
“ಒಂದು ಗೊತ್ತುಪಡಿಸಿದ ಇಡೀ ಜಾಗವನ್ನು ವಸತಿ ಸಂಕೀರ್ಣ (ಅಪಾರ್ಟ್‌ಮೆಂಟ್) ನಿರ್ಮಿಸುವ ಉದ್ದೇಶಕ್ಕಾಗಿ ಮಾರಾಟ ಕ್ರಯಪತ್ರ ಮಾಡಿಕೊಂಡ ಮೇಲೆ, ಆ ಜಾಗದಲ್ಲಿ ಅದರ ಭೂ ಮಾಲೀಕರು ಅಲ್ಪಭಾಗವನ್ನು ತಮಗೋಸ್ಕರ ಎಂದು ಉಳಿಸಿಕೊಳ್ಳಲಾಗದು” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ಬೆಂಗಳೂರಿನ ಹೊರಮಾವು ಪ್ರದೇಶ ವ್ಯಾಪ್ತಿಯಲ್ಲಿರುವ ಕೀರ್ತಿ ಹಾರ್ಮನಿ ಅಪಾರ್ಟ್‌ಮೆಂಟ್ ಓನರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಶಂಕರ್ ಥಾನು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್ ಎಸ್ ಸಂಜಯಗೌಡ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಹೊಸ ವಸತಿ ಸಂಕೀರ್ಣ ನಿರ್ಮಾಣಕ್ಕೆ ಎಂದು ಜಾಗದ ಮಾಲೀಕ ಹನುಮಂತರೆಡ್ಡಿ ಅವರಿಗೆ ನೀಡಿದ್ದ ಮಂಜೂರಾತಿಯನ್ನು ರದ್ದುಗೊಳಿಸಿದೆ.
“ನಿರ್ಮಾಣ, ಮಾರಾಟ, ನಿರ್ವಹಣೆ ಮತ್ತು ಹಸ್ತಾಂತರ ಪ್ರಕ್ರಿಯೆ ನಿಯಂತ್ರಿಸುವ ನಿಟ್ಟಿನಲ್ಲಿನ, ಕರ್ನಾಟಕ ಅಪಾರ್ಟ್‌ಮೆಂಟ್ಸ್ ಓನರ್‌ಶಿಪ್ ಫ್ಲ್ಯಾಟ್ಸ್ ಕಾಯಿದೆ 1972ರ ಅಡಿ ವಸತಿ ಸಂಕೀರ್ಣದಲ್ಲಿ ಫ್ಲ್ಯಾಟ್ ಖರೀದಿಗೆ ಒಪ್ಪಿರುವ ವ್ಯಕ್ತಿಗಳ ಒಪ್ಪಿಗೆ ಇಲ್ಲದೆ ನಿರ್ಮಾಣ ಕಾರ್ಯದಲ್ಲಿ ಯಾವುದೇ ಬದಲಾವಣೆ ಮಾಡಲು ಆಗದು. ಸದರಿ ಪ್ರಕರಣದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 2007ರ ಮಾರ್ಚ್ 29ರಂದು ನೀಡಿರುವ ಅನುಮೋದಿತ ಯೋಜನೆಯಂತೆ ರಸ್ತೆಗೆ ಹೊಂದಿಕೊಂಡ ಜಾಗದಲ್ಲಿ ಮಳೆ ನೀರು ಕೊಯ್ಲು ಹಾಗೂ ಕೊಳಚೆ ನೀರು ಶುದ್ಧೀಕರಣ (ಎಸ್‌ಟಿಪಿ) ಘಟಕ ನಿರ್ಮಾಣ ಮಾಡಬೇಕು” ಎಂದು ಪೀಠ ಆದೇಶಿಸಿದೆ.
“ಒಂದು ವೇಳೆ ಯೋಜನಾ ಪ್ರಾಧಿಕಾರವು ಮಳೆ ನೀರು ಕೊಯ್ಲು ಮತ್ತು ಎಸ್‌ಟಿಪಿ ಘಟಕದ ಜಾಗ ಬದಲಾವಣೆಗೆ ಒಪ್ಪಿಕೊಂಡರೆ, ವಸತಿ ಸಂಕೀರ್ಣದಲ್ಲಿ ಫ್ಲ್ಯಾಟ್‌ಗಳನ್ನು ಖರೀದಿ ಮಾಡಲು ಒಪ್ಪಿಕೊಂಡಿರುವವರ ಒಪ್ಪಿಗೆಯನ್ನೂ ಪಡೆಯಬೇಕು” ಎಂದು ನಿರ್ದೇಶಿಸಿದೆ.
ಪ್ರಕರಣದ ಹಿನ್ನಲೆ: ಮೆಸರ್ಸ್ ಕೀರ್ತಿ ಎಸ್ಟೇಟ್ಸ್ ಪ್ರೈವೆಟ್ ಲಿಮಿಟೆಡ್, ಭೂ ಮಾಲೀಕರಾದ ಕೆ ರಘು ಮತ್ತು ಹನುಮಂತರೆಡ್ಡಿ ಅವರೊಂದಿಗೆ 2005ರ ಜನವರಿ 28ರಂದು ಜಂಟಿ ಅಭಿವೃದ್ಧಿ ಒಪ್ಪಂದ (ಜೆಡಿಎ) ಮಾಡಿಕೊಂಡಿತ್ತು.
ಇದರನ್ವಯ ಭೂ ಮಾಲೀಕರಿಗೆ ಸೇರಿದ 5 ಎಕರೆ 16 ಗುಂಟೆ ಪ್ರದೇಶದಲ್ಲಿ ವಸತಿ ಸಂಕೀರ್ಣ ಅಭಿವೃದ್ಧಿಪಡಿಸಿ, ಜೆಡಿಎ ಒಪ್ಪಂದದ ಅನುಸಾರ ಅಭಿವೃದ್ಧಿಪಡಿಸಿದ ಭಾಗವನ್ನು ಭೂ ಮಾಲೀಕರೊಂದಿಗೆ ಹಂಚಿಕೊಳ್ಳಬೇಕಾಗಿತ್ತು. ಈ ದಿಸೆಯಲ್ಲಿ ಬಿಲ್ಡರ್ (ಮೆಸರ್ಸ್ ಕೀರ್ತಿ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್) ಸಲ್ಲಿಸಿದ್ದ ಪ್ಲ್ಯಾನ್‌ಗೆ (ಯೋಜನೆ) ಬಿಡಿಎ ಅನುಮೋದನೆ ನೀಡಿತ್ತು.
ಯೋಜನೆ ಅನ್ವಯ ಎರಡು ರಸ್ತೆಗಳಿಗೆ ಜಾಗವನ್ನು ಮೀಸಲಿಟ್ಟು, ಇಡೀ ಜಾಗವನ್ನು ಎರಡು ಭಾಗಗಳಾಗಿ ವಿಂಗಡಿಸಿ, ಪ್ರಮುಖ ಜಾಗದಲ್ಲಿ ವಸತಿ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಜೊತೆಗೆ 1104.40 ಚದರ ಮೀಟರ್ ಜಾಗದಲ್ಲಿ ಮಳೆ ನೀರು ಕೊಯ್ಲು ಮತ್ತು ಎಸ್‌ಟಿಪಿ ನಿರ್ಮಾಣ ಮಾಡಬೇಕಿತ್ತು. ಅದರಂತೆ ಕ್ರಯಪತ್ರವನ್ನೂ ಮಾಡಿಕೊಳ್ಳಲಾಗಿತ್ತು.
ಭೂ ಮಾಲೀಕರು ಕ್ರಯಪತ್ರ ಮಾಡಿಕೊಂಡಿದ್ದ ಜಾಗದಲ್ಲಿ ಸ್ವಲ್ಪ ಭಾಗವನ್ನು ಅಂದರೆ 1104.04 ಚದರ ಅಡಿ ಜಾಗವನ್ನು ತಾವೇ ಇರಿಸಿಕೊಂಡಿದ್ದರು. ಏತನ್ಮಧ್ಯೆ, ಭೂ ಮಾಲೀಕರು 2018ರ ಏಪ್ರಿಲ್ 3ರಂದು ಬಿಬಿಎಂಪಿಗೆ ಅರ್ಜಿಯೊಂದನ್ನು ಸಲ್ಲಿಸಿ ಹೊಸ ವಸತಿ ಸಂಕೀರ್ಣ ನಿರ್ಮಾಣಕ್ಕೆ ಮಂಜೂರಾತಿ ನೀಡುವಂತೆ ಬಿಬಿಎಂಪಿಗೆ ಮನವಿ ಮಾಡಿದ್ದರು. ಬಿಬಿಎಂಪಿ ಈ ಹೊಸ ವಸತಿ ಸಂಕೀರ್ಣ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಿತ್ತು. ಇದನ್ನು ಪ್ರಶ್ನಿಸಿ ಜೆಡಿಎ ಮಾಡಿಕೊಂಡಿದ್ದ ಬಿಲ್ಡರ್ ಹೈಕೋರ್ಟ್ ಮೆಟ್ಟಿಲೇರಿದ್ದರು.