ಜನ ತಮ್ಮ ಹಕ್ಕು ಇಲ್ಲವೇ ಸಂಸ್ಕೃತಿ ಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ದೇಶದ ಸಂವಿಧಾನ ಒತ್ತಾಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಶನಿವಾರ ಹೇಳಿದರು.
ಸಂವಿಧಾನ ದಿನದ ಅಂಗವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವದ ಸಮಾಜ ರೂಪಿಸುವ ನಿಟ್ಟಿನಲ್ಲಿ ಸಂವಿಧಾನವು ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಂಶಗಳನ್ನು ಒಳಗೊಂಡಿದೆ ಎಂದರು.
"ಸಂವಿಧಾನವು ತನ್ನ ನಾಗರಿಕರನ್ನು ಅವರ ಹಕ್ಕುಗಳು ಅಥವಾ ಸಂಸ್ಕೃತಿಯ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಾಯಿಸುವುದಿಲ್ಲ. ಬದಲಿಗೆ ಅದು ಪ್ರಜಾಪ್ರಭುತ್ವದ ಸಮಾಜವನ್ನು ಸಾಧಿಸುವ ನಿಟ್ಟಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಂಶಗಳನ್ನು ಒಳಗೊಳ್ಳುತ್ತದೆ" ಎಂದು ಅವರು ಹೇಳಿದರು.
ಸಂವಿಧಾನದ ಹೊಂದಾಣಿಕೆ ತತ್ವವನ್ನು ಉಲ್ಲೇಖಿಸಿದ ಸಿಜೆಐ, ಪರಸ್ಪರ ಹೆಚ್ಚು ಹೊಂದಾಣಿಕೆ ಮೂಲಕ ವಿವಿಧತೆಯಲ್ಲಿ ಏಕತೆಯ ಕಲ್ಪನೆ ಎತ್ತಿಹಿಡಿಯುವಂತೆ ಜನರನ್ನು ಒತ್ತಾಯಿಸಿದರು.
"ಹೊಂದಾಣಿಕೆ ತತ್ವವಾಗಿರುವ ಇದು ಪರಸ್ಪರ ಸಂಘರ್ಷದಲ್ಲಿರುವಂತೆ ತೋರುವ ತತ್ವಗಳನ್ನು ಏಕಕಾಲದಲ್ಲಿ ಅನ್ವಯಿಸುವ ಸಾಮರ್ಥ್ಯ ಪಡೆದಿದೆ. ಆದರೆ ಇದು ರಿಯಾಯಿತಿಗಳನ್ನು ಒಳಗೊಂಡಿರುವುದರಿಂದ ರಾಜಿಗಿಂತಲೂ ಭಿನ್ನವಾದುದಾಗಿದೆ” ಎಂದರು.
“ನಾವು ಒಬ್ಬರಿಗೊಬ್ಬರು ಬೆಂಬಲಿಸುವ ಮತ್ತು ಪೂರಕವಾಗಿರುವ ಮೂಲಕ ವಿವಿಧತೆಯಲ್ಲಿ ಏಕತೆಯ ಕಲ್ಪನೆಯನ್ನು ಎತ್ತಿಹಿಡಿಯಬೇಕು" ಎಂದು ಅವರು ಹೇಳಿದರು.
ಸಂವಿಧಾನದ ಇತಿಹಾಸ ಮತ್ತು ದೇಶದಲ್ಲಿ ನ್ಯಾಯದಾನ ಕುರಿತಂತೆ ಸುಧಾರಣೆ ಕೈಗೊಳ್ಳುವುದರ ಕುರಿತಂತೆಯೂ ಅವರು ಮಾತನಾಡಿದರು.