಳಿಂದ 40 ಸಜೀವ ಗುಂಡುಗಳು, ಎರಡು ಡ್ಯಾಗರ್, ಮೊಬೈಲ್, ರಿವಾಲ್ವಾರ್ ಸೇರಿ ಹಲವು ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಗೆ ತರಬೇತಿ ನೀಡಿದ್ದ ಜುನೈದ್ ನಾಪತ್ತೆಯಾಗಿದ್ದಾನೆ.
ಒಟ್ಟು ಏಳು ಮಂದಿಯ ವಿರುದ್ಧ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಟಿ ನಜೀರ್ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ (ಯುಎಪಿಎ), ಶಸ್ತ್ರಾಸ್ತ್ರ ಕಾಯಿದೆ, ಐಪಿಸಿಯ ವಿವಿಧ ಸೆಕ್ಷನ್‌ಗಳ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ. 2008ರಲ್ಲಿ ನಡೆದಿದ್ದ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಟಿ ನಜೀರ್ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
2017ರಲ್ಲಿ ಆರ್ ಟಿ ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ 21 ಮಂದಿ ಜೈಲು ಸೇರಿದ್ದರು. ಈ ಪೈಕಿ ಐವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದು, ಅಲ್ಲಿ ಶಂಕಿತ ಉಗ್ರರ ಜೊತೆ ಸೇರಿಕೊಂಡು ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಜನೈದ್ ಇಡೀ ಕೃತ್ಯದ ರೂವಾರಿಯಾಗಿದ್ದು, ತರಬೇತಿಗಾಗಿ ಎಲ್ಲರೂ ಪ್ರತಿದಿನ ಸಂಜೆ ಒಂದೆಡೆ ಸೇರುತ್ತಿದ್ದರು. ತರಬೇತಿ ನಡೆಯುವ ಸ್ಥಳವನ್ನು ಪತ್ತೆ ಮಾಡಿದ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.