ಓಲಾ ಎಲೆಕ್ಟ್ರಿಕ್‌ಗೆ ಶೋಕಾಸ್ ನೋಟಿಸ್ ನೀಡಿದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ
ತನ್ನ ಸೇವೆಯ ಕುರಿತಾಗಿ ಗ್ರಾಹಕರು ನೀಡಿದ್ದ ಹಲವು ದೂರುಗಳಿಗೆ ಸಂಬಂಧಿಸಿದಂತೆ ಓಲಾ ಎಲೆಕ್ಟ್ರಿಕ್‌ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಶೋಕಾಸ್ ನೋಟಿಸ್ ನೀಡಿದೆ.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ಮತ್ತು ಬಾಂಬೆ ಷೇರುಪೇಟೆ ಸೂಚ್ಯಂಕ (ಬಿಎಸ್ಇ) ಈ ಎರಡಕ್ಕೂ ಓಲಾ ಕಂಪನಿ ಅಕ್ಟೋಬರ್ 7ರಂದು ಸಲ್ಲಿಸಿರುವ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತನಗೆ ನೀಡಿರುವ ನೋಟಿಸ್ ವಿವರವನ್ನು ಬಹಿರಂಗಪಡಿಸಿದೆ.
ವಾಹನ ವಿತರಣೆಯಲ್ಲಿ ವಿಳಂಬ (1,899 ದೂರುಗಳು), ರಿಪೇರಿ ಮತ್ತು ಸರ್ವೀಸ್‌ಗೆ ಸಂಬಂಧಿಸಿದ ದೂರುಗಳು (3,364 ದೂರುಗಳು) ಭರವಸೆ ನೀಡಿದ ಸೇವೆ ಒದಗಿಸಲು ವೈಫಲ್ಯ (1,459ದೂರುಗಳು) ಹಾಗೂ ವಾಹನದ ತಾಂತ್ರಿಕ ದೋಷ ಸೇರಿಂದತೆ ಗ್ರಾಹಕರು ಸಲ್ಲಿಸಿದ್ದ ವಿವಿಧ ಅಹವಾಲುಗಳನ್ನು ಆಧರಿಸಿ ಈ ನೋಟಿಸ್ ನೀಡಲಾಗಿದೆ. ಉಳಿದ ದೂರುಗಳಲ್ಲಿ ಸಮಸ್ಯೆಗೆ ಅಸಮರ್ಪಕ ಪರಿಹಾರ, ದಾರಿತಪ್ಪಿಸುವ ಜಾಹೀರಾತು ಮತ್ತು ಬುಕಿಂಗ್ ರದ್ದತಿಗೆ ಹಣ ಮರುಪಾವತಿ ಮಾಡದಿರುವುದು ಕೂಡ ಸೇರಿವೆ.
ನೋಟಿಸ್‌ಗೆ ಪ್ರತಿಕ್ರಿಯಿಸಲು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಲು ಓಲಾ ಎಲೆಕ್ಟ್ರಿಕ್‌ಗೆ ಸಿಸಿಪಿಎ 15 ದಿನಗಳ ಕಾಲಾವಕಾಶ ನೀಡಿದೆ. ನಿಗದಿತ ಕಾಲಮಿತಿಯೊಳಗೆ ಪ್ರಾಧಿಕಾರದ ಸೂಚನೆ ಪಾಲಿಸುವುದಾಗಿ ಕಂಪನಿ ದೃಢಪಡಿಸಿದೆ.
ಇತ್ತೀಚೆಗೆ, ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಗುಣಮಟ್ಟ, ಅದರ ಸೇವಾ ನ್ಯೂನತೆ ಮತ್ತು ಪರಿಹಾರ ಕಾಣದ ಗ್ರಾಹಕರ ದೂರುಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಓಲಾ ಸಂಸ್ಥಾಪಕ ಭವೀಶ್ ಅಗರ್‌ವಾಲ್ ಮತ್ತು ಹಾಸ್ಯ ಕಲಾವಿದ ಕುನಾಲ್ ಕಮ್ರಾ ನಡುವೆ ವಾಕ್ಸಮರ ನಡೆದಿತ್ತು.

