ದಿಕ್ಕು ತಪ್ಪಿಸುವ ಜಾಹೀರಾತು ಹಿಂಪಡೆಯುವಂತೆ ಇಮಾಮಿಗೆ ಸೂಚಿಸಿದ ಗ್ರಾಹಕರ ಆಯೋಗ: ₹15 ಲಕ್ಷ ಪರಿಹಾರಕ್ಕೆ ಆದೇಶ

ಮೂರು ವಾರಗಳಲ್ಲಿ ಬಳಕೆದಾರರಿಗೆ ಹೊಳೆಯುವ ತ್ವಚೆ ದೊರೆಯಲಿದೆ ಎಂಬ ಕಂಪೆನಿಯ ಹೇಳಿಕೆಗೆ ಆಧಾರಗಳಿಲ್ಲ. ಅಲ್ಲದೆ ಅದು ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದಿದೆ ದೆಹಲಿ ಕೇಂದ್ರೀಯ ಜಿಲ್ಲಾ ಗ್ರಾಹಕರ ಆಯೋಗ.
Fair & Handsome cream
Fair & Handsome cream
Published on

'ಫೇರ್‌ ಅಂಡ್‌ ಹ್ಯಾಂಡ್‌ಸಮ್‌ʼ ಪುರುಷರ ಸೌಂದರ್ಯವರ್ಧಕ ಉತ್ಪನ್ನಕ್ಕೆ ಸಂಬಂಧಿಸಿದಂತೆ ದಿಕ್ಕು ತಪ್ಪಿಸುವ ಜಾಹೀರಾತು ನೀಡಿದ ಪ್ರಕರಣದಲ್ಲಿ ಉತ್ಪನ್ನ ತಯಾರಕ ಕಂಪೆನಿ ಇಮಾಮಿ ದೋಷಿ ಎಂದು ದೆಹಲಿ ಕೇಂದ್ರೀಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತಿಳಿಸಿದೆ.

ಮೂರು ವಾರಗಳಲ್ಲಿ ಬಳಕೆದಾರರಿಗೆ ಹೊಳೆಯುವ ತ್ವಚೆ ದೊರೆಯಲಿದೆ ಎಂಬ ಕಂಪೆನಿಯ ಹೇಳಿಕೆಗೆ ಆಧಾರಗಳಿಲ್ಲ. ಅಲ್ಲದೆ ಅದು ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅಧ್ಯಕ್ಷ ಜೀತ್ ಸಿಂಗ್ ಮತ್ತು ಸದಸ್ಯೆ ರಶ್ಮಿ ಬನ್ಸಾಲ್ ಅವರಿದ್ದ ಪೀಠ ತಿಳಿಸಿದೆ.

ಉತ್ಪನ್ನದ ಮೇಲೆ ನೀಡಲಾದ ಸೂಚನೆಗಳು ಅಪೂರ್ಣ ಎಂದು ಗೊತ್ತಿದ್ದೂ ಮೂರು ವಾರಗಳಲ್ಲಿ ಬಳಕೆದಾರರಿಗೆ ಹೊಳೆಯುವ ತ್ವಚೆ ದೊರೆಯಲಿದೆ ಎಂಬ ಜಾಹೀರಾತು ನೀಡಿರುವುದು ತಪ್ಪು ದಾರಿಗೆಳೆಯುವಂತದ್ದು ಮತ್ತು ಇಮಾಮಿ ಅಳವಡಿಸಿಕೊಂಡಿರುವ ಅನ್ಯಾಯದ ವ್ಯಾಪಾರ ಅಭ್ಯಾಸವನ್ನು ಅದು ಸಾಬೀತುಪಡಿಸುತ್ತದೆ. ಉತ್ಪನ್ನ ಮತ್ತು ಮಾರಾಟ ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಇಂತಹ ತಂತ್ರವನ್ನು ಇಮಾಮಿ ರೂಪಿಸಿದೆ ಎಂದು ಅದು ಹೇಳಿದೆ.

ಹೀಗಾಗಿ ತಪ್ಪು ದಾರಿಗೆಳೆಯುವ ಎಲ್ಲಾ ಜಾಹೀರಾತು ಮತ್ತು ಉತ್ಪನ್ನಗಳನ್ನು ಇಮಾಮಿ ಕೂಡಲೇ ಹಿಂಪಡೆಯಬೇಕು ಜೊತೆಗೆ 45 ದಿನಗಳಲ್ಲಿ ₹ 15 ಲಕ್ಷ ದಂಡ ಪಾವತಿಸಬೇಕು. ಅದರಲ್ಲಿ ₹ 14.5 ಲಕ್ಷವನ್ನು ದೆಹಲಿ ರಾಜ್ಯ ಗ್ರಾಹಕರ ಕಲ್ಯಾಣ ನಿಧಿಗೆ ಠೇವಣಿಯಾಗಿ ಇಟ್ಟು ಉಳಿದ ₹ 50,000 ಮೊತ್ತವನ್ನು ದೂರುದಾರರಿಗೆ ನೀಡಬೇಕು ಎಂದು ವೇದಿಕೆ ಆದೇಶಿಸಿದೆ.

ಜಿಲ್ಲಾ ಆಯೋಗ ಆದೇಶ ಹೊರಡಿಸುತ್ತಿರುವುದು ಇದು ಎರಡನೇ ಬಾರಿ. 2015ರಲ್ಲಿ ದೂರುದಾರರ ಪರವಾಗಿ ಆಯೋಗ ನೀಡಿದ ತೀರ್ಪನ್ನು ರಾಜ್ಯ ಆಯೋಗ  2017ರಲ್ಲಿ ರದ್ದುಗೊಳಿಸಿತ್ತು. ಹೊಸದಾಗಿ ವಿಚಾರಣೆ ನಡೆಸುವಂತೆ ಅದು ಜಿಲ್ಲಾ ಆಯೋಗಕ್ಕೆ ಸೂಚಿಸಿತ್ತು. ಕಕ್ಷಿದಾರರ ಸಾಕ್ಷ್ಯಗಳು ಮತ್ತಿತರ ಪುರಾವೆಗಳನ್ನು ಆಧರಿಸಿ ಪ್ರಕರಣ ನಿರ್ಧರಿಸಬೇಕು ಎಂದು ಅದು ನಿರ್ದೇಶಿಸಿತ್ತು.

ಇಮಾಮಿ ಲಿಮಿಟೆಡ್ ವಿರುದ್ಧ ನಿಖಿಲ್ ಜೈನ್ ದೂರು ನೀಡಿದ್ದರು. ₹79 ನೀಡಿ ಉತ್ಪನ್ನ ಖರೀದಿಸಿದ ತಾನು ಉತ್ಪನ್ನದಲ್ಲಿ ನೀಡಲಾದ ಸೂಚನೆಯಂತೆ ಅದನ್ನು ಬಳಸಿದರೂ ಫಲಿತಾಂಶ ನೀಡಲು ಅದು ವಿಫಲವಾಗಿದ್ದು ಜಾಹೀರಾತು ದಿಕ್ಕುತಪ್ಪಿಸುವಂತಿದೆ ಎಂದಿದ್ದರು. ಪರಿಹಾರ ರೂಪದಲ್ಲಿ ತಪ್ಪೊಪ್ಪಿಗೆ ಜಾಹೀರಾತನ್ನು ಇಮಾಮಿ ಪ್ರಕಟಿಸಬೇಕು ಅಲ್ಲದೆ , ₹19.9 ಲಕ್ಷ ಪರಿಹಾರ ಹಾಗೂ ₹ 10,000 ವ್ಯಾಜ್ಯ ವೆಚ್ಚ ಒದಗಿಸಬೇಕೆಂದು ಕೋರಿದ್ದರು. ಆದರೆ ಇಮಾಮಿ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿತು, ಉತ್ಪನ್ನವನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದ್ದು ಎಲ್ಲಾ ನಿಯಂತ್ರಕ ಮಾನದಂಡಗಳನ್ನು ಅನುಸರಿಸಲಾಗಿದೆ ಎಂದಿತ್ತು.

ವಾದ ಆಲಿಸಿದ ವೇದಿಕೆ ಫೇರ್‌ ಅಂಡ್‌ ಹ್ಯಾಂಡ್ಸಮ್‌ ಉತ್ಪನ್ನ ಹಾಗೂ ಅದರ ಜಾಹೀರಾತುಗಳು ದಿಕ್ಕು ತಪ್ಪಿಸುವಂತಿವೆ ಎಂದು ತಿಳಿಸಿ ದಂಡ ವಿಧಿಸಿತು.

Kannada Bar & Bench
kannada.barandbench.com