ಬುಕ್‌ ಮಾಡಿದ್ದರೂ ಸಿಗದ ಹೋಟೆಲ್‌: ಮೇಕ್ ಮೈಟ್ರಿಪ್‌ಗೆ ಲಕ್ಷಾಂತರ ರೂಪಾಯಿ ದಂಡ ವಿಧಿಸಿದ ಬೆಂಗಳೂರಿನ ಗ್ರಾಹಕ ವೇದಿಕೆ

‌ದೂರುದಾರರು ತೊಂದರೆ ಅನುಭವಿಸಿರುವುದನ್ನು ಪರಿಗಣಿಸಿದ ವೇದಿಕೆ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಿಂದಾಗಿ ಅವರು ಹೆಚ್ಚಿನ ಬೆಲೆಗೆ ಬೇರೆ ವಸತಿ ಗೃಹದಲ್ಲಿ ತಂಗಬೇಕಾಯಿತು ಎಂದಿದೆ.
Makemytrip
Makemytrip
Published on

ಹೋಟೆಲ್‌ ಬುಕ್‌ ಮಾಡಿದ್ದರೂ ದೊರೆಯದೆ ಲಂಡನ್‌ನಲ್ಲಿ ಗ್ರಾಹಕರೊಬ್ಬರು ತೊಂದರೆ ಅನುಭವಿಸುವಂತಾದ ಹಿನ್ನೆಲೆಯಲ್ಲಿ ಆನ್‌ಲೈನ್‌ ಪ್ರವಾಸ ಕಂಪೆನಿ ಮೇಕ್‌ ಮೈಟ್ರಿಪ್‌ಗೆ ಬೆಂಗಳೂರಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ರೂ 1.45 ಲಕ್ಷ ದಂಡ ವಿಧಿಸಿದೆ.

ಅಲ್ಲದೆ ದೂರುದಾರರು ಬೇರೆಡೆ ಹೋಟೆಲ್ ಬುಕ್ ಮಾಡಿದ್ದಕ್ಕಾಗಿ ಹೆಚ್ಚುವರಿಯಾಗಿ ನೀಡಿದ್ದ ರೂ 4.34 ಲಕ್ಷ ಪಾವತಿಸುವಂತೆಯೂ ಅಧ್ಯಕ್ಷೆ ಎಂ.ಶೋಭಾ , ಸದಸ್ಯರಾದ ಕೆ.ಅನಿತಾ ಶಿವಕುಮಾರ್ ಮತ್ತು ಸುಮಾ ಅನಿಲ್ ಕುಮಾರ್ ಅವರನ್ನೊಳಗೊಂಡ ವೇದಿಕೆ ಸೂಚಿಸಿತು.

‌ದೂರುದಾರರು ತೊಂದರೆ ಅನುಭವಿಸಿರುವುದನ್ನು ಪರಿಗಣಿಸಿದ ವೇದಿಕೆ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಿಂದಾಗಿ ಅವರು ಹೆಚ್ಚಿನ ಬೆಲೆಗೆ ಬೇರೆ ವಸತಿ ಗೃಹದಲ್ಲಿ ತಂಗಬೇಕಾಯಿತು ಎಂದಿದೆ.

ದೂರುದಾರರು ವಸತಿ ವ್ಯವಸ್ಥೆ ಪಡೆಯುವುದರಲ್ಲಿ ತೊಂದರೆ ಅನುಭವಿಸಿದ್ದು ಅನ್ಯಾಯ. ಅವರ ವಸತಿಗೆ ಮೇಕ್‌ ಮೈಟ್ರಿಪ್‌ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ದೂರುದಾರರು ಹೋಟೆಲ್‌ ಕೆಫೆ ರಾಯಲ್‌ನಲ್ಲಿ ರೂ 6,58,740 ಪಾವತಿಸಿ ಉಳಿದುಕೊಂಡರು. ಪ್ರತಿ ವರ್ಷ ಜೂನ್ ಕೊನೆಯ ವಾರದಲ್ಲಿ ಲಂಡನ್ನಲ್ಲಿ ವಿಂಬಲ್ಡನ್ ಟೆನಿಸ್ ಪಂದ್ಯಾವಳಿ ನಡೆಯುವುದರಿಂದ ಅಷ್ಟು ಭಾರೀ ಮೊತ್ತ ತೆತ್ತು ಅವರು ಆಗ ಉಳಿದುಕೊಳ್ಳುವಂತಾಯಿತು ಎಂದು ಜನವರಿ 1ರಂದು ನೀಡಿದ ಆದೇಶದಲ್ಲಿ ಅದು ತಿಳಿಸಿದೆ.

ನಾಲ್ಕು ತಿಂಗಳು ಮುಂಚಿತವಾಗಿ ಹೋಟೆಲ್ ಕಾಯ್ದಿರಿಸಿ ಪೂರ್ಣ ಮೊತ್ತವನ್ನು ಪಾವತಿಸಿದರೂ, ಮೇಕ್ ಮೈಟ್ರಿಪ್ ಹೋಟೆಲ್‌ ಕಾಯ್ದಿರಿಸಲು ವಿಫಲವಾಗಿತ್ತು. ಇದರಿಂದ ತಾವು ಪರದಾಡುವಂತಾಗಿದ್ದಲ್ಲದೆ ಅಧಿಕ ಹಣ ತೆರುವಂತಾಗಿತ್ತು ಎಂದು ಮಯೂರ್‌ ಭರತ್‌ ಎಂಬುವವರು ಗ್ರಾಹಕ ವೇದಿಕೆಯ ಕದ ತಟ್ಟಿದ್ದರು.

ಬುಕಿಂಗ್‌ ಮೊತ್ತ ತನಗೆ ಮರುಪಾವತಿಯಾಗಿದೆಯಾದರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ತಾವು ಹೆಚ್ಚುವರಿ ಹಣ ತೆರುವಂತಾದದ್ದಕ್ಕೆ ಪರಿಹಾರ ದೊರೆಯಲಿಲ್ಲ ಎಂದು ಅವರು ಆಯೋಕ್ಕೆ ಮಾಹಿತಿ ನೀಡಿದ್ದರು.

ಬೇರೊಂದು ಹೋಟೆಲ್‌ ಕಾಯ್ದಿರಿಸಲು ತಗುಲಿದ ಹೆಚ್ಚುವರಿ ವೆಚ್ಚ ಭರಿಸಲು ಮೇಕ್‌ ಮೈ ಟ್ರಿಪ್‌ಗೆ ನಿರ್ದೇಶನ ನೀಡಬೇಕು. ಅಲ್ಲದೆ ತಾವು ಅನುಭವಿಸಿದ ತೊಂದರೆ, ಮಾನಸಿಕ ಯಾತನೆ ಹಾಗೂ ಒತ್ತಡಕ್ಕೆ ಪರಿಹಾರವಾಗಿ ರೂ 10,000 , ದಾವೆ ವೆಚ್ಚವಾಗಿ ರೂ 1,00,000 ಪಾವತಿಸಲು ಆದೇಶಿಸುವಂತೆ ಅವರು ಕೋರಿದ್ದರು.

ಆದರೆ ಹೋಟೆಲ್‌ ವ್ಯವಸ್ಥಾಪಕರು ಕೋಣೆ ಮೀಸಲಿಡದೇ ಇರುವುದಕ್ಕೆ ತನ್ನನ್ನು ಹೊಣೆಗಾರನನ್ನಾಗಿ ಮಾಡುವಂತಿಲ್ಲ ಎಂದು ಮೇಕ್‌ ಮೈ ಟ್ರೀಪ್‌ ವಾದಿಸಿತ್ತು. ಅಲ್ಲದೆ ಬುಕಿಂಗ್‌ ಮೊತ್ತವನ್ನು ವಾಪಸ್‌ ಮಾಡಿರುವುದರ ಜೊತೆಗೆ ರೂ 50,000 ಪರಿಹಾರ ಕೂಡ ನೀಡಲಾಗಿದೆ. ಇದನ್ನು ದೂರುದಾರರು ನಿರಾಕರಿಸಿರುವುದರಿಂದ ದಂಡದೊಂದಿಗೆ ಅವರ ಅರ್ಜಿ ವಜಾಗೊಳಿಸುವಂತೆ ಅದು ಕೋರಿತ್ತು.

ಆಯೋಜಕನಾಗಿ ಕಾರ್ಯನಿರ್ವಹಿಸುವ ಮೇಕ್‌ ಮೈ ಟ್ರಿಪ್‌ನ ವಾದವು ಸಾಕಾಗುವುದಿಲ್ಲ . ಪ್ರಯಾಣಿಸುವಾಗ ಗ್ರಾಹಕರು ಅಂತಹ ಸೌಲಭ್ಯ ಒದಗಿಸುವವರ ಮೇಲೆ ವಿಶ್ವಾಸ ಇಟ್ಟಿರುತ್ತಾರೆ. ಹೋಟೆಲ್ ಮತ್ತು ಗ್ರಾಹಕರ ನಡುವೆ ಒಪ್ಪಂದದ ಗೌಪ್ಯತೆ ಇಲ್ಲದಿದ್ದಾಗ, ಉಂಟಾದ ಲೋಪಗಳಿಗೆ ಸೌಲಭ್ಯ ಒದಗಿಸುವವರೇ ಉತ್ತರಿಸಬೇಕು ಎಂದು ಆಯೋಗ ಹೇಳಿದೆ.

ಬುಕಿಂಗ್ ಮೊತ್ತವನ್ನು ಮರುಪಾವತಿಸಲಾಗಿದ್ದರೂ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ದೂರುದಾರರಿಗೆ ಮೂಲ ಬುಕಿಂಗ್‌ಗಿಂತಲೂ ₹ 4,34,420 ಹೆಚ್ಚು ವೆಚ್ಚವಾಗಿದ್ದು ಮೇಕ್ ಮೈಟ್ರಿಪ್ ಕೇವಲ ರೂ 37,386 ಪರಿಹಾರವಾಗಿ ನೀಡಿದೆ ಎಂದು ಅದು ಗಮನಿಸಿದೆ.

ಆದ್ದರಿಂದ, ಮೇಕ್ ಮೈಟ್ರಿಪ್ ಉಳಿದ 4,34,420 ರೂಪಾಯಿಗಳನ್ನು ಮರುಪಾವತಿಸುವಂತೆ ವೇದಿಕೆ ನಿರ್ದೇಶನ ನೀಡಿತು. ಗ್ರಾಹಕರಿಗೆ ಪರಿಹಾರವಾಗಿ 1,00,000 ರೂ.ಗಳನ್ನು ಮತ್ತು ದಾವೆ ವೆಚ್ಚವಾಗಿ 20,000 ರೂ.ಗಳನ್ನು ಪಾವತಿಸುವಂತೆ ಅದು ನಿರ್ದೇಶಿಸಿತು.

ಇದಲ್ಲದೆ, ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 39 (1) (ಜಿ) ಅಡಿಯಲ್ಲಿ ದಂಡನಾತ್ಮಕ ಹಾನಿಗಾಗಿ 25,000 ರೂ.ಗಳನ್ನು ಗ್ರಾಹಕ ಕಲ್ಯಾಣ ನಿಧಿಗೆ ಪಾವತಿಸುವಂತೆಯೂ ಮೇಕ್ ಮೈಟ್ರಿಪ್‌ಗೆ ನಿರ್ದೇಶನ ನೀಡಲಾಯಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Mayur Bharath vs MakeMyTrip (India) Pvt Ltd.pdf
Preview
Kannada Bar & Bench
kannada.barandbench.com