![[ಸ್ಮಾರ್ಟ್ ಮೀಟರ್] ಹೆಚ್ಚಿನ ಹೊರೆ ವಿಧಿಸಿ ಗ್ರಾಹಕರ ನರಳಿಸಬೇಡಿ: ರಾಜ್ಯ ಸರ್ಕಾರದ ಕಿವಿ ಹಿಂಡಿದ ಹೈಕೋರ್ಟ್](http://media.assettype.com/barandbench-kannada%2F2025-04-24%2F9mgn5yic%2FWhatsApp-Image-2025-04-24-at-14.28.22.jpeg?w=480&auto=format%2Ccompress&fit=max)
ನೆರೆಯ ರಾಜ್ಯಗಳ ಹೋಲಿಕೆಯಲ್ಲಿ ಸ್ಮಾರ್ಟ್ ಮೀಟರ್‌ಗೆ ಹೆಚ್ಚಿನ ದರ ವಿಧಿಸಿರುವ ರಾಜ್ಯದ ನಡೆಗೆ ಆಕ್ಷೇಪಿಸಿರುವ ಕರ್ನಾಟಕ ಹೈಕೋರ್ಟ್ ಸಾರ್ವಜನಿಕರು ನರಳುವಂತೆ ಮಾಡಬೇಡಿ ಎಂದು ರಾಜ್ಯ ಸರ್ಕಾರದ ಕಿವಿ ಹಿಂಡಿದೆ.
ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವಾಗ ಕಡ್ಡಾಯವಾಗಿ ಸ್ಮಾರ್ಟ್ ಮೀಟರ್ ಅಳಡವಡಿಸಿಕೊಳ್ಳಬೇಕು ಎಂದು ಷರತ್ತು ವಿಧಿಸಿ 2025ರ ಫೆಬ್ರವರಿ 13ರಂದು ಬೆಸ್ಕಾಂ ಹೊರಡಿಸಿರುವ ಮಾರ್ಗಸೂಚಿಯನ್ನು ರದ್ದುಪಡಿಸಬೇಕು ಎಂದು ಕೋರಿ ದೊಡ್ಡಬಳ್ಳಾಪುರದ ಪಿ ಎಂ ಹರೀಶ್ ಮತ್ತು ಎಂ ಜಯಲಕ್ಷ್ಮಿ ಎಂಬವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ನಡೆಸಿತು.
ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ದರ ಹೆಚ್ಚು ನಿಗದಿ ಮಾಡಿದ್ದೀರಲ್ಲವೇ? ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ನಿಯಮದಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆಯಲ್ಲವೇ? ಎಂದು ರಾಜ್ಯ ಸರ್ಕಾರ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯನ್ನು (ಬೆಸ್ಕಾಂ) ನ್ಯಾಯಾಲಯ ಪ್ರಶ್ನಿಸಿತು. ಇದೇ ವೇಳೆ, ಹೆಚ್ಚಿನ ದರ ನಿಗದಿಪಡಿಸಿ ಸಾರ್ವಜನಿಕರು ನರಳುವಂತೆ ಮಾಡಬೇಡಿ ಎಂದು ಮೌಖಿಕವಾಗಿ ಸಲಹೆ ನೀಡಿತು.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮಾರ್ಗಸೂಚಿಗಳಿಗೆ ಅನುಗುಣವಾಗಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಬೇಕು. ಪ್ರೀ ಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಎಂದು ಅನಗತ್ಯವಾಗಿ ಗ್ರಾಹಕರನ್ನು ಗೊಂದಲದಗೂಡಿಗೆ ತಳ್ಳಬಾರದು. ಮೂರು ಫೇಸ್ ಸ್ಮಾರ್ಟ್ ಮೀಟರ್ ಗೆ 10 ಸಾವಿರ ರೂಪಾಯಿ ವಿಧಿಸಲಾಗುತ್ತಿದೆ. ಪಕ್ಕದ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ದರ 900 ರೂಪಾಯಿದೆ ಇದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಏಕೆ 10 ಸಾವಿರ ರೂಪಾಯಿ? ಎಂದು ಪ್ರಶ್ನಿಸಿದ ಪೀಠವು ಈ ಕುರಿತು ಜುಲೈ 9ರಂದು ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿದೆ.
ಅರ್ಜಿದಾರರ ಪರ ವಕೀಲೆ ಲಕ್ಷ್ಮಿ ಐಯ್ಯಂಗಾರ್ ಅವರು “ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಮಾಡಿ ಹೊರಡಿಸಿರುವ ಆದೇಶ ಕೆಇಆರ್‌ಸಿ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಮೇಲಾಗಿ ಸ್ಮಾರ್ಟ್ ಮೀಟರ್ ದರವೂ ಹೆಚ್ಚಿದ್ದು, ಗ್ರಾಹಕರಿಗೆ ಹೊರೆಯಾಗಲಿದೆ. ಹೊಸದಾಗಿ ವಿದ್ಯುತ್ ಸಂರ್ಪಕ ಪಡೆಯಲು ಕಡ್ಡಾಯವಾಗಿ ಸ್ಮಾರ್ಟ್ ಮೀಟರ್ ಅಳವಡಿಸಬೇಕು ಎಂದು 2025ರ ಫೆಬ್ರವರಿ 13ರಂದು ಹೊರಡಿಸಿರುವ ಮಾರ್ಗಸೂಚಿ ಹಾಗೂ ಆ ಕುರಿತು ಸೂಚಿಸಿ ಅರ್ಜಿದಾರರಿಗೆ 2025ರ ಏಪ್ರಿಲ್ 25ರಂದು ಬೆಸ್ಕಾಂ ನೀಡಿರುವ ಪತ್ರವನ್ನು ರದ್ದುಪಡಿಸಬೇಕು” ಎಂದು ಕೋರಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟ ಅವರು “ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರದಲ್ಲಿ ಕೆಇಆರ್‌ಸಿ ಮಾರ್ಗಸೂಚಿಗೆ ಅನುಗುಣವಾಗಿಯೇ ರಾಜ್ಯ ಸರ್ಕಾರ ಹಾಗೂ ಬೆಸ್ಕಾಂ ನಡೆದುಕೊಳ್ಳುತ್ತಿದೆ. ಹೊಸದಾಗಿ ಯಾರು ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಿಕೊಳ್ಳುತ್ತಾರೆಯೋ ಅವರಿಗೆ ಮಾತ್ರವೇ ಪರಿಪಾಲನಾ ನಿರ್ದೇಶನಗಳು ಅನ್ವಯವಾಗಲಿವೆ. ಅಷ್ಟಕ್ಕೂ ಇದು ಪೋಸ್ಟ್ ಪೇಯ್ಡ್ ಆಗಿರುತ್ತದೆ” ಎಂದು ಸಮಜಾಯಿಷಿ ನೀಡಿದರು.
ಈ ವಾದ ಒಪ್ಪದ ಪೀಠವು, ಪ್ರೀ ಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಯಾವುದೇ ರೀತಿಯ ಶುಲ್ಕ ಪಾವತಿಯಾದರೂ ಸರಿಯೇ. ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಎಂಬ ನಿಯಮ ಮಾತ್ರ ಗ್ರಾಹಕರಿಗೆ ಹೊರೆಯಾಗಬಾರದು ಎಂದು ಹೇಳಿತು. ನಿಯಮಗಳಲ್ಲಿ ಗೊಂದಲ ಇರುವ ಕುರಿತು ರಾಜ್ಯ ಸರ್ಕಾರವು ಅಫಿಡವಿಟ್ ಹಾಕಿದರೆ ಈ ಸಮಸ್ಯೆಯೇ ಇರುವುದಿಲ್ಲ ಎಂದಿತು. ಅಂತಿಮವಾಗಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.