ಉತ್ಪನ್ನ ವಿತರಣೆಯಾಗದಿದ್ದ ಕಾರಣಕ್ಕೆ ಹಣ ಮರುಪಾವತಿ ಮಾಡುವಲ್ಲಿ ವಿಳಂಬ ಉಂಟು ಮಾಡಿದ್ದಕ್ಕಾಗಿ ಗ್ರಾಹಕರೊಬ್ಬರಿಗೆ ₹4,000 ಪರಿಹಾರ ನೀಡುವಂತೆ ಆನ್‌ಲೈನ್ ಸೌಂದರ್ಯೋತ್ಪನ್ನ ಮಾರಾಟ ವೇದಿಕೆಯಾಗಿರುವ ನೈಕಾಗೆ (Nykaa) ಚಂಡೀಗಢದಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಈಚೆಗೆ ಆದೇಶಿಸಿದೆ.
ಕಡೆಗೆ ನೈಕಾ ಹಣ ಮರುಪಾವತಿಸಿದೆಯಾದರೂ ಹಾಗೆ ಮಾಡಿರುವುದು ಗ್ರಾಹಕರು ಲೀಗಲ್ ನೋಟಿಸ್ ನೀಡಿದ ಬಳಿಕ ಎಂದು ಅಧ್ಯಕ್ಷ ಪವನ್‌ಜಿತ್ ಸಿಂಗ್ ಮತ್ತು ಸದಸ್ಯೆ ಸುರ್ಜೀತ್ ಕೌರ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಉತ್ಪನ್ನಕ್ಕಾಗಿ ದೂರುದಾರ ಸುಮಾರು ಒಂದು ತಿಂಗಳ ಕಾಲ ಕಾದರು. ಕಾನೂನುಬಾಹಿರವಾಗಿ ಮತ್ತು ವಿನಾಕಾರಣ ಮರುಪಾವತಿ ಮೊತ್ತವನ್ನು ತಡೆಹಿಡಿಯಲಾಗಿದ್ದು ವಕೀಲರ ಮೂಲಕ ಲೀಗಲ್ ನೋಟಿಸ್ ಕಳಿಸಿದ ಬಳಿಕ ಮರುಪಾವತಿಸಲಾಗಿದೆ ಎಂದು ಜುಲೈ 1ರಂದು ನೀಡಿದ ಆದೇಶದಲ್ಲಿ ಆಯೋಗ ವಿವರಿಸಿದೆ.
ನೈಕಾದ ಲೋಪ ಸೇವಾ ನ್ಯೂನತೆಯಾಗಿದ್ದು ಗ್ರಾಹಕರು ಪರಿಹಾರಕ್ಕೆ ಅರ್ಹರಾಗಿದ್ದಾರೆ. ಅವರು ಅನುಭವಿಸಿದ ಮಾನಸಿಕ ಯಾತನೆ ಮತ್ತು ಕಿರುಕುಳಕ್ಕಾಗಿ ಅವರಿಗೆ ₹4,000 ಪರಿಹಾರ ಮತ್ತು ವ್ಯಾಜ್ಯ ವೆಚ್ಚ ಭರಿಸಿಕೊಡಬೇಕು ಎಂದು ಆದೇಶಿಸಲಾಗಿದೆ.
ಚರ್ಮದ ಆರೈಕೆ ಉತ್ಪನ್ನಗಳಿಗೆ ಆರ್ಡರ್ ಮಾಡಿ ₹2,823.24 ಪಾವತಿಸಿದ್ದರೂ ಉತ್ಪನ್ನ ಗ್ರಾಹಕರಾದ ದೀಕ್ಷಾ ನೇಗಿ ಅವರ ಕೈಸೇರಿರಲಿಲ್ಲ. ನೈಕಾ ಸಹಾಯ ಕೇಂದ್ರವನ್ನು ಅವರು ಸಂಪರ್ಕಿಸಿದರಾದರೂ ಉತ್ಪನ್ನ ತಲುಪಿಸಿರಲಿಲ್ಲ ಜೊತೆಗೆ ಹಣವನ್ನೂ ಮರುಪಾವತಿಸಿರಲಿಲ್ಲ. ಗ್ರಾಹಕಿ ಲೀಗಲ್ ನೋಟಿಸ್ ನೀಡಿದ ಬಳಿಕವಷ್ಟೇ ಹಣ ಮರುಪಾವತಿಯಾಗಿತ್ತು. ತಮ್ಮ ಕುಂದುಕೊರತೆಗೆ ಪ್ರತಿಕ್ರಿಯಿಸುವಲ್ಲಿ ನೈಕಾ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ಆಕೆ ಜಿಲ್ಲಾ ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.
ಆದರೆ ಹಣ ಮರುಪಾವತಿಸಲಾಗಿದ್ದು ವ್ಯಾಜ್ಯವನ್ನು ಹಿಂಪಡೆಯಬೇಕು ಎಂದು ನೈಕಾ ವಾದಿಸಿತ್ತು. ತಾನು ಕೇವಲ ಮಧ್ಯವರ್ತಿಯಾಗಿದ್ದು ಸೇವಾ ನ್ಯೂನತೆಗೆ ಜವಾಬ್ದಾರನಲ್ಲ ಎಂದು ಪ್ರತಿಪಾದಿಸಿತ್ತು. ಆದರೆ ಈ ವಾದವನ್ನು ನ್ಯಾಯಾಲಯ ಒಪ್ಪದೆ ಪರಿಹಾರಕ್ಕೆ ಆದೇಶಿಸಿತು.