ಆಹಾರ ಪೂರೈಕೆ ಆ್ಯಪ್ ಬಳಸಿ ಆರ್ಡರ್ ಮಾಡಿದ ಐಸ್ ಕ್ರೀಂ ವಿತರಿಸದ ಗ್ರಾಹಕರಿಗೆ ₹2,000 ದಾವೆ ವೆಚ್ಚ ಮತ್ತು ₹3,000 ಪರಿಹಾರ ನೀಡುವಂತೆ ಬೆಂಗಳೂರಿನ ಗ್ರಾಹಕ ನ್ಯಾಯಾಲಯ ಇತ್ತೀಚೆಗೆ ಸ್ವಿಗ್ಗಿಗೆ ಆದೇಶಿಸಿದೆ.
ಬಂಡಲ್ ಟೆಕ್ನಾಲಜೀಸ್ ಒಡೆತನದ ವೇದಿಕೆಗೆ ಐಸ್ ಕ್ರೀಮ್ ಆರ್ಡರ್ ಮಾಡುವಾಗ ಗ್ರಾಹಕರು ಪಾವತಿಸಿದ ₹187 ಮೊತ್ತವನ್ನು ಮರುಪಾವತಿಸುವಂತೆಯೂ ಬೆಂಗಳೂರು ನಗರ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ಪರಿಹಾರ ಆಯೋಗ ಸೂಚಿಸಿದೆ. ಸ್ವಿಗ್ಗಿಯ ನಡೆ ಸೇವಾ ನ್ಯೂನತೆ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಕ್ಕೆ ಸಮನಾಗಿದೆ ಎಂದು ವೇದಿಕೆ ತೀರ್ಪು ನೀಡಿದೆ.
ಕಳೆದ ವರ್ಷ ಜನವರಿ 26 ರಂದು, ಗ್ರಾಹರೊಬ್ಬರು ‘ಕ್ರೀಮ್ ಸ್ಟೋನ್ ಐಸ್ ಕ್ರೀಮ್ ರೆಸ್ಟರಂಟ್‌ನಿಂದ ‘ನಟ್ಟಿ ಡೆತ್ ಬೈ ಚಾಕೊಲೇಟ್ʼಐಸ್ ಕ್ರೀಂಗಾಗಿ ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ್ದರು.
ಐಸ್‌ಕ್ರೀಂ ಡೆಲಿವರಿ ಮಾಡದಿದ್ದರೂ ಸ್ವಿಗ್ಗಿ ಆ್ಯಪ್‌ನಲ್ಲಿ ಏಜೆಂಟ್ ಡೆಲಿವರಿ ಮಾಡಲಾಗಿದೆ ಎಂದು ದಾಖಲಿಸಿದ್ದರು. ಸ್ವಿಗ್ಗಿ ಗ್ರಾಹಕರಿಗೆ ಮೊತ್ತ ಹಿಂತಿರುಗಿಸಲು ವಿಫಲವಾದ್ದರಿಂದ ಗ್ರಾಹಕರು ಆಯೋಗದ ಮೆಟ್ಟಿಲೇರಿದ್ದರು.
ಗ್ರಾಹಕ ಮತ್ತು ಥರ್ಡ್ ಪಾರ್ಟಿ ರೆಸ್ಟರಂಟ್ ಇಲ್ಲವೇ ವ್ಯಾಪಾರಿಗಳ ನಡುವೆ ತಾನು ಕೇವಲ ಮಧ್ಯಸ್ಥಿಕೆದಾರನಾಗಿದ್ದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಪ್ರಕಾರ ತನಗೆ ಹೊಣೆಗಾರಿಕೆಯಿಂದ ರಕ್ಷಣೆ ಇದೆ. ತನ್ನ ಡೆಲಿವರಿ ಬಾಯ್ ಮಾಡಿದ್ದಾನೆ ಎನ್ನಲಾದ ತಪ್ಪಿಗೆ ತನ್ನನ್ನು ಹೊಣೆಗಾರನನ್ನಾಗಿ ಮಾಡುವಂತಿಲ್ಲ. ಆ್ಯಪ್‌ನಲ್ಲಿ ಡೆಲಿವರಿ ಮಾಡಲಾಗಿದೆ ಎಂದು ದಾಖಲಾಗಿರುವಾಗ ಆರ್ಡರ್ ಪೂರೈಕೆಯಾಗಿದೆಯೇ ಎಂಬುದನ್ನು ಪರಿಶೀಲಿಸುವ ಸ್ಥಿತಿಯಲ್ಲಿ ತಾನು ಇರುವುದಿಲ್ಲ ಎಂದು ಸ್ವಿಗ್ಗಿ ವಾದಿಸಿತ್ತು.
ವಾದ ಆಲಿಸಿದ, ಅಧ್ಯಕ್ಷ ವಿಜಯಕುಮಾರ್ ಎಂ ಪಾವಲೆ, ವಿ ಅನುರಾಧ ಮತ್ತು ರೇಣುಕಾದೇವಿ ದೇಶಪಾಂಡೆ ಅವರನ್ನೊಳಗೊಂಡ ಪೀಠ ಮರುಪಾವತಿಗಾಗಿ ಗ್ರಾಹಕರು ನೀಡಿದ ಲೀಗಲ್ ನೋಟಿಸ್‌ಗೆ ಸ್ವಿಗ್ಗಿ ಪ್ರತಿಕ್ರಿಯಿಸಿರಲಿಲ್ಲ ಎಂದು ಹೇಳಿತು.
ಮಾಹಿತಿ ತಂತ್ರಜ್ಞಾನ ಕಾಯಿದೆಯಡಿಯಲ್ಲಿ ಮಧ್ಯವರ್ತಿಯಾಗಿ ಹೊಣೆಗಾರಿಕೆಯಿಂದ ರಕ್ಷಿಸಲ್ಪಟ್ಟಿದೆ ಎಂಬ ಸ್ವಿಗ್ಗಿಯ ವಾದವನ್ನು ತಿರಸ್ಕರಿಸಿದ ಅದು ಈ ವಿನಾಯಿತಿಯು ಮಾಹಿತಿಯ ಪ್ರಸಾರಕ್ಕೆ ಸೀಮಿತವಾಗಿದೆ ಮತ್ತು ಸರಕು ಮತ್ತು ಸೇವೆಗಳ ಮಾರಾಟಕ್ಕೆ ಅನ್ವಯಿಸುವುದಿಲ್ಲ ಎಂದಿತು.
ಸೇವಾ ನ್ಯೂನತೆ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸ ಕುರಿತಂತೆ ಸ್ವಿಗ್ಗಿ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ಗ್ರಾಹಕ ನ್ಯಾಯಾಲಯ ನಿರ್ಧರಿಸಿತು.
ಆದರೆ ಗ್ರಾಹಕರು ಪರಿಹಾರ ರೂಪದಲ್ಲಿ ₹ 10,000 ಮತ್ತು ದಾವೆ ವೆಚ್ಚದ ರೂಪದಲ್ಲಿ ₹ 7,500 ಪಾವತಿಸಿರುವುದು ವಿಪರೀತವಾಯಿತು ಎಂದು ಅಭಿಪ್ರಾಯಪಟ್ಟ ವೇದಿಕೆ ಸ್ವಿಗ್ಗಿ ₹187 ಮರುಪಾವತಿ ಮಾಡಬೇಕು. ದೂರುದಾರರಿಗೆ ಪರಿಹಾರವಾಗಿ ₹3,000 ಮತ್ತು ವ್ಯಾಜ್ಯ ವೆಚ್ಚವಾಗಿ ₹2,000 ಪಾವತಿಸಬೇಕು ಎಂದು ಆದೇಶಿಸಿತು.