ನ್ಯಾಯದಾನಕ್ಕೆ ಸಂವಿಧಾನ ತಳಹದಿಯಾಗಬೇಕೇ ಹೊರತು ಧರ್ಮವಲ್ಲ: ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ

ಕಿರಿಯ ವಕೀಲರು ಇಂದು ತಂತ್ರಜ್ಞಾನ ಆಧಾರಿತ ವೃತ್ತಿಪರರಾಗಿದ್ದಾರೆ. ಹಿರಿಯ ವಕೀಲರಿಂದ ಮಾರ್ಗದರ್ಶನ ಪಡೆಯುವ ಮೂಲಕ ಅವರು ಹೆಚ್ಚಿನ ಸಾಧನೆ ಮಾಡಬೇಕು ಎಂದ ಸಿಜೆ.
ನ್ಯಾಯದಾನಕ್ಕೆ ಸಂವಿಧಾನ ತಳಹದಿಯಾಗಬೇಕೇ ಹೊರತು ಧರ್ಮವಲ್ಲ: ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ

“ನ್ಯಾಯದಾನಕ್ಕೆ ಸಂವಿಧಾನ ತಳಹದಿಯಾಗಬೇಕೇ ಹೊರತು ಧರ್ಮವಲ್ಲ” ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅಭಿಪ್ರಾಯಪಟ್ಟರು.

ಬೆಂಗಳೂರು ವಕೀಲರ ಸಂಘದ ವತಿಯಿಂದ ಹೈಕೋರ್ಟ್‌ ವಕೀಲರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸ್ವಾಗತ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

“ಭಾಷೆ ಮತ್ತು ನೆಲದ ದೃಷ್ಟಿಯಿಂದ ನಾನು ಮಹಾರಾಷ್ಟ್ರದ ಮೂಲ ಹೊಂದಿದ್ದರೂ ಕನ್ನಡವನ್ನು ತಕ್ಕಮಟ್ಟಿಗೆ ಬಲ್ಲೆ. ಎರಡೂ ರಾಜ್ಯಗಳ ಬಾಂಧವ್ಯ ಅನನ್ಯವಾದುದು. ಇದಕ್ಕೆ ತನ್ನದೇ ಆದ ಇತಿಹಾಸವಿದೆ”ಎಂದರು.

“ಯಾರ ಹುಟ್ಟೂ ಅವರ ಕೈಯ್ಯಲ್ಲಿ ಇರುವುದಿಲ್ಲ. ಔರಂಗಾಬಾದ್‌ ನನ್ನ ಜೀವನದ ದಿಕ್ಕು ಬದಲಿಸಿದ ಊರು. ನಾನು ವೃತ್ತಿಯಲ್ಲಿ ನಡೆದು ಬಂದ ಹಾದಿಯನ್ನು ಅವಲೋಕಿಸಿಕೊಂಡಾಗ ಆಶ್ಚರ್ಯವಾಗುತ್ತದೆ. ಸಮಾನತೆಯ ಸಂವಿಧಾನ ಕರ್ತೃ ಅಂಬೇಡ್ಕರ್‌ ಅವರ ಕಾರಣದಿಂದ ನಾನಿಂದು ಈ ಸ್ಥಾನದಲ್ಲಿ ನಿಂತಿದ್ದೇನೆ” ಎಂದು ಬಾಬಾ ಸಾಹೇಬ ಅಂಬೇಡ್ಕರ್ ಅವರ ಜೊತೆ ನಿಕಟವಾಗಿದ್ದ ತಮ್ಮ ಅಜ್ಜ ಮತ್ತು ತಂದೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

“ಕಿರಿಯ ವಕೀಲರು ಇಂದು ತಂತ್ರಜ್ಞಾನ ಆಧಾರಿತ ವೃತ್ತಿಪರರಾಗಿದ್ದಾರೆ. ಹಿರಿಯ ವಕೀಲರಿಂದ ಮಾರ್ಗದರ್ಶನ ಪಡೆಯುವ ಮೂಲಕ ಅವರು ಹೆಚ್ಚಿನ ಸಾಧನೆ ಮಾಡಬೇಕು” ಎಂದು ವರಾಳೆ ಹೇಳಿದರು.

ಸಂಘದ ಅಧ್ಯಕ್ಷ ಹಿರಿಯ ವಕೀಲ ವಿವೇಕ ಸುಬ್ಬಾರೆಡ್ಡಿ ಅವರು “ಕರ್ನಾಟಕ–ಮಹಾರಾಷ್ಟ್ರ ನಡುವೆ ಗಡಿ ಎಂಬುದಿಲ್ಲ. ಅಷ್ಟೊಂದು ಸೌಹಾರ್ದ ಸಂಬಂಧ ಎರಡೂ ರಾಜ್ಯಗಳ ಜೊತೆ ಇದೆ. ಈ ಹಿಂದಿನ ಮುಖ್ಯ ನ್ಯಾಯಮೂರ್ತಿಗಳಂತೆಯೇ ವರಾಳೆ ಅವರೂ ತಮ್ಮದೇ ಆದ ಛಾಪು ಮೂಡಿಸಲಿ ಎಂದು ಸಂಘ ಬಯಸುತ್ತದೆ” ಎಂದರು.

ಅಡ್ವೊಕೇಟ್‌ ಪ್ರಭುಲಿಂಗ ನಾವದಗಿ ಅವರು ಮುಖ್ಯ ನ್ಯಾಯಮೂರ್ತಿಗಳ ಕುರಿತು ಅಭಿಮಾನದ ಮಾತುಗಳನ್ನಾಡಿದರು.

ಕರ್ನಾಟಕ ಹೈಕೋರ್ಟ್‌ನ 33ನೇ ಮುಖ್ಯ ನ್ಯಾಯಮೂರ್ತಿಯಾದ ಪ್ರಸನ್ನ ಬಿ. ವರಾಳೆ ಅವರನ್ನು ಕನ್ನಡದಲ್ಲಿಯೇ ಸ್ವಾಗತಿಸುವ ಮೂಲಕ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಂ ಕಾಶೀನಾಥ್ ಅವರು ಗಮನಸೆಳೆದರು.

Related Stories

No stories found.
Kannada Bar & Bench
kannada.barandbench.com