ಬಿಜೆಪಿ ಆಡಳಿತದಲ್ಲಿ ಬಿಬಿಎಂಪಿ ಕಾಮಗಾರಿ ತನಿಖೆಗೆ ವಿಶೇಷ ತನಿಖಾ ಘಟಕ ರಚನೆ: ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

“ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಭಿನ್ನ ನಿಲುವು ತಳೆದಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
BBMP and Karnataka HC
BBMP and Karnataka HC

ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಆಡಳಿತವಿದ್ದಾಗ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಲಾಗಿರುವ ಕಾಮಗಾರಿಗಳಲ್ಲಿನ ಅಕ್ರಮದ ತನಿಖೆ ನಡೆಸಲು ರಾಜ್ಯ ಸರ್ಕಾರವು ವಿಶೇಷ ತನಿಖಾ ಘಟಕ ರಚಿಸಿದ್ದ ಆದೇಶಕ್ಕೆ ಈಚೆಗೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿದೆ.

28 ಗುತ್ತಿಗೆದಾರರು ಹಾಗೂ 17 ಗುತ್ತಿಗೆದಾರ ಕಂಪೆನಿಗಳು 2023ರ ಆಗಸ್ಟ್‌ 4ರಂದು ವಿಶೇಷ ತನಿಖಾ ದಳ ರಚಿಸಿ ನಗರಾಭಿವೃದ್ಧಿ ಇಲಾಖೆ ಮಾಡಿದ್ದ ಆದೇಶಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಗುರುವಾರ ವಿಚಾರಣೆ ನಡೆಸಿತು.

“ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಭಿನ್ನ ನಿಲುವು ತಳೆದಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಆಕ್ಷೇಪಾರ್ಹ ಆದೇಶ ಅಥವಾ ಏಕಸದಸ್ಯ ತನಿಖಾ ಆಯೋಗ ರಚನೆ ಮಾಡಿರುವ ತನ್ನ ನಿರ್ಧಾರವನ್ನು ರಾಜ್ಯ ಸರ್ಕಾರ ಸಮರ್ಥಿಸಿಕೊಳ್ಳುವವರೆಗೆ ಮುಂದಿನ ಪ್ರಕ್ರಿಯೆಗಳಿಗೆ ತಡೆ ವಿಧಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ 2019-20 ರಿಂದ 2022-23ರವರೆಗೆ ನಡೆದಿರುವ ಕಾಮಗಾರಿಗಳ ತನಿಖೆಗೆ ವಿಶೇಷ ತನಿಖಾ ಘಟಕ ಆರಂಭಿಸಲಾಗಿದೆ” ಎಂದು ಆಕ್ಷೇಪಿಸಿದ್ದರು.

ಸರ್ಕಾರ ಮತ್ತು ಬಿಬಿಎಂಪಿಗೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ಡಿಸೆಂಬರ್‌ 19ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 2019ರಿಂದ 2023ರ ಮೇ ತಿಂಗಳ ಅವಧಿಯಲ್ಲಿ 15ನೇ ಹಣಕಾಸು ಆಯೋಗದ ಅನುದಾನ, ನಗರೋತ್ಥಾನ ಅನುದಾನ ಮತ್ತು ಬಿಬಿಎಂಪಿ ಅನುದಾನಗಳ ಅಡಿಯಲ್ಲಿ ಹಲವು ಕಾಮಗಾರಿ ನಡೆಸಲಾಗಿದೆ. ಕಾಮಗಾರಿಗಳ ಸಂಬಂಧ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ, ನಿರ್ದಿಷ್ಟ ಗುತ್ತಿಗೆದಾರರನ್ನು ಬಿಟ್ಟು ನಕಲಿ ಗುತ್ತಿಗೆದಾರರಿಗೆ ಹಣ ಪಾವತಿ, ನಕಲಿ ಬಿಲ್ ಸೃಷ್ಟಿ, ಕಾಮಗಾರಿ ನಡೆಸದೆಯೇ ಬಿಲ್‌ ಪಾವತಿ, ಕಳಪೆ ಗುಣಮಟ್ಟ ಕಾಮಗಾರಿ ನಡೆಸಿರುವುದು ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದವು. ಇದರಿಂದ ಆ ಕುರಿತು ತನಿಖೆ ನಡೆಸಲು ರಾಜ್ಯ ನಗರಾಭಿವೃದ್ಧಿ ಇಲಾಖೆಯು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ನಾಲ್ಕು ಸಮಿತಿ ರಚನೆ ಮಾಡಿ ಆದೇಶಿಸಿತ್ತು.

ಹಿರಿಯ ಐಎಎಸ್‌ ಅಧಿಕಾರಿಗಳಾದ ಉಜ್ವಲ್ ಕುಮಾರ್ ಘೋಷ್ ನೇತೃತ್ವದಲ್ಲಿ ನಾಲ್ವರು ಸದಸ್ಯರನ್ನು ಒಳಗೊಂಡ ಘನತ್ಯಾಜ್ಯ ನಿರ್ವಹಣೆ ಕಾಮಗಾರಿ ತನಿಖಾ ಸಮಿತಿ, ಆಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಆರು ಸದಸ್ಯರನ್ನು ಒಳಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಒಎಫ್‌ಸಿ ಕೇಬಲ್ ಅಳವಡಿಕೆಯ ಅಕ್ರಮ ತನಿಖಾ ಸಮಿತಿ, ಪಿ ಸಿ ಜಾಫರ್ ನೇತೃತ್ವದಲ್ಲಿ ನಾಲ್ವರು ಸದಸ್ಯರ ಬೃಹತ್ ನೀರುಗಾಲುವೆ, ಸ್ವಾಧೀನಾನುಭವ (ಒಸಿ) ನೀಡುವ ಅಕ್ರಮದ ತನಿಖಾ ಸಮಿತಿ ಮತ್ತು ಡಾ.ವಿಶಾಲ್ ನೇತೃತ್ವದಲ್ಲಿ ಆರು ಸದಸ್ಯರ ಕೆರೆ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಹಾಗೂ ವಾರ್ಡ್‌ ಮಟ್ಟದ ಕಾಮಗಾರಿಗಳ ತನಿಖಾ ಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com