ಕನ್ನಡ ಮಠದ ದೇವಸ್ಥಾನಗಳಿಗೆ ತಸ್ತೀಕ್‌ ಕೋರಿಕೆ: ನ್ಯಾಯಾಂಗ ನಿಂದನೆ ಆರೋಪದಡಿ ಕಂದಾಯ ಇಲಾಖೆಗೆ ನೋಟಿಸ್‌

ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಹೋಬಳಿಯ ಬೆಟ್ಟಗೇರಿ ಪೋಸ್ಟ್‌ ವ್ಯಾಪ್ತಿಯಲ್ಲಿರುವ ಕನ್ನಡ ಮಠದ ಪೀಠಾಧಿಪತಿ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ನಡೆಸಿತು.
Karnataka High Court
Karnataka High Court
Published on

ಕೊಡಗಿನ ‘ಕನ್ನಡ ಮಠʼದ ವ್ಯಾಪ್ತಿಗೆ ಒಳಪಟ್ಟ ದೇವಸ್ಥಾನಗಳ ದೈನಂದಿನ ಕಾರ್ಯನಿರ್ವಹಣೆಗೆ ತಸ್ತೀಕ್‌ ಕೋರಿಕೆ ವಿಚಾರದಲ್ಲಿ ತನ್ನ ಆದೇಶವನ್ನು ಪಾಲಿಸುವಲ್ಲಿ ವಿಫಲವಾಗಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಹಿತ ನಾಲ್ವರು ಅಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸಿ ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ತಸ್ತೀಕ್‌ ವಿಚಾರವಾಗಿ ಹೈಕೋರ್ಟ್‌ ಹೊರಡಿಸಿದ್ದ ಆದೇಶ ಪಾಲಿಸುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಹೋಬಳಿಯ ಬೆಟ್ಟಗೇರಿ ಪೋಸ್ಟ್‌ ವ್ಯಾಪ್ತಿಯಲ್ಲಿರುವ ಕನ್ನಡ ಮಠದ ಪೀಠಾಧಿಪತಿ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಕೆ ಎ ಮಹೇಶ್‌ ಅವರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ವಿ ರಶ್ಮಿ, ಮುಜರಾಯಿ ಇಲಾಖೆ ಆಯುಕ್ತ ಎಂ ವಿ ವೆಂಕಟೇಶ್‌, ಕೊಡಗಿನ ಜಿಲ್ಲಾಧಿಕಾರಿ ವೆಂಕಟರಾಜ ಮತ್ತು ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಎಚ್‌ ಎನ್‌ ರಾಮಚಂದ್ರ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿದೆ.

ಕನ್ನಡ ಮಠದ ವ್ಯಾಪ್ತಿಗೆ ಒಳಪಟ್ಟ ದೇವಸ್ಥಾನಗಳ ದೈನಂದಿನ ಪೂಜಾ ಕೈಂಕರ್ಯಗಳ ನಿರ್ವಹಣೆಗೆ ತಸ್ತೀಕ್‌ ಮೊತ್ತವನ್ನು ನೀಡುವ ಬಗ್ಗೆ ನಿರ್ದೇಶನ ನೀಡುವಂತೆ ಕೋರಿ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಅರ್ಜಿದಾರರು 2022ರ ಅಕ್ಟೋಬರ್ 7ರಂದು ನೀಡಿರುವ ಮನವಿಯ ಬಗ್ಗೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿವಾದಿಗಳಾದ ಕಂದಾಯ, ಮುಜರಾಯಿ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶಿಸಿತ್ತು. ಅಂತೆಯೇ ಇದರ ವರದಿಯನ್ನು ಎಂಟು ವಾರಗಳ ಒಳಗಾಗಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಒಪ್ಪಿಸತಕ್ಕದ್ದು ಎಂದು ಸಂಬಂಧಿಸಿದ ಪ್ರತಿವಾದಿ ಅಧಿಕಾರಿಗಳಿಗೆ 2023ರ ಸೆಪ್ಟೆಂಬರ್ 25ರಂದು ಆದೇಶಿಸಿತ್ತು.

ಈ ಆದೇಶವನ್ನು ಪಾಲನೆ ಮಾಡುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಮತ್ತು ಈ ಸಂಬಂಧಿಸಿದ ಅಧಿಕಾರಿಗಳು ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

Kannada Bar & Bench
kannada.barandbench.com