ನಿಗದಿತ ತೂಕಕ್ಕಿಂತಲೂ ಕಡಿಮೆ ಬಿಸ್ಕೆಟ್ ಮಾರಾಟ: ಬ್ರಿಟಾನಿಯಾಗೆ ₹60 ಸಾವಿರ ದಂಡ ವಿಧಿಸಿದ ಕೇರಳದ ಗ್ರಾಹಕ ವೇದಿಕೆ

ಪ್ಯಾಕೇಜ್ ಮಾಡಿದ ಸರಕುಗಳ ನಿವ್ವಳ ಪ್ರಮಾಣದ ಬಗೆಗಿನ ನಿಯಮಾವಳಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕೇರಳ ಕಾನೂನು ಮಾಪನಶಾಸ್ತ್ರ ಇಲಾಖೆ ನಿಯಂತ್ರಕರಿಗೆ ತ್ರಿಶೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ನಿರ್ದೇಶಿಸಿದೆ.
Britania Nutri Choice Thin Arrow Root Biscuits with Consumer Protection
Britania Nutri Choice Thin Arrow Root Biscuits with Consumer Protection

ಪ್ಯಾಕೇಜ್‌ನಲ್ಲಿ ನಮೂದಿಸಲಾಗಿದ್ದ 300 ಗ್ರಾಂ ಬದಲಿಗೆ 52 ಗ್ರಾಂ ಕಡಿಮೆ ತೂಕದ ಬಿಸ್ಕೆಟ್‌ ಪ್ಯಾಕೆಟ್‌ಗಳನ್ನು ಮಾರಾಟ ಮಾಡಿದ್ದಕ್ಕಾಗಿ ಗ್ರಾಹಕರಿಗೆ ₹ 60,000 ಪರಿಹಾರ ನೀಡುವಂತೆ ಪ್ರಸಿದ್ಧ ಬಿಸ್ಕೆಟ್‌ ತಯಾರಿಕಾ ಕಂಪೆನಿ ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಸ್ಥಳೀಯ ಬೇಕರಿಯೊಂದಕ್ಕೆ ಕೇರಳದ ತ್ರಿಶೂರ್‌ನಲ್ಲಿರುವ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ.

ಪ್ಯಾಕೆಟ್‌ಗಳ ಮೇಲೆ ಬರೆದಿರುವ 300 ಗ್ರಾಂ ಘೋಷಿತ ಪ್ರಮಾಣಕ್ಕೆ ಹೋಲಿಸಿದರೆ ಬಿಸ್ಕತ್ತು ಪ್ಯಾಕೆಟ್‌ಗಳ ತೂಕದಲ್ಲಿ ಗಮನಾರ್ಹ ಕೊರತೆಯಿದೆ ಎಂದು ಅಧ್ಯಕ್ಷ ಸಿ ಟಿ ಸಾಬು,  ಸದಸ್ಯರಾದ ಶ್ರೀಜಾ ಎಸ್ ಮತ್ತು ರಾಮ್ ಮೋಹನ್ ಆರ್ ಅವರನ್ನೊಳಗೊಂಡ ಪೀಠ ತಿಳಿಸಿತು.

ಬ್ರಿಟಾನಿಯಾ ತಯಾರಿಸಿದ "ಬ್ರಿಟಾನಿಯಾ ನ್ಯೂಟ್ರಿ ಚಾಯ್ಸ್ ಥಿನ್ ಆರೋ ರೂಟ್ ಬಿ್ಸ್ಕೆಟ್‌"ನ ಎರಡು ಪ್ಯಾಕೆಟ್‌ಗಳನ್ನು ತಲಾ ₹ 40ಕ್ಕೆ ಖರೀದಿಸಿದ ಜಾರ್ಜ್ ಥಟ್ಟಿಲ್ಎಂಬುವವರ ದೂರು ಆಧರಿಸಿ ಈ ಆದೇಶ ರವಾನಿಸಲಾಗಿದೆ.

ಪ್ಯಾಕೇಜಿಂಗ್‌ನಲ್ಲಿ ತಯಾರಕರು ಮುದ್ರಿಸಿದಂತೆ ತಲಾ 300 ಗ್ರಾಂ ತೂಕವಿದೆ ಎಂಬ ನಂಬಿಕೆಯೊಂದಿಗೆ ಜಾರ್ಜ್‌ ತ್ರಿಶೂರ್‌ನ ಚುಕ್ಕಿರಿ ರಾಯಲ್ ಬೇಕರಿಯಿಂದ ಬಿಸ್ಕತ್‌ಗಳನ್ನು ಖರೀದಿಸಿದರು. ಆದರೆ ಪ್ಯಾಕೆಟ್‌ಗಳ ತೂಕ ಕ್ರಮವಾಗಿ 268 ಗ್ರಾಂ ಮತ್ತು 248 ಗ್ರಾಂ ತೂಕ ಇರುವುದು ತಿಳಿದುಬಂದಿತ್ತು. ಜಾರ್ಜ್ ಅವರು ತ್ರಿಶೂರ್‌ನ ಕಾನೂನು ಮಾಪನಶಾಸ್ತ್ರದ ಸಂಚಾರಿ ದಳದ ಸಹಾಯಕ ನಿಯಂತ್ರಕರಿಗೆ ದೂರು ಸಲ್ಲಿಸಿದರು. ನಂತರ ತೂಕ ಕಡಿಮೆ ಇರುವುದನ್ನು ನಿಯಂತ್ರಕರು ದೃಢಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ತ್ರಿಶೂರ್‌ನಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋದ ಜಾರ್ಜ್‌ ತನಗೆ ಉಂಟಾದ ಆರ್ಥಿಕ, ದೈಹಿಕ ಹಾಗೂ ಮಾನಸಿಕ ನಷ್ಟಕ್ಕೆ ಪರಿಹಾರ ಕೋರಿದರು.

ನೋಟಿಸ್‌ ನೀಡಿದ ನಂತರವೂ, ಬ್ರಿಟಾನಿಯಾ ಮತ್ತು ಬೇಕರಿ ತಮ್ಮ ಲಿಖಿತ ಹೇಳಿಕೆ ನೀಡಲು ವಿಫಲವಾಗಿವೆ ಎಂದು ಗಮನಿಸಿದ ಆಯೋಗ ಈ ಏಕಪಕ್ಷೀಯ ಆದೇಶ ನೀಡಿತು.

ತಯಾರಕರು ಮತ್ತು ಮಾರಾಟಗಾರರಿಬ್ಬರೂ ಅನ್ಯಾಯದ ವ್ಯಾಪಾರದ ಅಭ್ಯಾಸದಲ್ಲಿ ತೊಡಗಿದ್ದು ಇದು ಗ್ರಾಹಕ ಸಂರಕ್ಷಣಾ ಕಾಯಿದೆ ಮತ್ತು ಕಾನೂನು ಮಾಪನಶಾಸ್ತ್ರ ಕಾಯಿದೆ 2009ರ ಸೆಕ್ಷನ್ 30ರ (ಪ್ರಮಾಣಿತ ತೂಕ ಅಥವಾ ಅಳತೆಗೆ ವಿರುದ್ಧವಾದ ವಹಿವಾಟಿಗೆ ದಂಡ) ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.

ಆದ್ದರಿಂದ, ದೂರುದಾರರರಿಗೆ ಪರಿಹಾರವಾಗಿ ₹ 50,000 ಮತ್ತು ಅವರು ಭರಿಸುವ ವ್ಯಾಜ್ಯ ವೆಚ್ಚಕ್ಕಾಗಿ ₹ 10,000 ಮೊತ್ತ ಪಾವತಿಸಲು ಪ್ರತಿವಾದಿಗಳಿಗೆ ಆಯೋಗ ಸೂಚಿಸಿತು. ಜೊತೆಗೆ ಪ್ಯಾಕೇಜ್‌ ಮಾಡಿದ ಸರಕುಗಳ ನಿವ್ವಳ ಪ್ರಮಾಣದ ಬಗೆಗಿನ ನಿಯಮಾವಳಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕೇರಳ ಕಾನೂನು ಮಾಪನಶಾಸ್ತ್ರ ಇಲಾಖೆ ನಿಯಂತ್ರಕರಿಗೆ ನಿರ್ದೇಶಿಸಿತು.

Kannada Bar & Bench
kannada.barandbench.com