ಕಿರಾಣಿ ಅಂಗಡಿ ಮಾಲೀಕರೊಬ್ಬರ ಪೇಟಿಎಂ ಖಾತೆಯನ್ನು ವಿನಾಕಾರಣ ತಡೆಹಿಡಿದಿದ್ದ ಪೇಟಿಎಂಗೆ ಪುಣೆಯಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಇತ್ತೀಚೆಗೆ ₹12,000 ದಂಡ ವಿಧಿಸಿದೆ [ದಿನೇಶ್ ಭವರ್‌ಲಾಲ್ ಚೌಧರಿ ಮತ್ತು ಪೇಟಿಎಂ ಬ್ಯಾಂಕ್ ನಡುವಣ ಪ್ರಕರಣ].
ದೂರು ದಾಖಲಾದ ನಂತರ ಪೇಟಿಎಂ ಖಾತೆಯನ್ನು ಮರುಚಾಲ್ತಿಗೊಳಿಸಿದ್ದರೂ, ಮೊದಲ ಹಂತದಲ್ಲಿ ಖಾತೆ ಫ್ರೀಜ್ ಮಾಡಲು ಕಾರಣ ಏನೆಂಬುದನ್ನು ಪೇಟಿಎಂ ವಿವರಿಸಿಲ್ಲ ಎಂಬುದನ್ನು ಎಂದು ಆಯೋಗದ ಅಧ್ಯಕ್ಷ ಅನಿಲ್ ಬಿ ಜಾವಳೇಕರ್ ಮತ್ತು ಸದಸ್ಯೆ ಸರಿತಾ ಎನ್ ಪಾಟೀಲ್ ತಿಳಿಸಿದರು.
ಆದ್ದರಿಂದ, ಎರಡು ತಿಂಗಳ ನಂತರ ದೂರುದಾರರ ಪೇಟಿಎಂ ಖಾತೆಯನ್ನು ಪೇಟಿಎಂ ಮರುಚಾಲ್ತಿಗೊಳಿಸಿದ್ದರೂ, ದೂರುದಾರರ ಖಾತೆಯನ್ನು ಸ್ಥಗಿತಗೊಳಿಸಲು ಪ್ರಮುಖ ಕಾರಣ ಏನೆಂಬುದನ್ನು ವಿವರಿಸಲು ಪೇಟಿಎಂ ವಿಫಲವಾಗಿದೆ. ಈ ಕ್ರಮದಿಂದಾಗಿ ದೂರುದಾರರು ಸಾಕಷ್ಟು ನಷ್ಟ ಅನುಭವಿಸಿದ್ದು ಇದು ಪೇಟಿಎಂನ ಸೇವಾ ನ್ಯೂನತೆಗೆ ಸಮ ಎಂದು ಮೇ 7ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.
ಕಿರಾಣಿ ಅಂಗಡಿ ಮಾಲೀಕರ ₹ 62,633.94ರಷ್ಟು ಠೇವಣಿ ಮೊತ್ತ ಇದ್ದ ಬ್ಯಾಂಕ್ ಖಾತೆಯನ್ನು ಜೂನ್ 13, 2022ರಂದು ಕಾರಣವಿಲ್ಲದೆ ತಡೆಹಿಡಿಯಲಾಗಿತ್ತು. ತಾನು ಸಲ್ಲಿಸಿದ್ದ ಸಪೋರ್ಟ್ ಟಿಕೆಟ್ ಮತ್ತು ದೂರುಗಳಿಗೆ ಪೇಟಿಎಂ ಉತ್ತರಿಸದೇ ಇದ್ದುದರಿಂದ ಅವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ದೂರು ದಾಖಲಾದ ನಂತರ ಪೇಟಿಎಂ ಖಾತೆಯನ್ನು ಮರುಚಾಲ್ತಿಗೊಳಿಸಿದ್ದರೂ ತನಗಾದ ಮಾನಸಿಕ ಕಿರುಕುಳ ಮತ್ತು ಸೇವಾ ನ್ಯೂನತೆ ಹಿನ್ನೆಲೆಯಲ್ಲಿ ಪರಿಹಾರ ಒದಗಿಸಿಕೊಡಬೇಕೆಂದು ಅವರು ಕೋರಿದ್ದರು.
ಸುಮಾರು ಎರಡು ತಿಂಗಳ ಕಾಲ ಖಾತೆ ಸ್ಥಗಿತಗೊಳಿಸಲಾಗಿದ್ದು ಆಯೋಗವನ್ನು ಸಂಪರ್ಕಿಸುವ ಮೊದಲು ದೂರುದಾರರು ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಅತ್ಯುತ್ತಮ ಯತ್ನ ಮಾಡಿದ್ದರು. ಆದರೆ ಪೇಟಿಎಂ ಪರಿಹಾರ ನೀಡಲು ಮತ್ತು ದೂರನ್ನು ನಿವಾರಿಸಲು ವಿಫಲವಾಯಿತು ಎಂದು ಗ್ರಾಹಕ ವೇದಿಕೆ ತಿಳಿಸಿದೆ.
ದೂರು ದಾಖಲಾದ ನಂತರ ಪೇಟಿಎಂ ಖಾತೆಯನ್ನು ಮರುಚಾಲ್ತಿಗೊಳಿಸಿದ್ದರೂ, ಮೊದಲ ಹಂತದಲ್ಲಿ ಖಾತೆ ತಡೆ ಹಿಡಿಯಲು ಕಾರಣ ಏನೆಂಬುದನ್ನು ಪೇಟಿಎಂ ವಿವರಿಸದೇ ಇರುವುದು ಸೇವಾ ನ್ಯೂನತೆಯಾಗಿದೆ ಎಂದು ಅದು ಹೇಳಿದೆ.
ಈ ಹಿನ್ನೆಲೆಯಲ್ಲಿ ದೂರುದಾರರ ಖಾತೆ ತಡೆಹಿಡಿಯಲಾಗಿದ್ದ ಅವಧಿಗೆ ಸಂಬಂಧಿಸಿದಂತೆ ಅವರ ಖಾತೆಯಲ್ಲಿದ್ದ ಠೇವಣಿ ಮೊತ್ತಕ್ಕೆ 45 ದಿನಗೊಳಗೆ ಶೇ 5ರಷ್ಟು ಬಡ್ಡಿ ಮೊತ್ತ ಪಾವತಿಸಬೇಕು. ಅಲ್ಲದೆ ದೂರುದಾರನಿಗೆ ಆದ ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಿ ₹ 7,000 ಮತ್ತು ವ್ಯಾಜ್ಯ ವೆಚ್ಚವಾಗಿ ₹ 5,000 ಪಾವತಿಸುವಂತೆ ಪೇಟಿಎಂಗೆ ಅದು ಸೂಚಿಸಿತು.