ಹೊಸದೆಂದು ನಂಬಿಸಿ ಬಳಸಿದ ಫೋನ್ ಮಾರಾಟ ಮಾಡಿದ್ದಕ್ಕಾಗಿ ಇ-ವಾಣಿಜ್ಯ ತಾಣ ಫ್ಲಿಪ್ ಕಾರ್ಟ್ ಮತ್ತು ಒನ್ ಪ್ಲಸ್ ಫೋನ್ ತಯಾರಕರಿಗೆ ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ರೂ 30,000 ದಂಡ ವಿಧಿಸಿದೆ.
ಬಳಸಿದ ಫೋನ್‌ಗಾಗಿ ಪಾವತಿಸಿದ ಸಂಪೂರ್ಣ ಮೊತ್ತವನ್ನು ದೂರುದಾರರಿಗೆ ಮರುಪಾವತಿಸುವಂತೆಯೂ ಅದು ನಿರ್ದೇಶಿಸಿದೆ.
ಫೋನ್ ಸೇವಾ ದಾಖಲೆಗಳ ಪ್ರಕಾರ ದೂರುದಾರರು ಖರೀದಿಸುವ ನಾಲ್ಕು ತಿಂಗಳ ಮೊದಲೇ ಫೋನ್ ಸಕ್ರಿಯವಾಗಿತ್ತು ಎಂಬುದನ್ನು ಗ್ರಾಹಕ ಆಯೋಗದ ಅಧ್ಯಕ್ಷೆ ಪದ್ಮಾ ಪಾಂಡೆ ಮತ್ತು ಸದಸ್ಯ ಪ್ರೀತಿಂದರ್ ಸಿಂಗ್ ಅವರು ಗಮನಿಸಿದರು.
ಫ್ಲಿಪ್‌ಕಾರ್ಟ್ ಮೂಲಕ ನೂತನ ಒನ್‌ಪ್ಲಸ್ 11 ಆರ್ 5 ಜಿಯನ್ನು ಬಾತ್ಲಾ ಟೆಲಿಟೆಕ್ ಎಂಬ ಮಾರಾಟಗಾರರ ಮೂಲಕ ಅಶ್ವನಿ ಚಾವ್ಲಾ ಎಂಬುವವರು ದೂರು ನೀಡಿದ್ದರು.
ಕೆಲ ದಿನಗಳ ಬಳಕೆ ಬಳಿಕ ಫೋನ್‌ನಲ್ಲಿ ಸಮಸ್ಯೆ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಒನ್ ಪ್ಲಸ್ ಸೇವಾ ಕೇಂದ್ರವನ್ನು ಸಂಪರ್ಕಿಸಿದಾಗ ಫೋನ್ ನಾಲ್ಕು ತಿಂಗಳ ಮೊದಲೇ ಸಕ್ರಿಯವಾಗಿರುವುದು ಪತ್ತೆಯಾಗಿತ್ತು. ಒನ್ ಪ್ಲಸ್ ತಯಾರಕ, ಹಾಗೂ ಅದರ ಮಾರಾಟಗಾರ ಬಾತ್ಲಾ ಟೆಲಿಟೆಕ್ ಹಾಗೂ ಫ್ಲಿಪ್‌ಕಾರ್ಟ್ ಸಂಪರ್ಕಿಸುವಂತೆ ಸೇವಾ ಕೇಂದ್ರಕ್ಕೆ ಸೂಚಿಸಿತು. ಆದರೆ ಸೂಕ್ತ ಪ್ರತಿಕ್ರಿಯೆ ದೊರೆಯದೆ ಕಡೆಗೆ ಗ್ರಾಹಕ ಹೊಸ ಫೋನ್ ಖರೀದಿಸುವಂತಾಯಿತು. ಇದರಿಂದ ಅಸಮಾಧಾನಗೊಂಡ ಅವರು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.
ದೂರುದಾರರಿಗೆ ಮಾರಾಟ ಮಾಡಿದ ಫೋನ್ ಹಳೆಯದು ಮತ್ತು ಬಳಸಲ್ಪಟ್ಟಿದೆ. ಅಲ್ಲದೆ, ಪ್ರತಿವಾದಿಗಳು (ಫ್ಲಿಪ್‌ಕಾರ್ಟ್, ಒನ್‌ಪ್ಲಸ್ ಹಾಗೂ ಚಿಲ್ಲರೆ ವ್ಯಾಪಾರಿ) ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಸೂಕ್ತ ಕಾಳಜಿ ವಹಿಸಿಲ್ಲ ಎಂದು ಆಯೋಗ ತೀರ್ಮಾನಿಸಿತು.
"ನಿರ್ವಹಣಾ ಶುಲ್ಕ"ಕ್ಕಾಗಿ ಗ್ರಾಹಕರಿಗೆ ಎರಡು ಬಾರಿ ಬಿಲ್ ಮಾಡಲಾಗಿದೆ ಎಂದು ಅರಿತ ರಾಜ್ಯ ಗ್ರಾಹಕ ಆಯೋಗ ಇದು ಅಸಮಂಜಸ ಮತ್ತು ಅನ್ಯಾಯದ ವ್ಯಾಪಾರ ಕ್ರಮ ಎಂದಿತು.
ಮೂರನೇ ಮಾರಾಟಗಾರರಿಗೆ ತನ್ನ ವೇದಿಕೆಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿರುವುದರಿಂದ ಫ್ಲಿಪ್‌ಕಾರ್ಟ್ ಕೂಡ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದಿತು.
ಅದರಂತೆ, ಮೊಬೈಲ್ ಫೋನ್‌ಗೆ ನೀಡಿದ್ದ ರೂ 40,941 ಹಣವನ್ನು ಮರುಪಾವತಿಸಲು ಹಾಗೂ ನಿರ್ವಹಣೆಗಾಗಿ ವಿಧಿಸಲಾದ ಹೆಚ್ಚುವರಿ ರೂ 49ನ್ನು ಮರಳಿಸಲು ಆಯೋಗ ಪ್ರತಿವಾದಿಗಳಿಗೆ ಸೂಚಿಸಿತು.
ಅಲ್ಲದೆ, ಸೇವೆಯ ಕೊರತೆ, ಅನ್ಯಾಯದ ವ್ಯಾಪಾರ ಕ್ರಮ ಮತ್ತು ಕಿರುಕುಳಕ್ಕಾಗಿ ದೂರುದಾರರಿಗೆ ಜಂಟಿಯಾಗಿ ರೂ 10,000 ಹಾಗೂ ದಾವೆ ವೆಚ್ಚವಾಗಿ ರೂ 10,000, ರಾಜ್ಯ ಗ್ರಾಹಕ ಆಯೋಗದ ಕಾನೂನು ನೆರವು ಖಾತೆಗೆ ರೂ 10,000 ಪಾವತಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಲಾಯಿತು.
ಇದಲ್ಲದೆ, ನಿರ್ವಹಣಾ ಶುಲ್ಕವನ್ನು ನೀಡುವ ನೆಪದಲ್ಲಿ ಒಂದೇ ವಹಿವಾಟಿಗೆ ಎರಡು ಪ್ರತ್ಯೇಕ ಬಿಲ್‌ಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಅಂತಹ ಅನ್ಯಾಯದ ಒಪ್ಪಂದಗಳು, ಅನ್ಯಾಯದ ವ್ಯಾಪಾರ ಕ್ರಮಗಳು ಮತ್ತು 'ಕರಾಳ ಮಾದರಿಗಳನ್ನು' ಅನುಸರಿಸದಂತೆ ವಿರೋಧ ಪಕ್ಷಗಳಿಗೆ ಆದೇಶಿಸಲಾಯಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]