ಬೇಲೂರು-ಸಕಲೇಶಪುರ ನಡುವೆ ರೈಲು ಹಳಿ ನಿರ್ಮಾಣ: ರಾಜ್ಯ ಸರ್ಕಾರದ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್‌

ರೈಲು ಯೋಜನೆಯ ವೆಚ್ಚವು ಭಾರಿ ಏರಿಕೆಯಾಗಿರುವುದರಿಂದ ಹಳಿ ನಿರ್ಮಾಣ ಮುಂದುವರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರವು 2019ರ ಜನವರಿ 17ರಂದು ಪ್ರಸ್ತಾವನೆ ಕೈಬಿಟ್ಟು ಆದೇಶ ಹೊರಡಿಸಿತ್ತು.
Karnataka HC Chief Justice P B Varale and Justice Ashok S Kinagi
Karnataka HC Chief Justice P B Varale and Justice Ashok S Kinagi
Published on

ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ನಡುವೆ ರೈಲು ಹಳಿ ನಿರ್ಮಿಸುವುದನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಜಾ ಮಾಡಿದೆ.

ಹಾಸನ ಜಿಲ್ಲೆಯ ಎಚ್‌ ಸಿ ನಂದೀಶ್‌ ಮತ್ತು ಎಸ್‌ ವಿ ಪರಮೇಶ್ವರಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಅರ್ಜಿಯು ವಿಚಾರಣಾರ್ಹತೆ ಹೊಂದಿಲ್ಲ ಎಂದು ಹೇಳಿದೆ.

ರೈಲು ಯೋಜನೆಯ ವೆಚ್ಚವು ಭಾರಿ ಏರಿಕೆಯಾಗಿರುವುದರಿಂದ ಹಳಿ ನಿರ್ಮಾಣ ಮುಂದುವರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರವು 2019ರ ಜನವರಿ 17ರಂದು ಪ್ರಸ್ತಾವನೆ ಕೈಬಿಟ್ಟು ಆದೇಶ ಹೊರಡಿಸಿತ್ತು.

ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಅರ್ಜಿದಾರರು ಪಿಐಎಲ್‌ ನಿಯಮಗಳನ್ನು ಪಾಲಿಸಿಲ್ಲ. ಹೀಗಾಗಿ, ಅರ್ಜಿಯು ವಿಚಾರಣೆಗೆ ಅರ್ಹವಾಗಿಲ್ಲ. ಈ ಕ್ಷೇತ್ರದಲ್ಲಿ ನೈಪುಣ್ಯತೆ ಹೊಂದಿರುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಯಾವುದೇ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಟ್ಟಿಲ್ಲ ಎಂದು ಆಕ್ಷೇಪಿಸಿರುವುದನ್ನು ಪೀಠವು ಆದೇಶದಲ್ಲಿ ದಾಖಲಿಸಿದೆ.

ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲು ಹಳಿ ನಿರ್ಮಾಣ ಯೋಜನೆ ಕೈಬಿಟ್ಟರೂ ಚಿಕ್ಕಮಗಳೂರು-ಬೇಲೂರು ಮತ್ತು ಹಾಸನಕ್ಕೆ ಪರ್ಯಾಯ ರೈಲು ಹಳಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಇದು ಸಕಲೇಶಪುರದ ಮೂಲಕ ಮಂಗಳೂರು ತಲುಪಲಿದೆ. ಇದರಿಂದ ಸಾರ್ವಜನಿಕರಿಗೆ ಓಡಾಟಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಲಾಗಿದೆ.

ತಾಂತ್ರಿಕ ಅಂಶಗಳು, ಹಣಕಾಸಿನ ಸ್ಥಿತಿಗತಿ, ಆಡಳಿತಾತ್ಮಕ, ಸಾಮಾಜಿಕ ಮತ್ತು ಇತರ ವಿಚಾರಗಳನ್ನು ಪರಿಗಣಿಸಿ ರೈಲು ಹಳಿ ನಿರ್ಮಾಣವನ್ನು ರೈಲ್ವೆ ಇಲಾಖೆ ಕೈಗೆತ್ತಿಕೊಳ್ಳುತ್ತದೆ. ನೀತಿ-ನಿರೂಪಣೆ ವಿಚಾರಗಳು ಮತ್ತು ಸರ್ಕಾರದ ಯಾವುದೇ ಇಲಾಖೆ ಅಥವಾ ಶಾಸನಬದ್ಧ ಸಂಸ್ಥೆಯ ದೈನಂದಿನ ಚಟುವಟಿಕೆಯಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಬಾರದು ಎಂದು ಭಾರತ ಸರ್ಕಾರ ಮತ್ತು ಇತರರು ವರ್ಸಸ್‌ ಜೆ ಡಿ ಸೂರ್ಯವಂಶಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ನ್ಯಾಯಾಲಯವು ಉಲ್ಲೇಖಿಸಿದೆ. ಹೀಗಾಗಿ, ಹಾಲಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಸ್ಪಷ್ಟವಾಗಿ ಅನ್ವಯಿಸಲಿದೆ ಎಂದಿದೆ.

ಆಕ್ಷೇಪಾರ್ಹ ವಿಚಾರಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವರು ಮತ್ತು ಮುಖ್ಯಮಂತ್ರಿ ನಡುವೆ ಸಂವಹನ ನಡೆದಿದೆ ಎಂದು ಅರ್ಜಿದಾರರು ವಾದಿಸಿದ್ದರು. ಇದಕ್ಕೆ ಪೀಠವು “ಸಂವಹನ ನಡೆದಿದೆ ಎಂದ ಮಾತ್ರಕ್ಕೆ ಆಡಳಿತಾತ್ಮಕ ಮತ್ತು ಹಣಕಾಸಿನ ತೊಂದರೆಗಳಿದ್ದರೂ ರಾಜ್ಯ ಸರ್ಕಾರವು ಯೋಜನೆ ಪೂರ್ಣಗೊಳಿಸಲಾಗದು. ಈ ರೀತಿಯ ವಾದವನ್ನು ಒಪ್ಪಲಾಗದು” ಎಂದು ಆದೇಶದಲ್ಲಿ ಹೇಳಿತು.

Kannada Bar & Bench
kannada.barandbench.com