ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಮಧ್ಯಪ್ರವೇಶ ಮನವಿಯಲ್ಲಿ ಉಲ್ಲೇಖಿಸಲಾಗಿರುವ ವಿವಿಧ ನಿಗಮ ಮತ್ತು ಮಂಡಳಿಗಳಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿತು.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತಿತರರು ಜಾತಿಯಾಧಾರಿತವಾಗಿ ಸೃಷ್ಟಿಸಲಾಗಿರುವ ನಿಗಮ ಮತ್ತು ಮಂಡಳಿಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
“ರಾಜ್ಯ ಸರ್ಕಾರವು ರಚಿಸಿರುವ ಕೆಲವು ನಿಗಮ, ಮಂಡಳಿಗಳನ್ನು ಪಕ್ಷಕಾರರನ್ನಾಗಿಸುವುದಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶ ಮನವಿ ಸಲ್ಲಿಸಲಾಗಿದೆ. ಉದ್ದೇಶಿತ ನಿಗಮ ಮತ್ತು ಮಂಡಳಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈಗಾಗಲೇ ಅರ್ಜಿಯಲ್ಲಿ ಸೇರಿಸದಿರುವ, ಮಧ್ಯಪ್ರವೇಶ ಮನವಿಯಲ್ಲಿ ಉಲ್ಲೇಖಿಸಿರುವ ನಿಗಮ ಮತ್ತು ಮಂಡಳಿಗಳಿಗೆ ಖುದ್ದಾಗಿ ಮನವಿ ಪೂರೈಸಲು ಅರ್ಜಿದಾರರಿಗೆ ಅನುಮತಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸರ್ಕಾರಿ ವಕೀಲ ಸಿ ಎಂ ಪೂಣಚ್ಚ ಅವರು “ಕೆಲವು ನಿಗಮ ಮತ್ತು ಮಂಡಳಿಗಳನ್ನು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯಲ್ಲಿ ಪಕ್ಷಕಾರರನ್ನಾಗಿಸುವ ಸಂಬಂಧ ಮಧ್ಯಪ್ರವೇಶ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ನೋಟಿಸ್ ಜಾರಿ ಮಾಡಬೇಕು” ಎಂದು ಕೋರಿದರು.
ಅಲ್ಲದೇ, “ಕಳೆದ ವರ್ಷದ ಡಿಸೆಂಬರ್ 21ರ ಆದೇಶದಲ್ಲಿ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ರೂಪಿಸಿರುವ ಪ್ರಶ್ನೆಗಳ ಕುರಿತಾಗಿ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಬಯಸಿದೆ” ಎಂದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ರಾಜ್ಯ ಸರ್ಕಾರವೇ ನಿಗಮ ಮತ್ತು ಮಂಡಳಿಗಳನ್ನು ಸೃಷ್ಟಿಸಿದೆ. ರಾಜ್ಯ ಸರ್ಕಾರದ ಸಮಾಧಾನಕ್ಕಾಗಿ ಅವುಗಳನ್ನು ಪಕ್ಷಕಾರರನ್ನಾಗಿ ಸೇರ್ಪಡೆಗೊಳಿಸಲು ಬಯಸಲಾಗಿದೆ” ಎಂದರು.
ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿತು.