ಸಂವಿಧಾನ ಇರುವುದು ಪ್ರತಿಯೊಬ್ಬ ಪ್ರಜೆಗಾಗಿ, ಎಲ್ಲರಲ್ಲೂ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಬೇಕಿದೆ: ಸಿಜೆಐ

ತಮ್ಮ ಸಂವಿಧಾನ ಏನನ್ನು ರೂಪಿಸಿದೆ ಎಂಬುದನ್ನು ಜನ ಅರಿತಾಗ ಸಾಂವಿಧಾನಿಕ ಗಣರಾಜ್ಯ ವಿಕಸನವಾಗುತ್ತದೆ. ಸಾಂವಿಧಾನಿಕ ಸಂಸ್ಕೃತಿಗೆ ಉತ್ತೇಜನ ನೀಡುವುದು ಮತ್ತು ಆ ಕುರಿತು ಜಾಗೃತಿ ಮೂಡಿಸುವುದು ಸಾಮೂಹಿಕ ಕರ್ತವ್ಯ ಎಂದು ಸಿಜೆಐ ಹೇಳಿದರು.
ಸಂವಿಧಾನ ಇರುವುದು ಪ್ರತಿಯೊಬ್ಬ ಪ್ರಜೆಗಾಗಿ, ಎಲ್ಲರಲ್ಲೂ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಬೇಕಿದೆ: ಸಿಜೆಐ

ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗಾಗಿ ಇದ್ದು ಎಲ್ಲರಲ್ಲೂ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಹೇಳಿದರು.

ರಾಯಪುರದಲ್ಲಿ ಭಾನುವಾರ ನಡೆದ ಹಿದಾಯತುಲ್ಲಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಎಚ್‌ಎನ್‌ಎಲ್‌ಯು) 5ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಿಜೆಐ ಭಾಷಣದ ಪ್ರಮುಖ ಸಂಗತಿಗಳು

  • ತಮ್ಮ ಸಂವಿಧಾನ ಏನನ್ನು ರೂಪಿಸಿದೆ ಎಂಬುದನ್ನು ಜನ ಅರಿತಾಗ ಸಾಂವಿಧಾನಿಕ ಗಣರಾಜ್ಯ ವಿಕಸನವಾಗುತ್ತದೆ. ಸಾಂವಿಧಾನಿಕ ಸಂಸ್ಕೃತಿಗೆ ಉತ್ತೇಜನ ಮತ್ತು ಆ ಕುರಿತು ಜಾಗೃತಿ ಮೂಡಿಸುವುದು ಸಾಮೂಹಿಕ ಕರ್ತವ್ಯವಾಗಿದೆ.

  • ಸಂವಿಧಾನ ಕುರಿತ ಅರಿವು ಕಾನೂನು ವಿದ್ಯಾರ್ಥಿಗಳು, ವಕೀಲರು ಹಾಗೂ ಭಾರತೀಯ ಜನಸಂಖ್ಯೆಯ ಅತಿ ಸಣ್ಣ ಭಾಗಕ್ಕೆ ಮಾತ್ರ ಸೀಮಿತವಾಗಿದೆ.

  • ಹೊಸದಾಗಿ ನೋಂದಾಯಿತರಾದ ಕಾನೂನು ಪದವೀಧರರು ಜನಸಾಮಾನ್ಯರಿಗೆ ಸರಳ ಪದಗಳಲ್ಲಿ ಸಾಂವಿಧಾನಿಕ ನಿಯಮಾವಳಿಗಳನ್ನು ವಿವರಿಸಲು ಮುಂದಾಗಬೇಕು.

  • ಕಾನೂನು ಪದವೀಧರರು ಧ್ವನಿಯಿಲ್ಲದವರ ಧ್ವನಿಯಾಗಬೇಕು. ಸಾಮಾಜಿಕ ನ್ಯಾಯದ ದಾರಿದೀಪವಾಗಬೇಕು.

  • ವಿಶ್ವವಿದ್ಯಾನಿಲಯದಲ್ಲಿ ಅವರು ಕಲಿತ ಕೌಶಲಗಳನ್ನು ನ್ಯಾಯದ ಗುರಿ ಸಾಧಿಸಲು ಬಳಸಿಕೊಳ್ಳಬೇಕು.

  • ಅತ್ಯಂತ ದುರ್ಬಲರು ಎಂದರೆ ಸಾಮಾನ್ಯವಾಗಿ ಪ್ರಭುತ್ವ ಇಲ್ಲವೇ ಸಮಾಜವಿರೋಧಿ ಶಕ್ತಿಗಳಿಂದ ಮಾನವ ಹಕ್ಕುಗಳ ದಮನಕ್ಕೆ ಒಳಗಾದವರಾಗಿರುತ್ತಾರೆ. ಯುವ ವಕೀಲರಾಗಿ ಕಾನೂನು ಕ್ರಮದ ಮೂಲಕ ಅದನ್ನು ಬಲವಾಗಿ ವಿರೋಧಿಸುವ ಉತ್ತಮ ಸ್ಥಾನದಲ್ಲಿ ನೀವಿದ್ದೀರಿ.

  • ಒಬ್ಬ ವಕೀಲ ಸರಳ ಸಿವಿಲ್‌ ಮೊಕದ್ದಮೆಯಿಂದ ಹಿಡಿದು ಸಾಂವಿಧಾನಿಕ ಪ್ರಾಮುಖ್ಯತೆಯ ಸಮಸ್ಯೆಗಳವರೆಗೆ ಅಂತೆಯೇ ಬೌದ್ಧಿಕ ಆಸ್ತಿ ಹಕ್ಕಿಗೆ ಸಂಬಂಧಿಸಿದ ವ್ಯಾಜ್ಯಗಳಿಂದ ಹಿಡಿದು ಐಟಿ ಅಪರಾಧಗಳವರೆಗೆ ವ್ಯವಹರಿಸುವಂತಿರಬೇಕು. ನಿಮ್ಮ ಕಕ್ಷೀದಾರರು, ವಾಣಿಜ್ಯ, ಸಮಾಜ ಅಥವಾ ಕ್ರೀಡಾಕ್ಷೇತ್ರದಲ್ಲಿ ಪರಿಣತಿ ಇದೆಯೇ ಎಂದು ನಿಮ್ಮನ್ನು ಕೇಳಬಹುದು. ಹೀಗಾಗಿ ವಕೀಲರು ನಾಯಕರಾಗಿರಬೇಕು ಹಾಗೂ ಬದಲಾವಣೆಗಳನ್ನು ತರುವ ಆಲ್‌ರೌಂಡರ್‌ ಆಗಿರಬೇಕು.

Related Stories

No stories found.
Kannada Bar & Bench
kannada.barandbench.com