ಸಂವಿಧಾನ ಸರಿಯಾದ ಸಾಧನ, ಅದನ್ನು ಅರ್ಥೈಸಿಕೊಂಡು, ಜಾರಿಗೊಳಿಸಲು ನಾವು ವಿಫಲ: ಹಿರಿಯ ವಕೀಲರಾದ ದವೆ, ರಾಘವನ್‌ ಚರ್ಚೆ

"ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಯನ್ನು ಓದುವುದೇ ಸಂತೋಷ. ಅವರ ಬೌದ್ಧಿಕ ಮಟ್ಟ, ರಾಷ್ಟ್ರೀಯತೆಯ ಭಾವ, ಸೂಕ್ಷ್ಮತೆ, ಭವಿಷ್ಯದ ಬಗ್ಗೆ ಅವರಿಗಿದ್ದ ಅರಿವು, 75 ವರ್ಷಗಳ ಹಿಂದೆ ಭಾರತದ ಭವಿಷ್ಯವನ್ನು ಅವರು ಹೇಳಿದ್ದರು" ಎಂದ ಹಿರಿಯ ವಕೀಲ ದವೆ.
Senior advocates Dushyant Dave and KG Raghavan
Senior advocates Dushyant Dave and KG Raghavan
Published on

ಹಿರಿಯ ವಕೀಲರಾದ ದುಷ್ಯಂತ್‌ ದವೆ ಮತ್ತು ಕೆ ಜಿ ರಾಘವನ್‌ ಅವರು ವಿಡಿಯೊ ಕಾನ್ಫರೆನ್ಸ್‌ನಲ್ಲಿ ಪರಸ್ಪರ ಕುಶಲೋಪರಿ ವಿಚಾರಿಸಿ, ಸಂವಿಧಾನದ ದಿನದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಅಲ್ಲದೇ, ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಯ ಕುರಿತು ಅವಲೋಕನ ನಡೆಸಿದರು.

ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಅರ್ಜಿಯ ಇಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು. ಇದರಲ್ಲಿ ಭೂಮಾಲೀಕ ಜೆ ದೇವರಾಜು ಪರವಾಗಿ ಹಾಜರಾಗಿದ್ದ ದವೆ ಅವರು ಅರ್ಜಿ ಮುಂದೂಡಿಕೆ ಕೋರಲು ಹಾಜರಿದ್ದರು. ಇದಕ್ಕೆ ವಿರೋಧಿಸಲು ಅರ್ಜಿದಾರ ಸ್ನೇಹಮಯಿ ಕೃಷ್ಣ ಪರವಾಗಿ ರಾಘವನ್‌ ಉಪಸ್ಥಿತರಿದ್ದರು.

ದವೆ ಅವರು ಸಂವಿಧಾನ ರಚನಾ ಸಭೆಯ ಸದಸ್ಯರ ಬಗ್ಗೆ ಮೆಚ್ಚುಗೆ ಸೂಚಿಸಿ, ಶುಭಾಶಯ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ರಾಘವನ್‌ ಅವರು “ನೀವು ಒಪ್ಪುತ್ತೀರಿ. ಅಪ್ಪಟವಾದ ಸಾಧನ ಎಂಬುದು ಯಾವುದೂ ಇಲ್ಲ. ಎಲ್ಲವೂ ಸುಧಾರಣೆ ಕಾಣುತ್ತದೆ” ಎಂದರು.

ದವೆ ಅವರು “ಸಂವಿಧಾನ ಸರಿಯಾದ ಸಾಧನವಾಗಿದೆ (ಇನ್‌ಸ್ಟ್ರುಮೆಂಟ್‌). ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ, ಸರಿಯಾದ ರೀತಿಯಲ್ಲಿ ಜಾರಿಗೊಳಿಸುವಲ್ಲಿ ನಾವು ವಿಫಲರಾಗಿದ್ದೇವೆ” ಎಂದರು. ಇದಕ್ಕೆ ಕೆ ಜಿ ರಾಘವನ್‌ ಅವರು ಸಹಮತ ಸೂಚಿಸಿದರು.

ಮುಂದುವರಿದು, ರಾಘವನ್‌ ಅವರು “ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್‌ ವೆಂಕಟಾಚಲಯ್ಯ (ಎಂಎನ್‌ವಿ) ಅವರು ಸಂವಿಧಾನ ಸುಧಾರಣಾ ಸಮಿತಿಯ ಮುಖ್ಯಸ್ಥರಾಗಿದ್ದಾಗ ಸಂವಿಧಾನಕ್ಕೆ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ಹೇಳಿದ್ದಾಗಿ ನನಗೆ ತಿಳಿಸಿದ್ದರು ಎಂದರು. ಅದೊಂದು ಸುಂದರ ದಾಖಲೆ. ಅದಕ್ಕೆ ಬದಲಾವಣೆಗಯ ಅಗತ್ಯವಿಲ್ಲ. ನಾವು ಸರಿಯಾದ ರೀತಿಯಲ್ಲಿ ವ್ಯಾಖ್ಯಾನಿಸಿ ಅದನ್ನು ಮುಂದೆ ಕೊಂಡೊಯ್ಯಬೇಕು” ಎಂದರು.

ಆಗ ದವೆ ಅವರು “ಹೌದು, ನನಗೂ ಈ ವಿಚಾರ ತಿಳಿದಿದೆ” ಎಂದರು. ಆಗ ರಾಘವನ್‌ ಅವರು “ಸಂವಿಧಾನ ರಚನಾ ಸಭೆಯಲ್ಲಿ ಮಹನೀಯರಿದ್ದರು” ಎಂದು ಸ್ಮರಿಸಿದರು.

ಪ್ರತಿಕ್ರಿಯಿಸಿದ ದವೆ ಅವರು “ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಯನ್ನು ಓದುವುದೇ ಸಂತೋಷ. ಅವರ ಬೌದ್ಧಿಕ ಮಟ್ಟ, ರಾಷ್ಟ್ರೀಯತೆಯ ಭಾವ, ಸೂಕ್ಷ್ಮತೆ, ಭವಿಷ್ಯದ ಬಗ್ಗೆ ಅವರಿಗಿದ್ದ ಅರಿವು ಅದ್ಭುತವಾದದ್ದು. 75 ವರ್ಷಗಳ ಹಿಂದೆ ಭಾರತದ ಭವಿಷ್ಯವನ್ನು ಅವರು ಹೇಳಿದ್ದರು. ಇಂದು ಅದು ಸತ್ಯವಾಗಿದೆ. ಆ ಮುಂದಾಲೋಚನೆಗೆ ಎಣೆಯಿಲ್ಲ..” ಎಂದು ಉದ್ಗರಿಸಿದರು.

Also Read
ಎಲ್ಲಕ್ಕೂ ಸಂವಿಧಾನ ದೂಷಿಸದಿರಿ, ದೇಶವನ್ನು ಒಗ್ಗೂಡಿಸಿರುವುದೇ ಅದು: ಫಾಲಿ ನಾರಿಮನ್

ಇದಕ್ಕೆ ರಾಘವನ್‌ ಅವರು “ಸಂವಿಧಾನವು ನಮ್ಮನ್ನು ಹಲವು ಸಮಸ್ಯೆಗಳಿಂದ ಪಾರು ಮಾಡಿದೆ” ಎಂದರು. ಇದಕ್ಕೆ ದವೆ ಅವರು, "ನವ ಪ್ರಜಾಪ್ರಭುತ್ವಗಳು ಸ್ವರೂಪದಲ್ಲಿ ಮಾತ್ರವೇ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಆಂತರ್ಯದಲ್ಲಿ ನಿರಂಕುಶವಾಗುವ ಬಗ್ಗೆ ಅಂಬೇಡ್ಕರ್‌ ಎಚ್ಚರಿಸಿದ್ದರು“ ಎಂದು ಸ್ಮರಿಸಿದರು.

ಇದಕ್ಕೆ ಧ್ವನಿಗೂಡಿಸಿದ ರಾಘವನ್‌ “ಸಂವಿಧಾನ ರಚನಾ ಸಭೆಯ ಚರ್ಚೆಯನ್ನು ಓದಿದರೆ ತಾತ್ವಿಕ ವಿಚಾರಗಳಲ್ಲಿ ಸದಸ್ಯರ ನಡುವೆ ಭಿನ್ನಾಭಿಪ್ರಾಯವಿದ್ದರೂ ಅವರ ದೇಶಭಕ್ತಿ ಅಸಾಧಾರಣವಾದುದು” ಎಂದು ಹೆಮ್ಮೆ ವ್ಯಕ್ತಪಡಿಸಿದರು.

Kannada Bar & Bench
kannada.barandbench.com